Asianet Suvarna News Asianet Suvarna News

ಮಾಡೆಲಿಂಗ್‌ಗೆ ಬೆಂಗಳೂರು ಹೊರಟಿದ್ದ ವಿದ್ಯಾರ್ಥಿನಿ ನಿಗೂಢ ಸಾವು : ಮೂವರು ಅರೆಸ್ಟ್

ಮಾಡೆಲಿಂಗ್‌ಗಾಗಿ ಬೆಂಗಳೂರು ಹೊರಟಿದ್ದ ವಿದ್ಯಾರ್ಥಿನಿ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.  ಯುವತಿ ಗೆಳೆಯರೆನ್ನಲಾದ ಮೂವರನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

3 Arrested For Bengaluru College girl Suspicious Death Case snr
Author
Bengaluru, First Published Mar 11, 2021, 3:33 PM IST

ಉಳ್ಳಾಲ (ಮಾ.11):  ಕಾಲೇಜು ವಿದ್ಯಾರ್ಥಿನಿಯೋರ್ವಳ ಶವ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ಕುಂಪಲ ಆಶ್ರಯ ಕಾಲನಿಯಲ್ಲಿ ಬುಧವಾರ ನಡೆದಿದೆ. ಕೊಲೆ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಯುವತಿ ಗೆಳೆಯರೆನ್ನಲಾದ ಮೂವರನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಕುಂಪಲ ಆಶ್ರಯ ಕಾಲನಿ ನಿವಾಸಿ ಚಿತ್ತಪ್ರಸಾದ್‌ ಮತ್ತು ಕವಿತಾ ದಂಪತಿ ಪುತ್ರಿ ಪ್ರೇಕ್ಷಾ (17) ಮೃತದೇಹ  ಪತ್ತೆಯಾಗಿದೆ. ತಾಯಿ ಅಂಗನವಾಡಿಯಲ್ಲಿ ಕೆಲಸಕ್ಕಿದ್ದು, ತಂದೆ ಗ್ಯಾಸ್‌ ಲೈನ್‌ ವಾಹನದಲ್ಲಿ ಕಾರ್ಯ ನಿರ್ವಹಿಸುವವರಾಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕೃತ್ಯ ನಡೆದಿದೆ. ಮಧ್ಯಾಹ್ನ ತಾಯಿ ಅಂಗನವಾಡಿಯಿಂದ ಮನೆಗೆ ಊಟಕ್ಕೆಂದು ಬಂದಾಗ ಮುಂಬಾಗಿಲು ಮುಚ್ಚಿತ್ತು. ಹಿಂಬದಿಯ ಬಾಗಿಲು ತೆರೆದಿತ್ತು. ಒಳಪ್ರವೇಶಿಸಿ ನೋಡಿದಾಗ ಬೆಡ್‌ ರೂಮಿನಲ್ಲಿ ಫ್ಯಾನಿಗೆ ನೇಣುಬಿಗಿದ ಸ್ಥಿತಿಯಲ್ಲಿ ಪ್ರೇಕ್ಷಾ ಮೃತದೇಹ ಪತ್ತೆಯಾಗಿದೆ.

ಕಾಲೇಜಿಗೆ ರಜೆ ಹಾಕಿ ಮನೆಯಲ್ಲಿದ್ದಳು : ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದಳು ...

ಬೆಂಗಳೂರಿಗೆ ತೆರಳುವವರಿದ್ದರು: ಕೊಲ್ಯ ನಿವಾಸಿ ವ್ಯಕ್ತಿಯೋರ್ವರು ಮಾಡೆಲಿಂಗ್‌ ಶೂಟ್‌ಗಾಗಿ ಪ್ರೇಕ್ಷಾಳನ್ನು ಬೆಂಗಳೂರಿಗೆ ಕೊಂಡೊಯ್ಯುವವರಿದ್ದರು. ಮಧ್ಯಾಹ್ನ 2 ಗಂಟೆಗೆ ಹೊರಡುವ ತಯಾರು ಮಾಡಲಾಗಿತ್ತು. ಆದರೆ ಇದೇ ವಿಚಾರವಾಗಿ ಹೆತ್ತವರು ಅಸಮಾಧಾನ ವ್ಯಕ್ತಪಡಿಸಿದ್ದರು. ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಪ್ರೇಕ್ಷಾ ಕಾಲೇಜಿಗೆ ತೆರಳದೆ ಮನೆಯಲ್ಲೇ ಉಳಿದಿದ್ದರು. ಆದರೆ ಇಂದು ಬೆಂಗಳೂರಿಗೆ ತೆರಳಲು ತಯಾರಾಗಿದ್ದ ಪ್ರೇಕ್ಷಾಳ ನಡೆಯನ್ನು ತಾಯಿ ಕವಿತಾ ಬೆಳಗ್ಗೆ ವಿರೋಧಿಸಿದ್ದರು. ಮಾಡೆಲಿಂಗ್‌ ಹವ್ಯಾಸ ಹೊಂದಿದ್ದ ಪ್ರೇಕ್ಷಾ, ಬೆಂಗಳೂರಿನಲ್ಲಿ ಧಾರವಾಹಿಯೊಂದರಲ್ಲಿ ನಟಿಸಲು ಅವಕಾಶ ಸಿಕ್ಕಿರುವ ಕುರಿತು ಗೆಳತಿಯರಲ್ಲಿ ತಿಳಿಸಿದ್ದರು. ಅಲ್ಲದೆ ಇತ್ತೀಚೆಗೆ ಮಂಗಳೂರಿನ ಸಾಯಿ ಪ್ಯಾಲೇಸ್‌ ಹೊಟೇಲಿನಲ್ಲಿ ಜರಗಿದ್ದ ಟೀನ್‌ ತುಳುನಾಡ್‌ -2020ರಲ್ಲಿ ಟಾಪ್‌ -5 ಫೈನಲಿಸ್ವ್‌ ಆಗಿದ್ದರು.

ಮೂವರು ವಶಕ್ಕೆ: ಘಟನೆ ಸಂಬಂಧ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇವರಲ್ಲಿ ಓರ್ವ ಪ್ರೇಕ್ಷಾಳ ಗೆಳೆಯನಾಗಿದ್ದು, ಅಸೌಖ್ಯದ ಸಂದರ್ಭ ಔಷಧಿಗೂ ಕರೆದೊಯ್ಯುತ್ತಿದ್ದನು. ಯುವತಿ ಮೃತದೇಹ ಪತ್ತೆಯಾಗುವ ಕೆಲ ನಿಮಿಷಗಳ ಮುನ್ನ ಮೂವರು ಆಕೆಯ ಮನೆ ಎದುರುಗಡೆ ಸುತ್ತಾಡುವುದನ್ನು ಸ್ಥಳೀಯರು ಕಂಡಿದ್ದರು. ಅವರಿಂದ ದೊರೆತ ಮಾಹಿತಿಯನ್ವಯ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಮೀಷನರ್‌ ಭೇಟಿ: ಘಟನಾ ಸ್ಥಳಕ್ಕೆ ಮಂಗಳೂರು ಪೊಲೀಸ್‌ ಕಮೀಷನರ್‌ ಶಶಿಕುಮಾರ್‌ ಭೇಟಿ ನೀಡಿದರು. ಅರ್ಧ ಗಂಟೆಯ ಕಾಲ ಪ್ರೇಕ್ಷಾಳ ತಾಯಿ ಜತೆಗೆ ಮಾತನಾಡಿದ್ದೇನೆ. ಮೇಲ್ನೋಟಕ್ಕೆ ಪ್ರಕರಣ ಆತ್ಮಹತ್ಯೆ ಎಂಬುದು ಕಂಡುಬಂದಿದೆ. ವಾರದಿಂದ ಅಸೌಖ್ಯದಿಂದ ಇದ್ದ ಪ್ರೇಕ್ಷಾ, ಇಂದು ಬೆಂಗಳೂರಿಗೆ ತೆರಳುವವಳಿದ್ದಳು. ಇದನ್ನು ತಾಯಿ ಆಕ್ಷೇಪಿಸಿದ್ದರು ಎಂದು ಮಾಧ್ಯಮಗಳಿಗೆ ತಿಳಿಸಿದರು.

ಕೊಲೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ, ಫಾರೆನ್ಸಿಕ್‌ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು. ಉಳ್ಳಾಲ ಠಾಣಾಧಿಕಾರಿ ಸಂದೀಪ್‌ ನೇತೃತ್ವದಲ್ಲಿ ತನಿಖೆ ಆರಂಭವಾಗಿದ್ದು, ಯುವತಿ ಮೃತದೇಹ ದೇರಳಕಟ್ಟೆಕ್ಷೇಮ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

Follow Us:
Download App:
  • android
  • ios