ಬೆಂಗಳೂರು(ಫೆ.19): ನ್ಯಾಯಾಲಯ ಆದೇಶಿಸಿದ್ದರೂ ನಗರದಲ್ಲಿ ಮರ ಗಣತಿ ಆರಂಭಿಸದ ಮರ ಪ್ರಾಧಿಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತಗೆದುಕೊಂಡ ಹೈಕೋರ್ಟ್‌, ಪ್ರಾಧಿಕಾರ ಸದಸ್ಯರ ವಿರುದ್ಧ ನ್ಯಾಯಾಂಗ ನಿಂದನೆ ಅಡಿ ಕ್ರಮ ಜರುಗಿಸುವ ಇಂಗಿತ ವ್ಯಕ್ತಪಡಿಸಿದೆ.

ಮೆಟ್ರೋ ರೈಲು ಮಾರ್ಗ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ನಗರದಲ್ಲಿ ನೂರಾರು ಮರಗಳನ್ನು ಕತ್ತರಿಸಲಾಗುತ್ತಿದೆ ಎಂದು ಆರೋಪಿಸಿ ದತ್ತಾತ್ರೇಯ ಟಿ.ದೇವರೆ ಮತ್ತು ಬೆಂಗಳೂರು ಪರಿಸರ ಟ್ರಸ್ಟ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿ ಎಸ್‌.ಓಕ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.

ಪೊರಕೆ ಹಿಡಿವ ಕೈಗಳಿಗೆ ಬಿಬಿಎಂಪಿ ಫ್ಲ್ಯಾಟ್..!

ನಗರದಲ್ಲಿ ಮರ ಗಣತಿ ನಡೆಸುವಂತೆ ಮರ ಪ್ರಾಧಿಕಾರಕ್ಕೆ ಮರ ಗಣತಿ ಮಾಡಲು 2019ರ ಆಗಸ್ಟ್‌ 28 ಹೈಕೋರ್ಟ್‌ ಆದೇಶ ಮಾಡಿತ್ತು. ಆದರೆ, ಈವರೆಗೂ ಮರ ಗಣತಿ ಕಾರ್ಯ ಆರಂಭಿಸದಕ್ಕೆ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

ಮೆಟ್ರೋ ಕಾಮಗಾರಿ ವಿಳಂಬ:

ಈ ಮಧ್ಯೆ ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್‌ಸಿಎಲ್‌) ಪರ ವಕೀಲರು, ಮೆಟ್ರೋ ರೈಲು ಮಾರ್ಗ ಕಾಮಗಾರಿಗೆ ಅಡ್ಡಿಯಾಗಿರುವ ಮರಗಳನ್ನು ತೆರವುಗೊಳಿಸಲು ತಜ್ಞರ ವಿಶೇಷ ಸಮಿತಿ ಶಿಫಾರಸು ಮಾಡಿದೆ.

ಆದರೆ, ಸಮಿತಿಯ ಶಿಫಾರಸಿನಂತೆ ಕ್ರಮ ಕೈಗೊಳ್ಳದಂತೆ ಹೈಕೋರ್ಟ್‌ ಜ.27ರಂದು ಆದೇಶಿಸಿದೆ. ಇದರಿಂದ ಕಾಮಗಾರಿ ವಿಳಂಬವಾಗುತ್ತಿದ್ದು, ಈಗಾಗಲೇ ವೆಚ್ಚವು 52 ಕೋಟಿ ಹೆಚ್ಚಳವಾಗಿದೆ. ಯೋಜನೆ ಪ್ರಗತಿಯಲ್ಲಿದ್ದು, ಸಾರ್ವಜನಿಕರ ಹಣ ವ್ಯಯಿಸಲಾಗುತ್ತಿದೆ. ಆದ್ದರಿಂದ ಮಧ್ಯಂತರ ಆದೇಶ ತೆರವುಗೊಳಿಸಬೇಕು ಎಂದು ಕೋರಿದರು. ಅದಕ್ಕೆ ನ್ಯಾಯಪೀಠ, ತಜ್ಞರ ಸಮಿತಿ ಶಿಫಾರಸಿನ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಮಧ್ಯಂತರ ಆದೇಶ ತಿದ್ದುಪಡಿಗೆ ಅರ್ಜಿ ಸಲ್ಲಿಸುವಂತೆ ಬಿಎಂಆರ್‌ಸಿಎಲ್‌ಗೆ ನಿರ್ದೇಶಿಸಿತು.High court slams Tree Authority for not doing  Tree census