Asianet Suvarna News Asianet Suvarna News

Chikkamagaluru: ಹಿಂದೂ ಮಹಾಸಭಾ ಗಣಪತಿ ವಿಸರ್ಜನ ಮಹೋತ್ಸವ: ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದ ಯುವಜನತೆ

ಹಳದಿ ಜುಬ್ಬ, ಬಿಳಿ ಬಣ್ಣದ ಪೈಜಾಮದೊಂದಿಗೆ ತಲೆಗೆ ಕೇಸರಿ ರುಮಾಲು ಸುತ್ತಿಕೊಂಡು ಸಾಂಪ್ರದಾಯಿಕ ಉಡುಪಿನೊಂದಿಗೆ ಸಮಿತಿ ಸದಸ್ಯರು ಇನ್ನಿತರೆ ಮುಖಂಡರು ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಂತೆ ದೇವಸ್ಥಾನದ ಕಡೆಗೆ ನಿಧಾನವಾಗಿ ಜನಸಾಗರವೇ ಹರಿದು ಬರಲಾರಂಭಿಸಿತು. 

Hindu Mahasabha Ganapati Visarjan Mahotsav at Chikkamagaluru gvd
Author
First Published Sep 19, 2024, 7:49 PM IST | Last Updated Sep 19, 2024, 7:49 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಸೆ.19): ನಗರದ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆಯು ಸಹಸ್ರಾರು ಭಕ್ತರ ಜಯಘೋಷಗಳ ನಡುವೆ ಇಂದು ವಿಜೃಂಭಣೆಯಿಂದ ನೆರವೇರಿತು. ನಗರದ ಬಸವನಹಳ್ಳಿ ಮುಖ್ಯರಸ್ತೆಯ ಓಂಕಾರೇಶ್ವರ ದೇವಸ್ಥಾನ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪನಿಗೆ ಮಧ್ಯಾಹ್ನ 12.30ಕ್ಕೆ ಪ್ರಧಾನ ಅರ್ಚಕ ಗುರು ಭಟ್ರು ಮತ್ತು ತಂಡದಿಂದ ಮೂಡುಗಣಪತಿ ಸೇವೆ ಸಲ್ಲಿಸಿ ನಂತರ ವಿಸರ್ಜನಾ ಪೂಜೆ ನೆರವೇರಿಸುತ್ತಿದ್ದಂತೆ ಗಣಪತಿ ಸಮಿತಿ ಸದಸ್ಯರು ವಿಸರ್ಜನಾ ಕಾರ್ಯಕ್ಕೆ ಸಿದ್ಧತೆ ಆರಂಭಿಸಿದರು. 

ಸಾಂಪ್ರದಾಯಿಕ ಉಡುಪು: ಹಳದಿ ಜುಬ್ಬ, ಬಿಳಿ ಬಣ್ಣದ ಪೈಜಾಮದೊಂದಿಗೆ ತಲೆಗೆ ಕೇಸರಿ ರುಮಾಲು ಸುತ್ತಿಕೊಂಡು ಸಾಂಪ್ರದಾಯಿಕ ಉಡುಪಿನೊಂದಿಗೆ ಸಮಿತಿ ಸದಸ್ಯರು ಇನ್ನಿತರೆ ಮುಖಂಡರು ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಂತೆ ದೇವಸ್ಥಾನದ ಕಡೆಗೆ ನಿಧಾನವಾಗಿ ಜನಸಾಗರವೇ ಹರಿದು ಬರಲಾರಂಭಿಸಿತು. ಮಹಾ ಗಣಪತಿಯನ್ನು ಅಲಂಕೃತ ವಾಹನದ ಪ್ರಭಾವಳಿಗೆ ತಂದು ಕೂರಿಸುತ್ತಿದ್ದಂತೆ ಮಂಗಳ ವಾದ್ಯಗಳು ಮೊಳಗಲಾರಂಭಿಸಿತು. ಭಕ್ತರು ಗಣಪನಿಗೆ ಬೀಳ್ಕೊಡುಗೆಯ ನಮನಗಳನ್ನು ಸಲ್ಲಿಸಿದರು. ಮಹಾ ಮಂಗಳರಾತಿ ಮುಗಿದು ಈಡುಗಾಯಿ ಹೊಡೆಯುತ್ತಿದ್ದಂತೆ ವಿನಾಯಕನಿಗೆ ಜಯಘೋಷಗಳು ಮೊಳಗಿದವು.

ಬೂತ್‌ ಮಟ್ಟದಿಂದ ಬಲ ಹೆಚ್ಚಿಸಿ ಮುಂಬರುವ ಚುನಾವಣೆಗೆ ಜೆಡಿಎಸ್ ಪಕ್ಷ ಸಜ್ಜಗೊಳಿಸಿ: ನಿಖಿಲ್ ಕುಮಾರಸ್ವಾಮಿ

ಬೆರಾಗಾಗಿಸಿದ ಜನಸ್ತೋಮ: ನೋಡ ನೋಡುತ್ತಿದ್ದಂತೆ ಸಹಸ್ರಾರು ಜನರು ಮೆರವಣಿಗೆಯಲ್ಲಿ ಸೇರಿಕೊಂಡರು. ನಿರೀಕ್ಷೆಗೂ ಮೀರಿ ಯುವಕರು, ಯುವತಿಯರು ಸೇರಿ ಡಿಜೆ ಸದ್ದಿಗೆ ಪ್ರತ್ಯೇಕವಾಗಿ ಹೆಜ್ಜೆ ಹಾಕಿದರು. ಮೆರವಣಿಗೆ ರಾಘವೇಂದ್ರ ಸ್ವಾಮಿ ದೇವಸ್ಥಾನದ ಬಳಿಗೆ ಬರುವವೇಳೆಗೆ ನೋಡುಗರು ನಿಬ್ಬೆರಗಾಗುವಷ್ಟು ಮಂದಿ ಕುಣಿದು ಕುಪ್ಪಳಿಸಲಾರಂಭಿಸಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಮೂರ್‍ನಾಲ್ಕು ಪಟ್ಟು ಹೆಚ್ಚಿನ ಜನರು ಆಗಮಿಸಿ ಸಂಭ್ರಮಿಸಿದರು. 

ಡಿಜೆ ಸದ್ದಿಗೆ ಹೆಜ್ಜೆ: ಮಹಿಳೆಯರು, ಮಕ್ಕಳು, ಯುವಕ, ಯುವತಿಯರು, ವೃದ್ಧರಾದಿಯಾಗಿ ಯಾವುದೇ ಬೇಧ ಭಾವವಿಲ್ಲದೆ ಎಲ್ಲರೂ ಕಲೆತು ಒಗ್ಗಟ್ಟು ಪ್ರದರ್ಶಿಸಿದರಲ್ಲದೆ, ಸಾಂಪ್ರದಾಯಿಕ ಮೆರವಣಿಗೆಗೆ ವಿಶೇಷ ಮೆರಗು ತುಂಬಿದರು. ಎದೆ ನಡುಗಿಸುವ ಡಿಜೆ ಸದ್ದು, ಕಣ್ಣು ಕುಕ್ಕುವ ಬಣ್ಣ ಬಣ್ಣದ ವಿದ್ಯುತ್ ಬೆಳಕಿನಡಿ ಯುವಕ, ಯುವತಿಯರು ಕುಣಿಯುತ್ತಾ ಸಾಗುತ್ತಿದ್ದರೆ ಕೇಸರಿ ನದಿಯೇ ಹರಿದು ಬರುತ್ತಿರುವಂತೆ ಭಾಸವಾಗುತ್ತಿತ್ತು. 

ಮಾಜಿ ಸಚಿವ ಸಿ ಟಿ ರವಿ ಡ್ಯಾನ್ಸ್: ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಮಹೋತ್ಸವದ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಮಾಜಿ ಶಾಸಕ ,ಹಾಲಿ ವಿಧಾನ ಪರಿಷತ್ ಸದಸ್ಯ ಬೆಳಗಿನಿಂದಲೂ ಕೂಡ ವಿಸರ್ಜನಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಸಂಜೆ ಬಸನವನಹಳ್ಳಿಯ ಮುಖ್ಯ ರಸ್ತೆಯಲ್ಲಿ ಸಾಗುತ್ತಿದ್ದ ಮೆರವಣಿಗೆಯಲ್ಲಿ ಪಾಲ್ಗೊಂಡ ಸಿಟಿ ರವಿ ದಾರಿ ಉದ್ದಕ್ಕೂ ಕೂಡ ಹೆಜ್ಜೆ ಹಾಕಿದರು‌. ಹನುಮಂತಪ್ಪ ವೃತ್ತ ಬರುತ್ತಿದ್ದಂತೆ ಹೊಸ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನರ ನಡುವೆ ಸಿ ಟಿ  ರವಿಯ ಡಿಜೆ ಸದ್ದಿಗೆ  ಯುವಕ ಇವತ್ತೇಯರೊಂದಿಗೆ ಸಖತ್ತಾಗಿ ಡ್ಯಾನ್ಸ್ ಮಾಡಿದ್ರು‌

ದಾರಿಯುದ್ದಕ್ಕೂ ನಮನ: ದಾರಿಯುದ್ದಕ್ಕೂ ನಗರದ ನಿವಾಸಿಗಳು ಗಣಪನಿಗೆ ಪೂಜೆ, ಮಂಗಳರಾತಿ ಮಾಡಿಸಿದರು. ರಸ್ತೆಗೆ ನೀರು ಹಾಕಿ ಶ್ರೀಯವರನ್ನು ಬರಮಾಡಿಕೊಂಡ ಜನರು ಈಡುಗಾಯಿ ಹೊಡೆದು ಭಕ್ತಿ ಸಮರ್ಪಿಸಿದರು. ಮೆರವಣಿಗೆಯಲ್ಲಿ ಸಾಗಿ ಬಂದ ಬೃಹತ್ ಶ್ರೀರಾಮನ ವಿಗ್ರಹ ವಿಶೇಸ ಆಕರ್ಷಣೆ ಆಗಿತ್ತು. ಸಾವಿರಾರು ಜನರು ರಾಮನ ಮೂರ್ತಿ ಬಳಿ ನಿಂತು ಸೆಲ್ಪಿ, ಫೋಟೋ ತೆಗೆಸಿಕೊಳ್ಳುತ್ತಿದ್ದುದು ಮಾಮೂಲಾಗಿತ್ತು. ಪುತ್ತೂರಿನ ನಾಸಿಕ್ ಡೋಲಿನ ಸದ್ದು ಯುವಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ಬೊಂಬೆ ಕುಣಿತ ಇನ್ನಿತರೆ ಸಾಂಸ್ಕೃತಿಕ ಕಲಾ ತಂಡಗಳು ಮೆರವಣಿಗೆಯ ಸೊಬಗು ಹೆಚ್ಚಿಸಿದವು.

ಚಿಕ್ಕಮಗಳೂರಿನಲ್ಲಿ 5 ವರ್ಷದ ಬಾಲಕಿ ಅನುಮಾನಾಸ್ಪದ ಸಾವು: ಕಿವಿಯಲ್ಲಿದ್ದ ಓಲೆ, ಕಾಲ್ಗೆಜ್ಜೆ ನಾಪತ್ತೆ?

ಓಂಕಾರೇಶ್ವರ ದೇವಸ್ಥಾನದಿಂದ ಆರಂಭಗೊಂಡ ವಿಸರ್ಜನಾ ಮೆರವಣಿಗೆ ಆಶೀರ್ವಾದ ಸರ್ಕಲ್, ವಿಜಯಪುರ ಮುಖ್ಯ ರಸ್ತೆ, ಪೂಜಾ ಸರ್ಕಲ್, ಮಲ್ಲಂದೂರು ರಸ್ತೆ ವಿಜಯಪುರ ಪೆಂಡಾಲ್, ಫುಡ್ ಪ್ಯಾಲೇಸ್, ರಾಘವೇಂದ್ರ ಮಠದ ರಸ್ತೆ, ಶ್ರೀಕಂಠಪ್ಪ ಸರ್ಕಲ್, ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ಸರ್ಕಲ್, ಎಂಜಿ ರಸ್ತೆ, ಆಜಾದ್ ಪಾರ್ಕ್ ಸರ್ಕಲ್ ಮೂಲಕ ಸಾಗಿ ಕೋಟೆ ಕೆರೆಯಲ್ಲಿ ವಿಸರ್ಜಿಸಲಾಯಿತು.13 ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಕಾರ್ಯಕ್ರಮಗಳು, ಸ್ಪರ್ಧಾಚಟುವಟಿಕೆಗಳು ನಿತ್ಯ ಪ್ರಸಾದ ವಿತರಣೆ, ಪೂಜಾ ಕೈಂಕರ್ಯಗಳೊಂದಿಗೆ ಸಾಗಿದ ಇಗಣೇಶೋತ್ಸವಕ್ಕೆ ಸಹಸ್ರಾರು ಜನರ ಭಕ್ತಿ ಭಾವ ಸಮರ್ಪಣೆಯೊಂದಿಗೆ ಶಾಂತಿಯುತವಾಗಿ ತೆರೆ ಬಿತ್ತು. ಹಿಂದೂ ಮಹಾ ಗಣಪತಿ ಸಮಿತಿ ಅಧ್ಯಕ್ಷ ಆಟೋ ಶಿವಣ್ಣ, ಪದಾಧಿಕಾರಿಗಳಾದ ಕೃಷ್ಣ, ಸಂತೋಷ್ ಕೋಟ್ಯಾನ್, ಪ್ರದೀಪ್ ರಾವ್, ಶ್ಯಾಂ ವಿ.ಗೌಡ ಸೇರಿದಂತೆ ನೂರಾರು ಮಂದಿ ಮೆರವಣಿಗೆ ಯಶಸ್ಸಿಗೆ ಶ್ರಮಿಸಿದರು.

Latest Videos
Follow Us:
Download App:
  • android
  • ios