Asianet Suvarna News Asianet Suvarna News

Chikkamagaluru: ಹಿಂದೂಸಭಾ ಗಣಪತಿ ವಿಸರ್ಜನಾ ಮೆರವಣಿಗೆ: ಪೊಲೀಸರೊಂದಿಗೆ ಜಟಾಪಟಿ!

ದಶಮಾನೋತ್ಸವದ ಸಂಭ್ರಮದಲ್ಲಿರುವ ಚಿಕ್ಕಮಗಳೂರು ನಗರದ ಹಿಂದೂಸಭಾ ಗಣಪತಿಯ ವಿಸರ್ಜನಾ ಮೆರವಣಿಗೆಯು ಶನಿವಾರ ವಿಜೃಂಭಣೆಯಿಂದ ನೆರವೇರಿತು. 

Hindu Sabha Ganapati Dispersal Procession in Chikkamagaluru gvd
Author
First Published Sep 30, 2023, 9:23 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಸೆ.30): ದಶಮಾನೋತ್ಸವದ ಸಂಭ್ರಮದಲ್ಲಿರುವ ಚಿಕ್ಕಮಗಳೂರು ನಗರದ ಹಿಂದೂಸಭಾ ಗಣಪತಿಯ ವಿಸರ್ಜನಾ ಮೆರವಣಿಗೆಯು ಶನಿವಾರ ವಿಜೃಂಭಣೆಯಿಂದ ನೆರವೇರಿತು. ನಗರದ ಬಸವನಹಳ್ಳಿ ಮುಖ್ಯರಸ್ತೆಯ ಓಂಕಾರೇಶ್ವರ ದೇವಸ್ಥಾನದಿಂದ ಮಧ್ಯಾಹ್ನ ಶ್ರೀಗಳ ಮೆರವಣಿಗೆ ಆರಂಭವಾಗುತ್ತಿದ್ದಂತೆ ಸಹಸ್ರಾರು ಭಕ್ತರು ಜಮಾಯಿಸಿ ವಿಘ್ನನಿವಾರಕನಿಗೆ ಜೈಕಾರ ಕೂಗಿದರು. ಗಣೇಶ ಮೂರ್ತಿಯನ್ನು ಅಲಂಕೃತ ಪ್ರಭಾವಳಿಯಲ್ಲಿ ಕುಳ್ಳರಿಸುತ್ತಿದ್ದಂತೆ ಮಂಗಳವಾದ್ಯದೊಂದಿಗೆ ಮೊದಲುಗೊಂಡು, ಇತರೆ ತಂಡಗಳ ಕಲಾವಿದರು ಮೆರವಣಿಗೆಯಲ್ಲಿ ಭಾಗವಹಿಸಿದವು.ಕೀಲುಕುದುರೆ, ನಾಸಿಕ್ ಡೋಲ್, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಡಿಜೆಗಳೊಂದಿಗೆ ಮೆರವಣಿಗೆ ಸಾಗಿತು. ಸಹಸ್ರಾರು ಯುವಕ, ಯುವತಿಯರು ಕೇಸರಿ ಧ್ವಜಗಳನ್ನು ಬೀಸುತ್ತಾ, ತಲೆಗೆ ರುಮಾಲುಗಳನ್ನು ಧರಿಸಿಕೊಂಡು ಉತ್ಸಾಹದಿಂದ ಗಣನಾಯಕನಿಗೆ ಬೀಳ್ಕೊಟ್ಟರು.

ಡಿಜೆ ಸದ್ದಿಗೆ ಹಜ್ಜೆ ಹಾಕಿದ ಜನ: ಜಗಮಗಿಸುವ ಬೆಳಕಿನ ನಡುವೆ ಕಿವಿಗಡಚಿಕ್ಕುವ ಡಿಜೆ ಸದ್ದಿಗೆ ಒಂದೇ ಸಮನೆ ಸಾವಿರಾರು ಜನರು ಹೆಜ್ಜೆ ಹಾಕಿ ಒಗ್ಗಟ್ಟು ಪ್ರದರ್ಶಿಸಿದರು. ದಾರಿ ಮಧ್ಯೆ ಅಲ್ಲಲ್ಲಿ ಪಟಾಕಿಗಳನ್ನು ಸಿಡಿಸಿ ಮೆವಣಿಗೆಗೆ ಸಾಂಪ್ರದಾಯಿಕ ಮೆರಗು ನೀಡಲಾಯಿತು.ಗಣಪತಿ ಸಮಿತಿ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಹಲವು ಮಂದಿ ಸಾರ್ವಜನಿಕರು ಸಾಂಪ್ರದಾಯಿಕ ದಿರಿಸು ಧರಿಸಿ ಭಾಗವಹಿಸುವ ಮೂಲಕ ಭಕ್ತಿ ಭಾವ ಮೂಡಿಸಿದರು.ದಾರಿಯುದ್ದಕ್ಕೂ ನಿವಾಸಿಗಳು ಗಣಪನಿಗೆ ಹಣ್ಣು, ಕಾಯಿ ಪೂಜೆ ಮಾಡಿಸಿದರು. 

ಶುಚಿಸಂಭ್ರಮ ಕಿಟ್ ಗುಣಮಟ್ಟದ ಬಗ್ಗೆ ಗರಂ ಆದ ಸಿಎಂ: ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ!

ಇನ್ನೂ ಕೆಲವರು ಈಡುಗಾಯಿ ಒಡೆದು ಭಕ್ತಿ ಸಮರ್ಪಿಸಿದರು.ಮಲ್ಲಂದೂರು ರಸ್ತೆ, ವಿಜಯಪುರ ಮುಖ್ಯ ರಸ್ತೆ, ಒಕ್ಕಲಿಗರ ಕಲ್ಯಾಣ ಮಂಟಪ ರಸ್ತೆ, ಆರ್ಜಿ ರಸ್ತೆ, ಬಸವನಹಳ್ಳಿ ಶಾಲೆ ರಸ್ತೆಗಳನ್ನು ಬಳಸಿ ಹನುಮಂತಪ್ಪ ವೃತ್ತಕ್ಕೆ ಆಗಮಿಸಿದ ಮೆರವಣಿಗೆ ಇದೇ ಮೊದಲಬಾರಿಗೆ ಎಂಜಿ ರಸ್ತೆಯಲ್ಲಿ ಸಾಗಿ ಕೋಟೆ ಕೆರೆ ತಲುಪಿತು.ಈ ಬಾರಿ ಬಸವನಹಳ್ಳಿ ಕೆರೆ ಬದಲಿಗೆ ಕೋಟೆ ಕೆರೆಯಲ್ಲಿ ಗಣಪತಿ ವಿಸರ್ಜಿಸಬೇಕಿರುವುದರಿಂದ ಗಣಪತಿ ಮೆರವಣಿಗೆ ಎಂಜಿ ರಸ್ತೆಯಲ್ಲಿ ಸಾಗಿತು. ರಸ್ತೆಯ ವರ್ತಕರು, ನಿವಾಸಿಗಳಿಗೂ ಇದೇ ಮೊದಲ ಬಾರಿಗೆ ಮನೆ ಬಾಗಿಲಲ್ಲೆ ಹಿಂದೂ ಸಭಾ ಗಣೇಶನ ದರ್ಶನವಾಯಿತು.

ಮಳೆ ನಡುವೆಯೂ ಭಾರೀ ಸಂಖ್ಯೆಯಲ್ಲಿ ಸೇರಿದ ಜನ: ಜಿಟಿ, ಜಿಟಿ ಮಳೆ ನಡುವೆಯೂ ಮಕ್ಕಳು, ಮಹಿಳೆಯರು, ಯುವಕ, ಯುವತಿಯರು ದೊಡ್ಡ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿ ಮೊದಲ ಬಾರಿಗೆ ಹಿಂದೂಸಭಾ ಗಣಪತಿ ಮೆರವಣಿಗೆಗೆ ಹೆಚ್ಚಿನ ಮೆರಗು ನೀಡಿದರು.ಹಿಂದೂ ಸಭಾ ಗಣಪತಿ ಸಮಿತಿ ಅದ್ಯಕ್ಷ ಆಟೋ ಶಿವಣ್ಣ, ಕಾರ್ಯದರ್ಶಿ ಕೃಷ್ಣ ಪದಾಧಿಕಾರಿಗಳಾದ ಸಂತೋಷ್ ಕೋಟ್ಯಾನ್, ಸುಮಂತ್, ಪ್ರದೀಪ್, ನಯನ ಸೇರಿದಂತೆ ಸಮಿತಿಯ ಎಲ್ಲಾ ಸದಸ್ಯರು ಇತರೆ ಪ್ರಮುಖರು ಮೆರವಣಿಗೆಯ ಉಸ್ತುವಾರಿ ನೋಡಿಕೊಂಡರು.

ಅತಿವೃಷ್ಠಿ-ಅನಾವೃಷ್ಟಿ ಎರಡರಲ್ಲೂ ನಮ್ಮನ್ನು ಪರಿಗಣಿಸಲ್ಲ: ಸರ್ಕಾರದ ವಿರುದ್ದ ಮೂಡಿಗೆರೆ ಜನ ಕಿಡಿ

ಪೊಲೀಸರೊಂದಿಗೆ ಜಟಾಪಟಿ: ಮೆರವಣಿಗೆ ವಿಜಯಪುರ ಗಣಪತಿ ಪೆಂಡಾಲ್ ಬಳಿಗೆ ಬಂದಾಗ ಕಾರ್ಯಕರ್ತರು ಪಟಾಕಿ ಹಚ್ಚಿದರು. ರಸ್ತೆ ಪಕ್ಕದಲ್ಲೇ ಮುಸ್ಲಿಂ ಧರ್ಮಕ್ಕೆ ಸೇರಿದ ಧಾರ್ಮಿಕ ಗೋಡೆಯೊಂದು ಇರುವ ಕಾರಣಕ್ಕೆ ಪೊಲೀಸರು ಕೂಡಲೇ ಪಟಾಕಿಯನ್ನು ಹೊಸಕಿ ಆರಿಸಿದರು. ಇದರಿಂದ ಕೆರಳಿದ ಕಾರ್ಯಕರ್ತರು ಪಟಾಕಿ ಸಿಡಿಸಲು ಅವಕಾಶ ಕೊಡದಿದ್ದರೆ ಮೆರವಣಿಗೆ ಮುಂದುವರಿಸುವುದಿಲ್ಲ ಎಂದು ಪಟ್ಟು ಹಿಡಿದರು.ಪೊಲೀಸರು ಹಾಗೂ ಸಂಘಟಕರ ನಡುವೆ ಜಟಾಪಟಿ ಉಂಟಾಗಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಯಾವುದಕ್ಕೂ ಜಗ್ಗುವುದಿಲ್ಲ ಎಂದು ಯುವಕರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಪಟಾಕಿ ಸಿಡಿಸಲು ಪೊಲೀಸರು ಅವಕಾಶ ನೀಡಿದರು. ನಂತರ ಭಾರೀ ಪ್ರಮಾಣದ ಪಟಾಕಿಗಳನ್ನು ಸಿಡಿಸಿ, ಘೋಷಣೆಗಳನ್ನು ಕೂಗಿ ಮೆರವಣಿಗೆಯನ್ನು ಮುಂದುವರಿಸಲಾಯಿತು.

Follow Us:
Download App:
  • android
  • ios