World Aids Day: ಗರ್ಭಿಣಿಯರಲ್ಲಿ ಎಚ್‌ಐವಿ: ಬಳ್ಳಾರಿ ಜಿಲ್ಲೆಯಲ್ಲೇ ಅತ್ಯಧಿಕ
* ಪುರುಷರಿಂದ ಮಹಿಳೆಯರಿಗೆ ಹರಡಿದ HIV ಸೋಂಕು
* 2342 ಲೈಂಗಿಕ ಕಾರ್ಯಕರ್ತರಿಗೆ ಹೆಚ್‌ಐವಿ ಪರೀೕಕ್ಷೆ
* ಏಡ್ಸ್ ನಿಯಂತ್ರಣ ಕಾರ್ಯದಲ್ಲಿ ಶ್ರಮಿಸಿದ ಮಹನೀಯರಿಗೆ ಸನ್ಮಾನ
ಬಳ್ಳಾರಿ(ಡಿ.01): ಎಚ್‌ಐವಿ(HIV) ಸೊಂಕಿತರ ಸಾಮಾನ್ಯ ಪ್ರಮಾಣದಲ್ಲಿ ಬಳ್ಳಾರಿ(Ballari) ಜಿಲ್ಲೆಯು ಇಡೀ ರಾಜ್ಯದಲ್ಲಿ 7ನೇ ಸ್ಥಾನದಲ್ಲಿದೆ. ಗರ್ಭಿಣಿಯರ(Pregnent) ಸೋಂಕಿನ ಪ್ರಮಾಣದಲ್ಲಿ ಮೊದಲನೇ ಸ್ಥಾನದಲ್ಲಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಚ್.ಎಲ್.ಜನಾರ್ದನ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ ತಿಳಿಸಿದರು.
ಡಿಎಚ್‌ಒ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ 2017ರ ಅಕ್ಟೋಬರ್‌ನಿಂದ 2021ರ ವರೆಗೆ ಒಟ್ಟಾರೆ 459034 ಜನರು ಐ.ಸಿ.ಟಿ.ಸಿ ಕೇಂದ್ರಗಳಲ್ಲಿ(ICTR Center) ಆಪ್ತ ಸಮಾಲೋಚನೆ(Counseling) ಪಡೆದು ರಕ್ತ ಪರೀಕ್ಷೆಗೆ ಒಳಪಟ್ಟಿದ್ದು, ಅವರಲ್ಲಿ 1782 ಜನರಿಗೆ ಹೆಚ್‌ಐವಿ ಸೋಂಕು ಇರುವುದು ದೃಢಪಟ್ಟಿದೆ. ಎಚ್‌ಐವಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ನಿಯಂತ್ರಣಕ್ಕೆ ಬರುತ್ತಿದೆ. ಸಾಮಾನ್ಯ ಎಚ್‌ಐವಿ ಸೋಂಕಿತರ ಪಟ್ಟಿಯಲ್ಲಿ ಬಳ್ಳಾರಿ ಜಿಲ್ಲೆ 7ನೇ ಸ್ಥಾನದಲ್ಲಿದೆ. ಗರ್ಭಿಣಿಯರಲ್ಲಿ ಸೋಂಕಿನ ಪ್ರಮಾಣ ಏರಿಕೆ ಕಂಡು ಬಂದಿದೆ. ಪುರುಷರಿಂದ ಮಹಿಳೆಯರಿಗೆ ಸೋಂಕು ಹರಡಿದೆ ಎಂದು ಹೇಳಿದರು.
World AIDS Day: ಆರೋಗ್ಯ ಇಲಾಖೆಗೆ ಸವಾಲಾದ ಎಚ್‌ಐವಿ ಪೀಡಿತರು..!
ಬಳ್ಳಾರಿ ಜಿಲ್ಲೆಯಲ್ಲಿ 2 ಎಆರ್‌ಟಿ ಕೇಂದ್ರಗಳು ಮತ್ತು 7 ಲಿಂಕ್ ಎಆರ್‌ಟಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. 1963 ಸೋಂಕಿತರಿಗೆ ಎಆರ್‌ಟಿ ದಾಖಲೆ ಮಾಡಿಕೊಂಡಿದ್ದು. ಇವರಲ್ಲಿ ಪ್ರಸ್ತುತ 1339 ಜನರು ಚಿಕಿತ್ಸೆಯನ್ನು ಮುಂದುವರಿಸಿದ್ದು, ಸುಮಾರು 624 ಜನರು ಇದುವರೆಗೆ ಸಾವನ್ನಪ್ಪಿದ್ದಾರೆ.
ಎಚ್‌ಐವಿ ಸೋಂಕಿತ ಗರ್ಭೀಣಿಗೆ ಜನಿಸಿದ ಮಕ್ಕಳಿಗೆ 6 ವಾರ, 6 ತಿಂಗಳು, 12 ತಿಂಗಳು ಮತ್ತು 18 ತಿಂಗಳ ಅನುಸರಣೆ ಮಾಡಿ ಡಿಬಿಎಸ್ ಪರೀಕ್ಷೆಯನ್ನು(DBS Test) ಐಸಿಟಿಸಿ ಕೇಂದ್ರಗಳಲ್ಲಿ ಮಾಡಲಾಗುತ್ತದೆ. ಈ ಪರೀಕ್ಷೆಯಿಂದ ಮಕ್ಕಳಲ್ಲಿ ಸೋಂಕು ಇದೆಯೋ ಅಥವಾ ಇಲ್ಲವೋ ಎಂಬುವುದನ್ನು ಪತ್ತೆ ಹಚ್ಚಬಹುದಾಗಿದೆ. ಇಂತಹ ಕೇಂದ್ರಗಳನ್ನು ಇಐಡಿ ಕೇಂದ್ರಗಳೆಂದು ಕರೆಯಲಿದ್ದು, ಜಿಲ್ಲೆಯಲ್ಲಿ 10 ಇಐಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
2017ರಿಂದ 2021 ಅಕ್ಟೋಬರ್ ವರೆಗೆ 166 ಮಕ್ಕಳಿಗೆ ಡಿಬಿಎಸ್ ಪರೀಕ್ಷೆ ಮಾಡಿಸಲಾಗಿದ್ದು, ಇವರಲ್ಲಿ 6 ಮಕ್ಕಳಿಗೆ(Children) ಸೋಂಕು ಕಂಡುಬಂದಿದೆ. ಇಲ್ಲಿ ವರೆಗೆ 115 ಮಕ್ಕಳನ್ನು 18 ತಿಂಗಳ ನಂತರ ಪರೀಕ್ಷೆಗೆ ಒಳಪಡಿಸಲಾಗಿದ್ದು ಇವರಲ್ಲಿ 6 ಮಕ್ಕಳಿಗೆ ಹೆಚ್‌ಐವಿ ದೃಢಪಟ್ಟಿತು. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಏಡ್ಸ್ ಗೆದ್ದಿದ್ದ ವಿಶ್ವದ ಮೊದಲ ವ್ಯಕ್ತಿ ಕ್ಯಾನ್ಸರ್‌ಗೆ ಬಲಿ!
ಬಳ್ಳಾರಿ ಜಿಲ್ಲೆ ಹೆಚ್‌ಐವಿ, ಏಡ್ಸ್(AIDS) ನಿಯಂತ್ರಣಾ ಮತ್ತು ನಿರ್ವಾಹಕ ಘಟಕ ರಾಜ್ಯದಲ್ಲಿಯೇ(Karnataka) ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, 2012ರಿಂದ ಇಲ್ಲಿ ವರೆಗೆ ಅತ್ಯುತ್ತಮ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಬಳ್ಳಾರಿ ಜಿಲ್ಲೆಯಲ್ಲಿ ಪ್ರಸ್ತುತ ನಗರ ಕೇಂದ್ರಗಳಲ್ಲಿ 2213, ಗ್ರಾಮೀಣ ಭಾಗದಲ್ಲಿ 726 ಮಹಿಳಾ ಲೈಂಗಿಕ ಕಾರ್ಯಕರ್ತರು, ಹಾಗೂ 519 ಎಂಎಸ್‌ಎಂ ಜನರಿದ್ದಾರೆ. ಈ ಜಿಲ್ಲೆಯಲ್ಲಿ 2021-22 (ಅಕ್ಟೋಬರ್ 2021ರ ವರೆಗೆ ) ಸಾಲಿನಲ್ಲಿ 2342 ಲೈಂಗಿಕ ಕಾರ್ಯಕರ್ತರಿಗೆ ಹೆಚ್.ಐ.ವಿ. ಪರೀಕ್ಷೆ ಮಾಡಿಸಲಾಗಿದ್ದು, ಓರ್ವ ಮಹಿಳೆಗೆ ಸೋಂಕು ತಗುಲಿದೆ. 427 ಎಂಎಸ್‌ಎಂ ಜನರಿಗೆ ಹೆಚ್.ಐ.ವಿ ಪರೀಕ್ಷೆ ಮಾಡಿಸಿದ್ದು ಇಬ್ಬರಿಗೆ ಹೆಚ್.ಐ.ವಿ ಸೋಂಕು ತಗಲಿದೆ ಎಂದು ವಿವರಿಸಿದರು.
ವಿಶ್ವ ಏಡ್ಸ್ ದಿನಾಚರಣೆ(World AIDS Day) ನಿಮಿತ್ತ ಡಿ. 1ರಂದು ಜಾಗೃತಿ ಜಾಥಾ ಡಿಎಚ್‌ಒ ಕಚೇರಿ ಆವರಣದಿಂದ ಹೊರಟು ನಗರದ ವಿವಿಧೆಡೆ ಸಂಚರಿಸಿ ಏಡ್ಸ್ ಕುರಿತು ಜಾಗೃತಿ ಮೂಡಿಸಲಿದೆ. ಇದಾದ ನಂತರ ಡಿಎಚ್‌ಒ ಕಚೇರಿ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ನಡೆದಿದೆ. ಏಡ್ಸ್ ನಿಯಂತ್ರಣ ಕಾರ್ಯದಲ್ಲಿ ಶ್ರಮಿಸಿದ ಮಹನೀಯರನ್ನು ಸನ್ಮಾನಿಸಲಾಗುತ್ತದೆ ಎಂದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಸ್.ರಾಜಾನಾಯ್ಕ, ಎಆರ್‌ಟಿ ಕೇಂದ್ರದ ಡಾ. ದಿನೇಶ ಗುಡಿ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಗಿರೀಶ್, ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್ ಸುದ್ದಿಗೋಷ್ಠಿಯಲ್ಲಿದ್ದರು.