Asianet Suvarna News Asianet Suvarna News

ಪ್ರಕೃತಿ ಸಮತೋಲನಕ್ಕಾಗಿ ಗುರುಶಾಂತೇಶ್ವರ ಶಿವಾಚಾರ್ಯರು ಪಾದಯಾತ್ರೆ

  • ಪ್ರಕೃತಿ ಸಮತೋಲನಕ್ಕಾಗಿ ಶ್ರೀಗಳಿಂದ ಪಾದಯಾತ್ರೆ ಆರಂಭ
  •  ನೆಗಳೂರಿನಿಂದ ರಂಭಾಪುರಿ ಪೀಠದ ವರೆಗೆ ಜರುಗಲಿರುವ ಪಾದಯಾತ್ರೆ
  • - ಮೂರನೇ ವರ್ಷದ ಪಾದಯಾತ್ರೆಗೆ ನೂರಾರು ಜನ ಭಾಗಿ
Hiking from Sr gurushanteshwar shivacharyai for nature balance havei guttal rav
Author
First Published Sep 4, 2022, 11:20 AM IST

ಗುತ್ತಲ (ಸೆ.4) : ವಿಶ್ವ ಶಾಂತಿಗಾಗಿ ಮತ್ತು ಮಾನವ ಸಮೃದ್ಧಿ ಮತ್ತು ಪ್ರಕೃತಿ ಸಮತೋಲನಕ್ಕಾಗಿ ಸಮೀಪದ ನೆಗಳೂರಿನ ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯರು ಭಕ್ತರೊಡಗೂಡಿ ಬಾಳೆಹೊನ್ನೂರಿನ ರಂಭಾಪುರಿ ಪೀಠಕ್ಕೆ ಮೂರನೇ ವರ್ಷದ ಪ್ರಕೃತಿ ಸಮತೋಲನ ಪಾದಯಾತ್ರೆಯು ಶನಿವಾರ ಶ್ರೀಮಠದಿಂದ ನೂರಾರು ಭಕ್ತ ಸಮೂಹದೊಂದಿಗೆ ಪಾದಯಾತ್ರೆ ಪ್ರಾರಂಭಿಸಿದರು. ಬೆಳಗ್ಗೆ 6ಗಂಟೆಗೆ ಶ್ರೀಮಠದ ಉಭಯ ಶ್ರೀಗಳ ಗದ್ದುಗೆಗೆ ಶ್ರೀಮಠದ ಧಾರ್ಮಿಕ ಪಾಠ ಶಾಲೆಯ ವಿದ್ಯಾರ್ಥಿಗಳಿಂದ ರುದ್ರಾಭಿಷೇಕ ಜರುಗಿತು. ನಂತರ ಶ್ರೀಗಳ ಸಮ್ಮಖದಲ್ಲಿ ಮಹಾ ಮಂಗಳಾರುತಿ ಜರುಗಿಸಲಾಯಿತು. ನಂತರ ಶ್ರೀಗಳು ಜ್ಯೋತಿ ಬೆಳಗಿಸುವುದರ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.

ಸೌಹಾರ್ದತೆಗೆ ಸಾಕ್ಷಿಯಾದ ರಂಭಾಪುರಿ ಶ್ರೀ ಅಡ್ಡಪಲ್ಲಕ್ಕಿ ಉತ್ಸವ: ಶ್ರೀಗಳ ದರ್ಶನ ಪಡೆದ ಮುಸ್ಲಿಂ ಮುಖಂಡರು!

ಶ್ರೀಮಠದಿಂದ ಪ್ರಾರಂಭಗೊಂಡ ಪಾದಯಾತ್ರೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗ್ರಾಮದ ಪ್ರವಾಸಿ ಮಂದಿರ ತಲುಪಿತು. ಇದೇ ಸಂದರ್ಭದಲ್ಲಿ ಗುರುಶಾಂತೇಶ್ವರ ಶ್ರೀ ಮಾತನಾಡಿ, ಕಳೆದ 2 ವರ್ಷಗಳಿಂದ ಕೋವಿಡ್‌- 19 ಹಿನ್ನೆಲೆಯಲ್ಲಿ ಪಾದಯಾತ್ರೆಯನ್ನು ಮುಂದೂಡಲಾಗಿತ್ತು. ಈ ಬಾರಿ ಮತ್ತೆ ಭಕ್ತರೊಂದಿಗೆ ರಂಭಾಪುರಿ ಮಹಾಪೀಠಕ್ಕೆ ಮೂರನೇ ವರ್ಷದ ಪ್ರಕೃತಿ ಸಮತೋಲನ ಪಾದಯಾತ್ರೆ ಕೈಗೊಂಡಿದ್ದೇವೆ.

ಜಗತ್ತಿನಲ್ಲಿ ಉಂಟಾಗಿರುವ ಪ್ರಕೃತಿ ವಿಕೋಪಗಳು ಶಮನವಾಗಿ ಪ್ರಕೃತಿ ಮಾತೆ ಶಾಂತಳಾಗಿ ಸಮತೋಲನ ಕಾಯ್ದುಕೊಂಡು ಮಾನವ ಬದುಕು ಸಾಗಿಸಲು ಅನುಕೂಲಕರ ವಾತಾವರಣ ಸೃಷ್ಟಿಯಾಗುವಂತಾಗಬೇಕು ಜೊತೆಗೆ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂಬುದರ ಬಗ್ಗೆ ಅರಿವು ಮೂಡಿಸುವ ಜಾಗೃತಿ ಪಾದಯಾತ್ರೆಯನ್ನು ಕಳೆದ ಎರಡು ವರ್ಷಗಳಿಂದ ಪ್ರಕೃತಿ ಸಮತೋಲನ ಪಾದಯಾತ್ರೆ ಎಂಬ ಹೆಸರಿನಲ್ಲಿ ಪೃಥ್ವಿ ತತ್ವದ ಮೂಲ ಪೀಠವಾದ ಬಾಳೆಹೊನ್ನೂರಿನ ರಂಭಾಪುರಿ ಮಹಾಸಂಸ್ಥಾನ ಪೀಠಕ್ಕೆ ಪಾದಯಾತ್ರೆ ಕೈಗೊಂಡಿದ್ದೇವೆ. ಈ ಭಾರಿ ಈ ಪಾದಯಾತ್ರೆಯು ಮಂಗಲಗೊಳ್ಳುವುದು ಆ ಹಿನ್ನಲೆಯಲ್ಲಿ ನೆಗಳೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರೂ ಈ ಪಾದಯಾತ್ರೆಯಲ್ಲಿ ಭಾಗಿಯಾಗಿರುವುದು ಸಂತಸವನ್ನುಂಟು ಮಾಡಿದೆ ಎಂದರು. ಪಾದಯಾತ್ರೆಯು ಸೆ. 9 ರಂದು ರಂಭಾಪುರಿ ಪೀಠವನ್ನು ತಲುಪುವುದು ಸೆ. 10ರಂದು ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಮೂರನೇ ವರ್ಷದ ಪ್ರಕೃತಿ ಸಮತೋಲನ ಪಾದಯಾತ್ರೆ ಸಂಪನ್ನಗೊಳ್ಳುವುದು ಎಂದರು.

ಪಾದಯಾತ್ರೆಯಲ್ಲಿ ಶ್ರೀಮಠದ ಸೇವಾ ಸಮಿತಿಯ ಅಧ್ಯಕ್ಷ ಕೆ.ಬಿ. ಚಪ್ಪರದ, ಕಾರ್ಯದರ್ಶಿ ವಿರೂಪಾಕ್ಷಪ್ಪ ಕಟ್ಟೆಣ್ಣನವರ, ಗ್ರಾಮಸ್ಥರಾದ ಈಶ್ವರ ಶಿಡೇನೂರ, ನಾಗಪ್ಪ ಕಟ್ಟೆಣ್ಣನವರ, ಶಂಭುಲಿಂಗಯ್ಯ ಮಠದ, ಅರುಣ ರಿತ್ತಿಮರಿಯಣ್ಣನವರ, ಅಮರ ಗಂಗನಗೌಡ್ರ, ರಾಜಶೇಖರ ವಿಭೂತಿ, ರವಿ ಮಣ್ಣೂರ, ರವಿ ಬಾಲಣ್ಣನವರ, ಕೆ.ಎಂ. ಮೈದೂರ, ಶಿವಕುಮಾರ ಮಾಹೂರ, ಕುಮಾರ ವಿಭೂತಿ, ಗ್ರಾಪಂ ಸದಸ್ಯ ಹನುಮಂತಪ್ಪ ದೊಡ್ಡೀರಪ್ಪನವರ, ಬಸವರಾಜ ಸವಣೂರ, ಸೋಮಣ್ಣ ಮೈದೂರ, ಬಸವರಾಜ ಪತ್ರಿ, ವಿರೂಪಾಕ್ಷಪ್ಪ ಹೆಡಿಯಾಲ, ಕುಮಾರ ಕಟ್ಟೆಪ್ಪನವರ, ವೀರಣ್ಣ ವಿಭೂತಿ, ಕುಮಾರ ರಾಮಾಪುರಮಠ ಸೇರಿದಂತೆ ಗುತ್ತಲ, ಕಲ್ಲೆದೇವರ, ಮೇವುಂಡಿ, ಹಿರೇಮೂಗದೂರ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು. ನಂತರ ಶ್ರೀಗಳ ಪಾದಯಾತ್ರೆಯು ಗುತ್ತಲದ ಕಡೆಗೆ ಸಾಗಿತು.

Religious Conversion: ಮತಾಂತರ ಕಾಯ್ದೆ ವಿರೋಧಿಸಿದರೆ ಕಾಂಗ್ರೆಸ್‌ ಭವಿಷ್ಯಕ್ಕೇ ಪೆಟ್ಟು:ರಂಭಾಪುರಿ ಶ್ರೀ

ಪಾದಯಾತ್ರೆಯ ಮಾರ್ಗ: ಶನಿವಾರ (ಸೆ. 3) ಪಾದಯಾತ್ರೆ ನೆಗಳೂರ ಗ್ರಾಮದಿಂದ ಹೊರಟು ಗುತ್ತಲ ಗುಡಿಹೊನ್ನತ್ತಿ ಮಾರ್ಗವಾಗಿ ರಾಣಿಬೆನ್ನೂರ ತಲುಪಿ ಸ್ಥಳೀಯ ಕೋಟೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮೊದಲನೇಯ ದಿನದ ಪಾದಯಾತ್ರೆ ಸಂಪನ್ನಗೊಳ್ಳುವುದು. ಸೆ. 4ರಂದು ಬೆಳಗ್ಗೆ ರಾಣಿಬೆನ್ನೂರಿನಿಂದ ಹೊರಟು ಹಲಗೇರಿ ತುಮ್ಮಿನಕಟ್ಟೆಮಾರ್ಗವಾಗಿ ರಟ್ಟಿಹಳ್ಳಿ ತಾಲೂಕಿನ ಹಳ್ಳೂರ ಸಪ್ತಮುಖಿ ಆಂಜನೇಯ ದೇವಸ್ಥಾನ ತಲುಪುವುದು. ಸೆ. 5ರಂದು ಬೆಳಗ್ಗೆ ಹಳ್ಳೂರಿಂದ ಪಾದಯಾತ್ರೆ ಪ್ರಾರಂಭಗೊಂಡು ಹನುಮ ಸಾಗರ ಹೊನ್ನಾಳಿ ಮಾರ್ಗವಾಗಿ ಶಿವಮೊಗ್ಗ ತಾಲೂಕಿನ ಚಿಲೂರು ವೀರಭದ್ರೇಶ್ವರ ದೇವಸ್ಥಾನ ತಲುಪಲಿದೆ. ಸೆ. 6ರಂದು ಬೆಳಗ್ಗೆ ಚಿಲೂರಿಂದ ಹೊರಡುವ ಪಾದಯಾತ್ರೆಯು ಹೊಳೆಆಲೂರ, ಹಣಸವಾಡಿ ಮಾರ್ಗವಾಗಿ ಶಿವಮೊಗ್ಗ ತಲುಪಿ ಸ್ಥಳೀಯ ಜ. ರೇಣುಕಾಚಾರ್ಯ ಐ.ಟಿ.ಐ ಕಾಲೇಜು ಆವರಣದಲ್ಲಿ ವಾಸ್ತವ್ಯ ಮಾಡುವರು. ಸೆ. 7ರ ಬೆಳಗ್ಗೆ ಶಿವಮೊಗ್ಗದಿಂದ ಅಮಂದೂರ ಮಾರ್ಗವಾಗಿ ಶಿವಮೊಗ್ಗ ತಾಲೂಕಿನ ಉಂಬಳಬೈಲು ತಲುಪುವುದು. ಸೆ. 8 ರಂದು ಬೆಳಗ್ಗೆ ಉಂಬಳಬೈಲಿನಿಂದ ಹೊರಡುವ ಪಾದಯಾತ್ರೆಯು ಕಣಬೂರ ಮಡಬೂರ ಮಾರ್ಗವಾಗಿ ಎನ್‌.ಆರ್‌. ಪುರ ತಾಲೂಕು ಕೇಂದ್ರದಲ್ಲಿಯ ಮುರಘಾಮಠ ತಲುಪುವುದು. ಸೆ. 9 ಶುಕ್ರವಾರ ಬೆಳಗ್ಗೆ ಎನ್‌.ಆರ್‌. ಪುರದಿಂದ ಹೊರಡುವ ಶ್ರೀಗಳ ಪದಯಾತ್ರೆಯು ಮೂಡೋಡಿ ಕೊಳಲಿ ಕ್ರಾಸ್‌ ಮಾರ್ಗವಾಗಿ ಬಾಳೆಹೊನ್ನೂರಿನ ರಂಭಾಪುರಿ ಪೀಠ ತಲುಪುವುದು.

Follow Us:
Download App:
  • android
  • ios