ಉಚಿತ ಊಟ: ಮಧ್ಯರಾತ್ರಿ ಪಾಲಿಕೆ-ಹೋಟೆಲ್ಸ್‌ ಫೈಟ್‌, ಮತ ಚಲಾಯಿಸಿದವರಿಗೆ ಹೋಟೆಲ್‌ಗಳಲ್ಲಿ ಉಚಿತ ತಿಂಡಿ, ಪಾನೀಯ ನೀಡುವ ವಿಚಾರ, ಮಧ್ಯರಾತ್ರಿ ಹೈಕೋರ್ಟ್‌ನಲ್ಲಿ ವಿಚಾರಣೆ, ಮುಂಜಾನೆ ತೀರ್ಪು. 

ಬೆಂಗಳೂರು(ಮೇ.11): ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮತ ಚಲಾಯಿಸಿದವರಿಗೆ ಹೋಟೆಲ್‌ಗಳು ಉಚಿತವಾಗಿ ಆಹಾರ ಪದಾರ್ಥ ಒದಗಿಸುವ ಘೋಷಣೆಗೆ ಸಂಬಂಧಿಸಿದ ಮೇಲ್ಮನವಿಯನ್ನು ಹೈಕೋರ್ಟ್‌ ವಿಭಾಗೀಯ ಪೀಠ ಮಂಗಳವಾರ ತಡರಾತ್ರಿ ವಿಚಾರಣೆ ನಡೆಸಿ ಆದೇಶ ಪ್ರಕಟಿಸಿದ ಅಪರೂಪದ ಸಂಗತಿ ನಡೆದಿದೆ.

ಮತ ಹಾಕಿ ಬಂದವರಿಗೆ ಉಚಿತವಾಗಿ ಆಹಾರ ಪದಾರ್ಥ ಪೂರೈಸಲು ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘ ಮತ್ತು ಎಸ್‌.ಪಿ.ಕೃಷ್ಣರಾಜ ಅವರ ಮಾಲಿಕತ್ವದ ನಿಸರ್ಗ ಗ್ರ್ಯಾಂಡ್‌ ಹೋಟೆಲ್‌ಗೆ ಏ.15ರಂದು ನೀಡಲಾಗಿದ್ದ ಅನುಮತಿ ಹಿಂಪಡೆದು ಬಿಬಿಎಂಪಿ ಸಹಾಯಕ ಆಯುಕ್ತರು (ಚುನಾವಣೆ) ಮೇ 9ರಂದು ಸಂಜೆ ಪತ್ರಿಕಾ ಪ್ರಕಟಣೆ ನೀಡಿದ್ದರು.

Karnataka election 2023: ರಾಜ್ಯದಲ್ಲಿ ಶೇ.72.67 ಮತದಾನ, ದಾಖಲೆ ಬರೆದ ಮತದಾರ!

ಬಿಬಿಎಂಪಿ ಸಹಾಯಕ ಆಯುಕ್ತರ ಕ್ರಮ ಪ್ರಶ್ನಿಸಿ ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘ ಮತ್ತು ನಿಸರ್ಗ ಗ್ರ್ಯಾಂಡ್‌ ಹೋಟೆಲ್‌ ಮಾಲಿಕರು ಮಂಗಳವಾರ ರಾತ್ರಿ 7.30ಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದರು. ರಾತ್ರಿ 8ಕ್ಕೆ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಏಕ ಸದಸ್ಯ ನ್ಯಾಯಪೀಠ, ರಾತ್ರಿ 8.30ರ ಸುಮಾರಿಗೆ ಆಯುಕ್ತರ ಕ್ರಮಕ್ಕೆ ತಡೆಯಾಜ್ಞೆ ನೀಡಿ ಆದೇಶ ಮಾಡಿತ್ತು. ಈ ಆದೇಶ ಪ್ರಶ್ನಿಸಿ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಆದ ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಬಿಬಿಎಂಪಿ ಸಹಾಯಕ (ಚುನಾವಣೆ) ಆಯುಕ್ತರು ರಾತ್ರಿ 11ಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಅದರ ವಿಚಾರಣೆಗೆ ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠ (ವಿಶೇಷ ನ್ಯಾಯಪೀಠ) ರಚನೆ ಮಾಡಲಾಗಿತ್ತು.

ಮಂಗಳೂರು: ಕೈ - ಕಮಲ ಕಾರ್ಯಕರ್ತರ ನಡುವೆ ಘರ್ಷಣೆ: ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕಾರು ಧ್ವಂಸ

ವಿಭಾಗೀಯ ಪೀಠ ಮಂಗಳವಾರ ರಾತ್ರಿ 11.45ಕ್ಕೆ ಮೇಲ್ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡು ಒಂದು ಗಂಟೆ ವಿಚಾರಣೆ ನಡೆಸಿ, ಏಕ ಸದಸ್ಯ ನ್ಯಾಯಪೀಠದ ಆದೇಶ ಸೂಕ್ತವಾಗಿದ್ದು, ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ. ಆದರೆ, ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘದ ಸದಸ್ಯ ಹೋಟೆಲ್‌ಗಳು ಮತ್ತು ಇತರೆ ಯಾವುದೇ ಹೋಟೆಲ್‌ಗಳು, ಮತದಾರರಿಗೆ ಆಮಿಷವೊಡ್ಡಿದರೆ ಅಥವಾ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದರೆ, ಅವುಗಳ ವಿರುದ್ಧ ಮೇಲ್ಮನವಿದಾರರು ಕಾನೂನು ಪ್ರಕಾರ ಕ್ರಮ ಜರುಗಿಸಬಹುದು ಎಂದು ಆದೇಶಿಸಿ ಏಕ ಸದಸ್ಯ ಪೀಠದ ಆದೇಶವನ್ನು ತಿದ್ದುಪಡಿ ಮಾಡಿತು. ಈ ಆದೇಶದ ಪ್ರತಿಯು ಪಕ್ಷಗಾರರಿಗೆ ಮಧ್ಯರಾತ್ರಿ ಸುಮಾರು 2.15ಕ್ಕೆ ಲಭ್ಯವಾಗಿದೆ.
ಬಿಬಿಎಂಪಿ ಸಹಾಯಕ ಆಯುಕ್ತರ ಪರ ಹಿರಿಯ ವಕೀಲ ಜಯಕುಮಾರ್‌ ಎಸ್‌.ಪಾಟೀಲ್‌ ಮತ್ತು ಹೋಟೆಲ್‌ ಸಂಘದ ಪರ ವಕೀಲ ಸತೀಶ್‌ ಭಟ್‌ ವಾದ ಮಂಡಿಸಿದ್ದರು.

ಆಗಿದ್ದು ಏನೇನು?

ಮತ ಚಲಾಯಿಸಿದವರಿಗೆ ಹೋಟೆಲ್‌ಗಳಲ್ಲಿ ಉಚಿತ ಊಟಕ್ಕೆ ಪ್ರಸ್ತಾವನೆ
ಏ.15: ಹೋಟೆಲ್‌ ಮಾಲಿಕರ ಪ್ರಸ್ತಾವನೆಗೆ ಒಪ್ಪಿಗೆ ನೀಡಿದ್ದ ಬಿಬಿಎಂಪಿ
ಮೇ 9: ಸಂಜೆ ಅನುಮತಿ ನೀಡಿದ್ದ ಅನುಮತಿ ಹಿಂಪಡೆದು ಪಾಲಿಕೆ ಆದೇಶ
ಸಂಜೆ 7.30: ಪಾಲಿಕೆ ಆದೇಶ ವಿರುದ್ಧ ಕೋರ್ಟ್‌ಗೆ ಹೋಟೆಲ್‌ ಮಾಲಿಕರ ಅರ್ಜಿ
ರಾತ್ರಿ 8: ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಏಕ ಸದಸ್ಯ ನ್ಯಾಯಪೀಠ
ರಾತ್ರಿ 8.30: ಅನುಮತಿ ಹಿಂಪಡೆದ ಬಿಬಿಎಂಪಿ ಆದೇಶಕ್ಕೆ ಪೀಠ ತಡೆಯಾಜ್ಞೆ
ರಾತ್ರಿ 11: ಏಕ ಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಪಾಲಿಕೆ ಮೇಲ್ಮನವಿ
ರಾತ್ರಿ 11.45: ಮೇಲ್ಮನವಿ ವಿಚಾರಣೆಗೆ ಕೈಗೆತ್ತಿಕೊಂಡು 1 ಗಂಟೆ ವಿಚಾರಣೆ
ಮುಂಜಾನೆ 2.15: ಪಕ್ಷದಾರರಿಗೆ ವಿಭಾಗೀಯ ಪೀಠದ ತೀರ್ಪು ಲಭ್ಯ