ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿದರೆ, ರಾಜ್ಯದ ಶೈಕ್ಷಣಿಕ ಸಂಸ್ಥೆಗಳು ಮತ್ತು ವಿಧಾನ ಮಂಡಲ ಕೇಸರಿಮಯವಾಗಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಎಚ್ಚರಿಸಿದ್ದಾರೆ. ಕಾಂಗ್ರೆಸ್ ಸರ್ಕಾರವು ಮುಸ್ಲಿಮರ ಓಲೈಕೆಗಾಗಿ ಹೈಕೋರ್ಟ್ ತೀರ್ಪನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಶಿವಮೊಗ್ಗ (ಮೇ.15): ಹಿಜಾಬ್ ವಿಚಾರದಲ್ಲಿ ರಾಜ್ಯ ಸರ್ಕಾರ ಹೈಕೋರ್ಟ್ ತೀರ್ಪನ್ನು ಉಲ್ಲಂಘನೆ ಮಾಡಿದೆ. ಶಾಲಾ-ಕಾಲೇಜಿಗೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದರೆ ರಾಜ್ಯದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು ಮಾತ್ರವಲ್ಲದೆ ಕರ್ನಾಟಕದ ವಿಧಾನ ಮಂಡಲ ಕೂಡ ಕೇಸರಿಮಯವಾಗಲಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.

ಅಸಮಾಧಾನಿತ ಮುಸ್ಲಿಮರನ್ನ ತೃಪ್ತಿಪಡಿಸಲು ಕಾಂಗ್ರೆಸ್ ಈ ತಂತ್ರ
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ದಾವಣಗೆರೆ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರವಾಗಿ ಅಸಮಾಧಾನಗೊಂಡಿದ್ದ ಮುಸ್ಲಿಮರನ್ನು ತೃಪ್ತಿಪಡಿಸಲು ಕಾಂಗ್ರೆಸ್ ಸರ್ಕಾರ ಈ ನಿರ್ಧಾರ ಮಾಡಿದೆ. ಬಿಜೆಪಿ ಸರ್ಕಾರದ ಸಮವಸ್ತ್ರ ನೀತಿಯನ್ನು ಹೈಕೋರ್ಟ್ ಸ್ವಾಗತಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಓಲೈಕೆಗಾಗಿ ನ್ಯಾಯಾಂಗದ ಆದೇಶವನ್ನು ಉಲ್ಲಂಘಿಸಿದ್ದು, ಸಂವಿಧಾನ ಮತ್ತು ಕಾನೂನಿನ ಬಗ್ಗೆ ಸದಾ ಮಾತನಾಡುವ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ಈಗ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಇದೇನಾ ಸರ್ವ ಜನಾಂಗದ ಶಾಂತಿಯ ತೋಟ?
ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳುತ್ತಲೇ, ಶಾಂತವಾಗಿರುವ ರಾಜ್ಯದಲ್ಲಿ ಹಿಂದೂ-ಮುಸ್ಲಿಂ ನಡುವೆ ಗೊಂದಲ ಸೃಷ್ಟಿಸಿ ಕೋಮು ಘರ್ಷಣೆಗೆ ಪ್ರಚೋದನೆ ನೀಡುತ್ತಿದ್ದಾರೆ. ಸರ್ಕಾರ ಕೂಡಲೇ ತನ್ನ ನಿರ್ಧಾರವನ್ನು ಕೈಬಿಟ್ಟು ಹೈಕೋರ್ಟ್ ಆದೇಶ ಮುಂದುವರೆಸಬೇಕು. ಇಲ್ಲದಿದ್ದರೆ ಹಿಂದೂ ಸಮಾಜ ಜಾಗೃತಗೊಂಡು ರಾಜ್ಯದಲ್ಲಿ ಮತ್ತೆ ಕೇಸರಿಮಯ ಸರ್ಕಾರ ಬರಲಿದೆ ಎಂದು ಗುಡುಗಿದರು.


