ಬೆಂಗಳೂರು(ಫೆ.19): ಬಿಬಿಎಂಪಿಯ ಪಶ್ಚಿಮ ವಲಯದ 60 ಕಾಯಂ ಪೌರಕಾರ್ಮಿಕರಿಗೆ ‘ಪೌರಕಾರ್ಮಿಕರ ಗೃಹಭಾಗ್ಯ ಯೋಜನೆ’ಯಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಿರುವ ಮನೆಗಳ (ಫ್ಲ್ಯಾಟ್‌) ಹಕ್ಕುಪತ್ರವನ್ನು ಮೇಯರ್‌ ಎಂ.ಗೌತಮ್‌ಕುಮಾರ್‌ ವಿತರಣೆ ಮಾಡಿದರು.

ಸೋಮವಾರ ಮಲ್ಲೇಶ್ವರದ ಐಪಿಪಿ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಪೌರಕಾರ್ಮಿಕರಿಗೆ ಹಕ್ಕುಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಉಪ ಮೇಯರ್‌ ರಾಮಮೋಹನ್‌ರಾಜು, ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ. ಮಂಜುನಾಥ್‌ರಾಜು. ವಲಯ ವಿಶೇಷ ಆಯುಕ್ತ ಬಸವರಾಜು, ಪಶ್ಚಿಮ ವಲಯ ಜಂಟಿ ಆಯುಕ್ತ ಚಿದಾನಂದ್‌ ಮೊದಲಾದವರು ಉಪಸ್ಥಿತರಿದ್ದರು.

ಫಲಾನುಭವಿಗಳ ಆಯ್ಕೆ ಹೇಗೆ?

ಕಾಯಂ ಪೌರಕಾರ್ಮಿಕರು 10 ರಿಂದ 15 ವರ್ಷಗಳವರೆಗೆ ಸೇವೆ ಸಲ್ಲಿಸಿರಬೇಕು. ಪೌರಕಾರ್ಮಿಕ ಅಥವಾ ಕುಟುಂಬದವರು ಸ್ವಂತ ಮನೆಯನ್ನು ಹೊಂದಿರಬಾರದು. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಲ್ಲಿ ಅಂತಹವರನ್ನು ಆದ್ಯತೆ ಮೇಲೆ ಪರಿಗಣಿಸಲಾಗಿದೆ.

ಪೌರಕಾರ್ಮಿಕರ ಮುಖಂಡ ಆಕ್ಷೇಪ

ಫಲಾನುಭವಿಗಳಿಗೆ ಫ್ಲ್ಯಾಟ್‌ಗಳ ಹಕ್ಕುಪತ್ರ ವಿತರಣೆ ಮಾಡುವ ಸಂದರ್ಭದಲ್ಲಿ ಪೌರಕಾರ್ಮಿಕರ ಸಂಘಟನೆಯ ಪದಾಧಿಕಾರಿಗಳನ್ನು ವೇದಿಕೆ ಮೇಲೆ ಆಹ್ವಾನಿಸಲಿಲ್ಲ ಎಂಬ ಕಾರಣಕ್ಕೆ ಸಂಘಟನೆಗಳ ಪದಾಧಿಕಾರಿಗಳು ಮೇಯರ್‌ ಮುಂದೆಯೇ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಮೇಯರ್‌ ಪರಿಸ್ಥಿತಿ ತಿಳಿಗೊಳಿಸಿ, ಕಾರ್ಯಕ್ರಮ ಮುಂದುವರಿಯಲು ಅನುವು ಮಾಡಿಕೊಟ್ಟರು.