ಮಂಗಳೂರು ವಿಮಾನ ದುರಂತ : ಖಾಸಗಿ ದೂರು ರದ್ದು
2010ರಲ್ಲಿ ಮಂಗಳೂರಿನಲ್ಲಿ ನಡೆದಿದ್ದ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ಏರ್ ಇಂಡಿಯಾ ಲಿಮಿಟೆಡ್ ಮತ್ತು ಅವುಗಳ ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ ಖಾಸಗಿ ದೂರನ್ನು ಹೈಕೋರ್ಟ್ ರದ್ದುಪಡಿಸಿದೆ.
ಬೆಂಗಳೂರು (ಮಾ.12): ಮಂಗಳೂರಿನ ಬಜ್ಪೆ ವಿಮಾನದ ನಿಲ್ದಾಣದಲ್ಲಿ 2010ರಲ್ಲಿ ನಡೆದಿದ್ದ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ, ಏರ್ ಇಂಡಿಯಾ ಲಿಮಿಟೆಡ್ ಮತ್ತು ಅವುಗಳ ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ ಖಾಸಗಿ ದೂರನ್ನು ಹೈಕೋರ್ಟ್ ರದ್ದುಪಡಿಸಿದೆ.
ಖಾಸಗಿ ದೂರು ಪರಿಗಣಿಸಿದ್ದ (ಕಾಗ್ನಿಜೆನ್ಸ್) ಮಂಗಳೂರು ಎರಡನೇ ಜೆಎಂಎಫ್‌ಸಿ ಕೋರ್ಟ್ ಕ್ರಮ ಪ್ರಶ್ನಿಸಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿ ಪೀಟರ್ ಅಬ್ರಹಾಂ, ಏರ್ ಇಂಡಿಯಾ ಲಿಮಿಟೆಡ್ ಅಧಿಕಾರಿ ಆನ್ಸರ್ಬಟ್ ಡಿಸೋಜಾ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.
ಆ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಅಶೋಕ್ ಜಿ. ನಿಜಗಣ್ಣನವರ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ, ಅರ್ಜಿದಾರರ ವಿರುದ್ಧ ದಾಖಲಾಗಿದ್ದ ಖಾಸಗಿ ದೂರು ಮತ್ತು ಅದನ್ನು ಆಧರಿಸಿ ಕಾಗ್ನಿಜೆನ್ಸ್ ತೆಗೆದುಕೊಂಡಿದ್ದ ಎರಡನೇ ಜೆಎಂಎಫ್‌ಸಿ ಕೋರ್ಟ್ ಕ್ರಮವನ್ನು ರದ್ದುಪಡಿಸಿ ಆದೇಶಿಸಿತು.
ಮಾಡೆಲಿಂಗ್‌ಗೆ ಬೆಂಗಳೂರು ಹೊರಟಿದ್ದ ವಿದ್ಯಾರ್ಥಿನಿ ನಿಗೂಢ ಸಾವು : ಮೂವರು ಅರೆಸ್ಟ್ ..
2010ರ ಮೇ 25ರಂದು ದುಬೈನಿಂದ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣಕ್ಕೆ ಬಂದಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೆ ಒಳಗಾಗಿ 152 ಪ್ರಯಾಣಿಕರು ಸಾವನ್ನಪ್ಪಿದ್ದರು. ಪ್ರಕರಣ ಕುರಿತು 2012ರ ಮಾ.6ರಂದು ಮಂಗಳೂರು ಮೂಲದ ‘812 ಫೌಂಡೇಷನ್’ ಖಾಸಗಿ ದೂರು ದಾಖಲಿಸಿತ್ತು. ಐಸಿಎಒ ಮಾನದಂಡಗಳ ಅನುಸಾರ ಕಾರ್ಯನಿರ್ವಹಣೆಗೆ ವಿಮಾನ ನಿಲ್ದಾಣ ಯೋಗ್ಯವಾಗಿರಲಿಲ್ಲ. ಆದರೂ ವೈಮಾನಿಕ ಚಟುವಟಿಕೆಗಳ ನಿರ್ವಹಣೆಗೆ ಅನುಮತಿ ನೀಡಲಾಗಿತ್ತು. ಏರ್ ಇಂಡಿಯಾ ಪ್ರಾಧಿಕಾರ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯದ ನಿರ್ದೇಶಕರ ಸಂಪೂರ್ಣ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಆದ್ದರಿಂದ ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಆರೋಪದಡಿ ಅರ್ಜಿದಾರರ ವಿರುದ್ಧ ಮಂಗಳೂರು ಎರಡನೇ ಜೆಎಂಎಫ್‌ಸಿ ನ್ಯಾಯಾಲಯ 2013ರ ಫೆ.19ರಂದು ಕಾಗ್ನಿಜೆನ್ಸ್ ತೆಗೆದುಕೊಂಡಿತ್ತು. ಈ ಕ್ರಮ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳನ್ನು ಹೈಕೋರ್ಟ್ ಪುರಸ್ಕರಿಸಿದೆ.
ಈ ಅರ್ಜಿಗಳನ್ನು ಪುರಸ್ಕರಿಸಿದ ಹೈಕೋರ್ಟ್, ಡೀಮ್‌್ಡ ಪೂರ್ವಾನುಮತಿ ಆಧಾರದ ಮೇಲೆ ಅರ್ಜಿದಾರರ ವಿರುದ್ಧ ಎರಡನೇ ಜೆಎಂಎಫ್‌ಸಿ ಕೋರ್ಟ್ ಕಾಗ್ನಿಜೆನ್ಸ್ ತೆಗೆದುಕೊಂಡಿದೆ. ಆದರೆ, ಇದೇ ಪ್ರಕರಣದ ಆರೋಪಿಯಾಗಿದ್ದ ಪೈಲಟ್ ಅದೇ ಘಟನೆಯಲ್ಲಿ ಸಾವನ್ನಪ್ಪಿದ್ದರು. ಅದರ ಆಧಾರದ ಮೇಲೆ ಪ್ರಕರಣ ಕುರಿತ ಹಿಂದಿನ ದೋಷಾರೋಪ ಪಟ್ಟಿಯನ್ನು ಮುಕ್ತಾಯಗೊಳಿಸಿತ್ತು. ಈ ಅಂಶವನ್ನು ಪರಿಗಣಿಸದೆ ಎರಡನೇ ಜೆಎಂಎಫ್‌ಸಿ ಕೋರ್ಟ್ ಕಾಗ್ನಿಜೆನ್ಸ್ ತೆಗೆದುಕೊಂಡಿರುವುದು ಕ್ರಮ ಕಾನೂನು ಬಾಹಿರ ಎಂದು ಹೇಳಿದೆ.