ನಿಮಗೇನು ಅಧಿಕಾರವಿದೆ : ಶಾಸಕ ಹ್ಯಾರಿಸ್ ಪತ್ರಕ್ಕೆ ಆಕ್ಷೇಪ
ಶಾಸಕ ಹ್ಯಾರಿಸ್ ಪತ್ರಕ್ಕೆ ಹೈ ಅಸಮಾಧಾನ ಹೊರಹಾಕಿದ್ದು ನಿಮಗೇನು ಅಧಿಕಾರವಿದೆ ಶಿಫಾರಸ್ಸು ಮಾಡಲು ಎಂದು ಪ್ರಶ್ನೆ ಮಾಡಿದೆ.
ಬೆಂಗಳೂರು [ಮಾ.13]: ಪೊಲೀಸರ ವರ್ಗಾವಣೆ ಸಂಬಂಧ ವಿಧಾನಸಭೆ ಮತ್ತು ವಿಧಾನ ಪರಿಷತ್ತು ಸದಸ್ಯರು ಮತ್ತು ಸಂಸದರು ನೀಡುವ ಶಿಫಾರಸು ಪತ್ರಗಳನ್ನು ನಿರ್ಲಕ್ಷಿಸಲಾಗುವುದು ಎಂದು ರಾಜ್ಯ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಹೈಕೋರ್ಟ್‌ಗೆ ಭರವಸೆ ನೀಡಿದ್ದಾರೆ.
ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ನಿಯಮ ಬಾಹಿರವಾಗಿ ಶಿಫಾರಸು ಮಾಡಿರುವ 24 ಜನಪ್ರತಿನಿಧಿಗಳ ವಿರುದ್ಧ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆ ನಡೆಸಲು ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು.
ಪೊಲೀಸರ ವರ್ಗಾವಣೆಗೆ ಅಥವಾ ಕಾರ್ಯ ನಿರ್ವಹಿಸುತ್ತಿರುವ ಹಾಲಿ ಜಾಗದಲ್ಲೇ ಉಳಿಸುವುದಕ್ಕೆ ವಿಧಾನಸಭೆ ಮತ್ತು ವಿಧಾನಪರಿಷತ್ತು ಸದಸ್ಯರು, ಸಂಸದರು ನೀಡುವ ಶಿಫಾರಸು ಪತ್ರಗಳನ್ನು ಸರ್ಕಾರದಿಂದ ನಿರ್ಲಕ್ಷಿಸಲಾಗುತ್ತದೆ. ಹಾಗೆಯೇ, ಪೊಲೀಸ್ ವರ್ಗಾವಣೆ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ಮತ್ತು ಪ್ರಕಾಶ್‌ಸಿಂಗ್ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ತೀರ್ಪನ್ನು ಕಡ್ಡಾಯವಾಗಿ ಪಾಲಿಸಲಾಗುವುದು ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.
ಕಾಂಗ್ರೆಸ್‌ಗೆ ಬಂಡೆ ಬಿಗ್ ಬಾಸ್: ಕುಮಾರಸ್ವಾಮಿ ಬೆಚ್ಚಿ ಬಿದ್ದರೇಕೆ..?...
ಅದನ್ನು ದಾಖಲಿಸಿಕೊಂಡ ನ್ಯಾಯಪೀಠ, ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ನಿಯಮ ಬಾಹಿರವಾಗಿ ಶಿಫಾರಸು ಮಾಡಿರುವ 24 ಜನಪ್ರತಿನಿಧಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ವಿಧಾನಸಭೆ ಸ್ಪೀಕರ್‌ಗೆ ಮನವಿ ಸಲ್ಲಿಸಿದ್ದಾರೆ. ಅರ್ಜಿದಾರರ ಈ ಮನವಿಯನ್ನು ಸರ್ಕಾರ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ನಿರ್ದೇಶಿಸಿ ಅರ್ಜಿಯನ್ನು ಇತ್ಯರ್ಥಪಡಿಸಿತು.
ಹ್ಯಾರಿಸ್ ಪತ್ರಕ್ಕೆ ಆಕ್ಷೇಪ
ಪ್ರಕರಣದಲ್ಲಿ ಪ್ರತಿವಾದಿಯಾಗಿದ್ದ ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಪರ ವಕೀಲರು ವಿಚಾರಣೆಗೆ ಹಾಜರಿದ್ದರು. ನ್ಯಾಯಪೀಠವು ಅವರನ್ನು ಉದ್ದೇಶಿಸಿ, ಪೊಲೀಸ್ ವರ್ಗಾವಣೆಗೆ ಶಿಫಾರಸು ಮಾಡಲು ಶಾಸಕರಿಗೇನು ಅಧಿಕಾರವಿದೆ, ಏಕೆ ನೀವು ಪೊಲೀಸ್ ವರ್ಗಾವಣೆಗೆ ಶಿಫಾರಸು ಮಾಡಿದಿರಿ ಎಂದು ಪ್ರಶ್ನಿಸಿತು. ಹ್ಯಾರಿಸ್ ಪರ ವಕೀಲರು ಉತ್ತರಿಸಿ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಹುದ್ದೆ ಖಾಲಿಯಿದ್ದ ಕಾರಣ ಸಾರ್ವಜನಿಕ ಹಿತದೃಷ್ಟಿಯಿಂದ ಸೂಕ್ತ ಅಧಿಕಾರಿಯನ್ನು ನೇಮಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಆದರೆ, ಯಾವುದೇ ಒತ್ತಡ ಹಾಕಿಲ್ಲ ಎಂದರು. ನ್ಯಾಯಪೀಠ ಆಕ್ಷೇಪಿಸಿ, ನೀವು ಖಾಲಿ ಹುದ್ದೆಯ ಭರ್ತಿಗೆ ಶಿಫಾರಸು ಮಾಡಿಲ್ಲ. ಬದಲಾಗಿ ಇಂತಹ ಅಧಿಕಾರಿಯನ್ನೇ ನೇಮಿಸಲು ಸೂಚಿಸಿದ್ದೀರಿ. ಕಾನೂನು ಪ್ರಕಾರ ಈ ಧೋರಣೆ ಸರಿಯಲ್ಲ ಎಂದು ನುಡಿಯಿತು.