ಕೊಲ್ಲಿ ರಾಷ್ಟ್ರಗಳಲ್ಲಿನ ಯುದ್ಧದ ಭೀತಿಯಿಂದ ಸಂಡೂರಿನಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳಿಗಾಗಿ ಜನರು ಮುಗಿಬಿದ್ದಿದ್ದು, ಕೃತಕ ಅಭಾವದ ಆತಂಕ ಸೃಷ್ಟಿಯಾಗಿದೆ. ಗ್ಯಾಸ್ ಕಂಪನಿಗಳು ಕೊರತೆಯಿಲ್ಲವೆಂದು ಹೇಳುತ್ತಿದ್ದರೂ, ಬಳ್ಳಾರಿಯಲ್ಲಿ ಕಮರ್ಷಿಯಲ್ ಸಿಲಿಂಡರ್‌ಗಳ ಅಭಾವ ತಲೆದೋರಿದೆ.

ಸಂಡೂರು (ಮಾ.11): ಪಟ್ಟಣದಲ್ಲಿ ಮಂಗಳವಾರ ಬುಕ್ಕಿಂಗ್ ಕೇಂದ್ರದ ಬಳಿ ಸಿಲಿಂಡರ್‌ ಪಡೆಯಲು ಸಾರ್ವಜನಿಕರು ಮುಗಿಬಿದ್ದಿದ್ದ ದೃಶ್ಯ ಗಮನಿಸಿದರೆ ಕೊಲ್ಲಿ ರಾಷ್ಟ್ರಗಳಲ್ಲಿನ ಯುದ್ಧದಿಂದಾಗಿ ಅಡುಗೆ ಅನಿಲದ ಕೊರತೆಯ ಬಿಸಿ ನಿಧಾನವಾಗಿ ಜನತೆಗೆ ತಟ್ಟುತ್ತಿದೆ ಎನಿಸುತ್ತಿದೆ.

Add Asianetnews Kannada as a Preferred SourcegooglePreferred

ಒಂದೆಡೆ ಗ್ಯಾಸ್ ಕಂಪನಿಯವರು ಗ್ರಾಹಕರ ಮೊಬೈಲ್‌ಗಳಿಗೆ ಮೆಸೇಜ್‌ಗಳನ್ನು ಕಳುಹಿಸಿ, ದೇಶದಲ್ಲಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ತೊಂದರೆ ಇಲ್ಲ. ಸಾಕಷ್ಟು ಗ್ಯಾಸ್ ಲಭ್ಯವಿದೆ. ಕೆಲವರು ಸಾಮಾಜಿಕ ಮಾಧ್ಯಮಗಳ ಮೂಲಕ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ ಎಂಬ ವಿಷಯವನ್ನು ಹರಡುತ್ತಿದ್ದಾರೆ. ಜನತೆ ಈ ಕುರಿತು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ತಿಳಿಸಿದೆ.

ಏಜೆನ್ಸಿಯವರು ಗ್ಯಾಸ್ ಸಿಲಿಂಡರ್‌ಗಳಿಗೆ ಯಾವುದೇ ಕೊರತೆ ಇಲ್ಲ ಎಂದು ಹೇಳಿ ಸ್ಟಾಕ್ ಇರುವುದನ್ನು ವಿತರಿಸಿ, ಇನ್ನುಳಿದವರಿಗೆ ಸಿಲೆಂಡರ್‌ಗಳು ಪೂರೈಕೆಯಾದ ಕೂಡಲೆ ವಿತರಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ, ಬುಕ್ಕಿಂಗ್ ಕೇಂದ್ರದ ಮುಂದೆ ಮಧ್ಯಾಹ್ನದ ನಂತರ ಜನರ ದಟ್ಟಣೆ ಕಡಿಮೆಯಾಯಿತು.

ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧ ಮುಂದುವರಿದಿರುವುದು ಮತ್ತು ಯುದ್ಧದಿಂದಾಗಿ ದೇಶಕ್ಕೆ ಕಚ್ಚಾ ತೈಲ ಪೂರೈಕೆಯಾಗುತ್ತಿಲ್ಲ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಪೂರೈಕೆಯಲ್ಲಿ ತೊಂದರೆಯಾದರೆ ಮುಂದೆ ಹೇಗೆ ಎಂಬ ಆತಂಕದ ಭಾವನೆ ಜನತೆಯನ್ನು ಆವರಿಸತೊಡಗಿದೆ.

ಜನ ಸಂಗ್ರಾಮ ಪರಿಷತ್ ಹಾಗೂ ರೈತ ಸಂಘದ ಮುಖಂಡರಾದ ಶ್ರೀಶೈಲ ಆಲ್ದಳ್ಳಿ ಮುಂತಾದವರು ಪ್ರತಿಕ್ರಿಯಿಸಿ, ಯುದ್ಧ ಘೋಷಣೆಯಿಂದಾಗಿ ಕೇಂದ್ರ ಸರ್ಕಾರ ಮುಂಜಾಗ್ರತೆ ವಹಿಸಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರೆ, ಅಡುಗೆ ಅನಿಲದ ಕೊರತೆಯಾಗುತ್ತಿರಲಿಲ್ಲ. ಬಹುತೇಕ ಕೆಳ, ಮಧ್ಯಮ ವರ್ಗದ ಜನರು ದೈನಂದಿನ ಕೆಲಸಗಳನ್ನು ಬದಿಗೊತ್ತಿ ಸಿಲಿಂಡರ್ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಅನಿಲ ಕೃತಕ ಅಭಾವವನ್ನೇ ಬಂಡವಾಳ ಮಾಡಿಕೊಂಡು ಬ್ಲಾಕ್‌ನಲ್ಲಿ ಮಾರಾಟ ಮಾಡುವ ಸಾಧ್ಯತೆಗಳಿವೆ. ಕೂಡಲೆ ಸರ್ಕಾರ, ತಾಲೂಕು ಹಾಗೂ ಜಿಲ್ಲಾಡಳಿತ ಸಮರ್ಪಕವಾಗಿ ಬೇಡಿಕೆಗೆ ಅನುಗುಣವಾಗಿ ಅಡುಗೆ ಅನಿಲ ವಿತರಣೆಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಗೃಹ ಬಳಕೆಯ ಸಿಲಿಂಡರ್‌ಗಳಿಗೆ ಕೊರತೆಯಿಲ್ಲ

ಬಳ್ಳಾರಿ: ಪಶ್ಚಿಮ ಏಷ್ಯಾದಲ್ಲಿ ಭುಗಿಲೆದ್ದ ಸಂಘರ್ಷದಿಂದಾಗಿ ಜಾಗತಿಕ ಇಂಧನ ಬೆಲೆಗಳಲ್ಲಿ ತೀವ್ರ ಏರಿಕೆಯಾಗಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಹೆಚ್ಚಳದ ಬೆನ್ನಲ್ಲೇ ಇದೀಗ ಸಿಲಿಂಡರ್‌ ಅಭಾವ ಸೃಷ್ಟಿಯಾಗಿದೆ.ಗೃಹ ಬಳಕೆಯ ಸಿಲಿಂಡರ್‌ಗಳಿಗೆ ಈ ವರೆಗೆ ಕೊರತೆಯಾಗಿಲ್ಲ. ಆದರೆ, ಹೋಟೆಲ್, ಬೇಕರಿ ಮತ್ತಿತರ ಕಡೆ ಬಳಕೆ ಮಾಡುವ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಅಭಾವ ಎದುರಾಗಿದೆ. ಜಾಗತಿಕವಾಗಿ ನಡೆಯುತ್ತಿರುವ ಯುದ್ಧದ ಕಾರ್ಮೋಡ ಮುಂದುವರಿದರೆ ಗ್ಯಾಸ್ ಸಿಲಿಂಡರ್ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಡೀಲರ್‌ಗಳು ಹೇಳುತ್ತಿದ್ದು ಇದು ಹೋಟೆಲ್ ಉದ್ಯಮಿಗಳಿಗೆ ನುಂಗದ ತುತ್ತಾಗಿದೆ.

ಸದ್ಯಕ್ಕೆ ಒಂದು ವಾರದ ಮಟ್ಟಿಗೆ ಪೂರೈಕೆ ಮಾಡುವಷ್ಟು ಗ್ಯಾಸ್ ಸಿಲಿಂಡರ್‌ಗಳಿವೆ. ಬಳಿಕ ಪೂರೈಕೆಯನ್ನು ನೋಡಿಕೊಂಡೇ ನಾವು ಹೋಟೆಲ್ ಉದ್ಯಮಿಗಳಿಗೆ ವಿತರಣೆ ಮಾಡಬೇಕಾಗಿದ್ದು, ಮುಂದೆ ಏನಾಗಲಿದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಸಮಸ್ಯೆ ನೀಗಬಹುದು ಅಥವಾ ಸಿಲಿಂಡರ್ ಅಭಾವ ಸೃಷ್ಟಿಯಾಗಬಹುದು ಎಂದು ಡೀಲರ್‌ಗಳು ಹೇಳುತ್ತಿದ್ದಾರೆ. ಸದ್ಯಕ್ಕೆ ಹೋಟೆಲ್ ಉದ್ಯಮಿಗಳು 5 ಕೆಜಿ ತೂಕದ ಕಮರ್ಷಿಯಲ್ ಸಿಲಿಂಡರ್ ಬಳಕೆ ಮಾಡಲಾಗುತ್ತಿದ್ದು ಮುಂದೇನಾಗಬಹುದೋ ಎಂಬ ಆತಂಕದಲ್ಲಿದ್ದಾರೆ.

ಪ್ರತಿಯೊಬ್ಬರೂ ಗ್ಯಾಸ್ ಸಿಲಿಂಡರ್ ಮೇಲೆಯೇ ಅವಲಂಬಿತರಾಗಿದ್ದೇವೆ. ಹೋಟೆಲ್ ನಡೆಯುವುದೇ ಸಿಲಿಂಡರ್ ಲಭ್ಯತೆ ಮೇಲೆ. ಹೀಗಿರುವಾಗ ಕೊರತೆ ಎದುರಾದರೆ ಹೋಟೆಲ್ ಉದ್ಯಮ ನಡೆಸುವುದು ಹೇಗೆ ಎಂದು ಹೋಟೆಲ್ ಮಾಲೀಕರು ಪ್ರಶ್ನಿಸುತ್ತಿದ್ದಾರೆ.