Asianet Suvarna News Asianet Suvarna News

ಅತಿವೃಷ್ಠಿ-ಅನಾವೃಷ್ಟಿ ಎರಡರಲ್ಲೂ ನಮ್ಮನ್ನು ಪರಿಗಣಿಸಲ್ಲ: ಸರ್ಕಾರದ ವಿರುದ್ದ ಮೂಡಿಗೆರೆ ಜನ ಕಿಡಿ

ಸಮುದ್ರದ ಅಡಿಯಲ್ಲಿ ಉಪ್ಪು, ಮಲೆನಾಡಲ್ಲಿ ಮಳೆಗೆ ಬರ ಅಂದ್ರೆ ಯಾರೂ ನಂಬಲ್ಲ. ಆದ್ರೆ, ಪರಿಸ್ಥಿತಿ ಹಾಗಿಲ್ಲ. ಮಲೆನಾಡಲ್ಲಿ ಮಳೆಗೆ ಬರ ಬಂದಿದೆ. ಅದು ಸಂಬಂಧಪಟ್ಟವರಿಗೆ ಕಾಣ್ತಿಲ್ಲ ಅಷ್ಟೆ. ವಾರ್ಷಿಕ ದಾಖಲೆ ಮಳೆ ಸುರಿಯೋ ಮಲೆನಾಡಲ್ಲಿ ಈ ಬಾರಿ ಶೇಕಡ 45 ರಷ್ಟು ಮಳೆ ಕೊರತೆ ಇದೆ. 

Government does not consider us in both drought Says Mudigere peoples gvd
Author
First Published Sep 27, 2023, 10:23 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಸೆ.27): ಸಮುದ್ರದ ಅಡಿಯಲ್ಲಿ ಉಪ್ಪು, ಮಲೆನಾಡಲ್ಲಿ ಮಳೆಗೆ ಬರ ಅಂದ್ರೆ ಯಾರೂ ನಂಬಲ್ಲ. ಆದ್ರೆ, ಪರಿಸ್ಥಿತಿ ಹಾಗಿಲ್ಲ. ಮಲೆನಾಡಲ್ಲಿ ಮಳೆಗೆ ಬರ ಬಂದಿದೆ. ಅದು ಸಂಬಂಧಪಟ್ಟವರಿಗೆ ಕಾಣ್ತಿಲ್ಲ ಅಷ್ಟೆ. ವಾರ್ಷಿಕ ದಾಖಲೆ ಮಳೆ ಸುರಿಯೋ ಮಲೆನಾಡಲ್ಲಿ ಈ ಬಾರಿ ಶೇಕಡ 45 ರಷ್ಟು ಮಳೆ ಕೊರತೆ ಇದೆ. ಬೆಟ್ಟಗುಡ್ಡಗಳ ಚಿಕ್ಕಮಗಳೂರು ತಾಲೂಕು ಮೂಡಿಗೆರೆಯಲ್ಲಿ ಸುರಿದಿರೋ ಮಳೆ ಕಾಫಿತೋ-ನದಿಗಳಲ್ಲಿ ಹರಿದು ಹೋಗಿದೆ. ಆದ್ರೆ, ಸರ್ಕಾರ ಮೂಡಿಗೆರೆಯನ್ನ ಬರಪೀಡಿತ ತಾಲೂಕು ಅಂತ ಘೋಷಿಸದಿರೋದು ಮಲೆನಾಡಿಗರ ಕಣ್ಣನ್ನ ಕೆಂಪಾಗಿಸಿದೆ. 

ಸರ್ಕಾರದ ವಿರುದ್ದ ಮೂಡಿಗೆರೆ ಜನ ಕಿಡಿ: ಮೂಡಿಗೆರೆ. ಚಿಕ್ಕಮಗಳೂರು ಜಿಲ್ಲೆಯ ಅಪ್ಪಟ ಮಲೆನಾಡ ತಾಲೂಕು. ತಾಲೂಕಿನ ಭೌಗೋಳಿಕತೆಯಲ್ಲಿ ಅರ್ಧಕ್ಕಿಂತ ಹೆಚ್ಚು ಬೆಟ್ಟಗುಡ್ಡಗಳಿಂದಲೇ ಕೂಡಿರೋ ತಾಲೂಕು. ವಾರ್ಷಿಕ ದಾಖಲೆ ಮಳೆ ಬೀಳೋ ಮೂಡಿಗೆರೆಯಲ್ಲಿ ಈ ವರ್ಷ ಅರ್ಧಕರ್ಧ ಮಳೆ ಕೊರತೆ ಇದೆ. ಸುರಿದಿರೋ ಮಳೆ ಕೂಡ ಕಾಫಿತೋಟಗಳಲ್ಲಿ ಹರಿದು ನದಿ ಸೇರಿ ಹರಿದು ಹೋಗಿದೆ. ಅರ್ಧ ವರ್ಷ ಮಳೆ ನೋಡೋ ಮೂಡಿಗೆರೆಯಲ್ಲಿ ಕೆರೆ-ಕಟ್ಟೆಗಳು ತೀರಾ ಕಡಿಮೆ. ಅದರಲ್ಲೂ ಈ ವರ್ಷ ಮಳೆ ಕೊರತೆ ಮಲೆನಾಡಿಗರು ಇತಿಹಾಸದಲ್ಲಿ ಕಾಣದ ಬರವನ್ನ ಕಂಡಿದ್ದಾರೆ. 

ಕಾವೇರಿ ವಿಚಾರದಲ್ಲಿ ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧ: ಸಚಿವ ಈಶ್ವರ್‌ ಖಂಡ್ರೆ

ಆದ್ರೆ, ಸರ್ಕಾರ ಜಿಲ್ಲೆಯ ಬಯಲುಸೀಮೆ ಭಾಗದ ಕಡೂರು ಹಾಗೂ ಅಜ್ಜಂಪುರ ತಾಲೂಕನ್ನ ಮಾತ್ರ ಬರ ಎಂದು ಘೋಷಿಸಿರೋದು ಮಲೆನಾಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ಅತಿವೃಷ್ಠಿಯಲ್ಲೂ ನಮಗೆ ಸೂಕ್ತ ರೀತಿಯಲ್ಲಿ ಸ್ಪಂಧಿಸಲ್ಲ. ಅನಾವೃಷ್ಠಿಯಲ್ಲೂ ಸೂಕ್ತವಾಗಿ ಸ್ಪಂದಿಸಲ್ಲ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಈ ವರ್ಷ ಮೂಡಿಗೆರೆ ಹಿಂದೆಂದೂ ಕಾಣದ ಬರವನ್ನ ಕಂಡಿದೆ. ಸರ್ಕಾರ ಕೂಡಲೇ ಮೂಡಿಗೆರೆಯನ್ನೂ ಬರ ಎಂದು ಘೋಷಿಸಬೇಕೆಂದು ಸ್ಥಳಿಯರು ಒತ್ತಾಯಿಸಿದ್ದಾರೆ. 

ಮೂಡಿಗೆರೆಯನ್ನೂ ಬರಪೀಡಿತ ಪ್ರದೇಶಕ್ಕೆ ಒತ್ತಾಯ: ಈಗಾಗಲೇ ಮೂಡಿಗೆರೆಯಲ್ಲಿ ಮಲೆನಾಡಿಗರು ಹನಿ ನೀರಿಗೂ ಹಾಹಾಕಾರ ಅನುಭವಿಸುವಂತಾಗಿದೆ. ಭತ್ತದ ಗದ್ದೆಗಳನ್ನ ಪಾಳುಬಿಟ್ಟಿದ್ದಾರೆ. ಮಳೆಗಾಲದಲ್ಲೇ ಕಾಫಿತೋಟಕ್ಕೆ ಬೋರ್ನಲ್ಲಿ ನೀರಾಯಿಸುತ್ತಿದ್ದಾರೆ. ಮಲೆನಾಡಲ್ಲಿ ಆಗಸ್ಟ್-ಸೆಪ್ಟೆಂಬರ್ ಅಪ್ಪಟ ಮಳೆಗಾಲ. ಈಗಲೇ ಮಳೆ ಇಲ್ಲದೆ ಬೆಳೆಗಳು ಒಣಗುತ್ತಿವೆ. ಆಗಾಗ್ಗೆ ಅಲ್ಲಲ್ಲೇ ಸುರಿಯುವ ಮಳೆ ಕೂಡ ಮಲೆನಾಡಿಗರನ್ನ ನಾಶ ಮಾಡಲೆಂದೇ ಸುರಿಯುತ್ತಿದೆ. ಭತ್ತ ಕಾಳಾಗೋ ಸೆಪ್ಟೆಂಬರ್ನಲ್ಲೇ ನೀರಿಲ್ಲದೆ ಭತ್ತ ಸಂಪೂರ್ಣ ನಾಶವಾಗಿದೆ. 

ಕಾಫಿ-ಮೆಣಸು-ಅಡಿಕೆ ಈ ವರ್ಷ ಅರ್ಧವೂ ಕೈಸೇರಲ್ಲ. ಮಳೆ ಇಲ್ಲದೆ ಎಲ್ಲವೂ ನಾಶವಾಗಿದೆ. ನಾಡಿಗೆ ನೀರು ನೀಡುವ ನಮಗೆ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಆದ್ರೆ, ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ಬಯಲುಸೀಮೆ ತಾಲೂಕಗಳನ್ನ ಬರದ ತಾಲೂಕು ಎಂದು ಘೋಷಿಸಿದೆ. ಆದ್ರೆ, ಮೂಡಿಗೆರೆಯನ್ನ ಬರ ಎಂದು ಘೋಷಿಸಿಲ್ಲ. ಕೂಡಲೇ ಮೂಡಿಗೆರೆ ತಾಲೂಕನ್ನು ಬರ ಎಂದು ಘೋಷಿಸಬೇಕು. ಇಲ್ಲವಾದರೆ, ಜನ ಸರ್ಕಾರದ ವಿರುದ್ಧ ದಂಗೆ ಏಳುತ್ತಾರೆ ಎಂದು ಎಚ್ಚರಿಸಿದ್ದಾರೆ.

Chikkamagaluru: ಪ್ರಸಿದ್ಧ ಪ್ರವಾಸಿ ತಾಣ ವಸಿಷ್ಠ ತೀರ್ಥಕ್ಕೆ ಹೋಗಲುಬೇಕು ಡಬಲ್ ಗುಂಡಿಗೆ!

ಒಟ್ಟಾರೆ, ಕಾಫಿನಾಡಲ್ಲಿ ಈ ಬಾರಿ ಒಂಬತ್ತು ತಾಲೂಕುಗಳನ್ನ ಬರ ಎಂದು ಘೋಷಿಸಿದ್ರು ತಪ್ಪಿಲ್ಲ. ಯಾಕಂದ್ರೆ, ನಾಡಿಗೆ ನೀರುಣ್ಣಿಸೋ ಕಾಫಿನಾಡಲ್ಲಿ ಈ ವರ್ಷ ಮಳೆಗಾಲದಲ್ಲೇ ತೀವ್ರ ಮಳೆಯ ಅಭಾವವಿತ್ತು. ಸರ್ಕಾರದ ಲೆಕ್ಕದಲ್ಲಿ ವಾಡಿಕೆ ಮಳೆಯಾಗಿದೆ. ಆದ್ರೆ, ರೈತರ ಲೆಕ್ಕದಲ್ಲಿ ಇಲ್ಲ. ಯಾಕಂದ್ರೆ, ಬೆಟ್ಟಗುಡ್ಡಗಳ ಜಿಲ್ಲೆಯಲ್ಲಿ ಸುರಿದ ಮಳೆ ಕೆರೆಕಟ್ಟೆಯಲ್ಲಿ ನಿಂತಿದ್ದಕ್ಕಿಂತ ಪಶ್ಚಿಮಘಟ್ಟಗಳ ಸಾಲಿನಲ್ಲಿ ಹರಿದು ಹೋಗಿದ್ದೆ ಜಾಸ್ತಿ. ಹಾಗಾಗಿ, ಸರ್ಕಾರ ಮಲೆನಾಡ ತಾಲೂಕುಗಳನ್ನು ಬರ ಎಂದು ಘೋಷಿಸೋದ್ರಲ್ಲಿ ತಪ್ಪಿಲ್ಲ. ಜನ ಕೇಳ್ತಿದ್ದಾರೆ. ಆದ್ರೆ, ಸರ್ಕಾರ ಏನ್ ಮಾಡುತ್ತೋ ಕಾದುನೋಡ್ಬೇಕು.

Follow Us:
Download App:
  • android
  • ios