Bengaluru: ಬೌರಿಂಗ್ ಆಸ್ಪತ್ರೆ ಅವ್ಯವಸ್ಥೆಗೆ ನ್ಯಾಯಮೂರ್ತಿ ವೀರಪ್ಪ ಕಿಡಿ
ನಗರದ ಅಟಲ್‌ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬೌರಿಂಗ್) ಆಸ್ಪತ್ರೆಗೆ ಶನಿವಾರ ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ಅವ್ಯವಸ್ಥೆ ಮತ್ತು ಅಸ್ವಚ್ಛತೆ ನೋಡಿ ಕಿಡಿಕಾರಿದರು.
ಬೆಂಗಳೂರು (ಅ.09): ನಗರದ ಅಟಲ್‌ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬೌರಿಂಗ್) ಆಸ್ಪತ್ರೆಗೆ ಶನಿವಾರ ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ದಿಢೀರ್ ಭೇಟಿ ನೀಡಿ ಆಸ್ಪತ್ರೆಯ ಅವ್ಯವಸ್ಥೆ ಮತ್ತು ಅಸ್ವಚ್ಛತೆ ನೋಡಿ ಕಿಡಿಕಾರಿದರು. ದೊಡ್ಡ ವಾರ್ಡ್‌ಗಳಲ್ಲಿ ಹಾಸಿಗೆ ಅಸ್ವಚ್ಛತೆ, ಅಧಿಕ ವೈದ್ಯರ ರಜೆ, ಕಿತ್ತುಹೋಗಿರುವ ಶೌಚಾಲಯಗಳನ್ನು ಕಂಡ ನ್ಯಾಯಮೂರ್ತಿಗಳು ವೈದ್ಯರನ್ನು ತರಾಟೆಗೆ ತೆಗೆದುಕೊಂಡು ಸೌಲಭ್ಯ ನೀಡಿದರೂ ಆಸ್ಪತ್ರೆಗಳು ಜನರ ಕಾಳಜಿ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನ್ಯಾಯಮೂರ್ತಿಗಳು ಮೊದಲು ಹೊರರೋಗಿಗಳ ವಿಭಾಗ (ಒಪಿಡಿ) ಕೊಠಡಿಗಳಿಗೆ ಭೇಟಿ ನೀಡಿ ರೋಗಿಗಳು ಮತ್ತು ಅವರ ಸಂಬಂಧಿಗಳನ್ನು ವಿಚಾರಿಸಿದ ಬಳಿಕ ರೋಗಿಗಳಿಗೆ ನೀಡುತ್ತಿರುವ ಸೌಲಭ್ಯಗಳ ಕುರಿತು ವೈದ್ಯರಿಂದ ಮಾಹಿತಿ ಪಡೆದರು. ಚರ್ಮರೋಗ ತಜ್ಞರ ವಿಭಾಗದಲ್ಲಿ ಒಂದೇ ದಿನ ಆರು ವೈದ್ಯರಲ್ಲಿ ಐದು ಮಂದಿ ರಜೆ ಇರುವ ಬಗ್ಗೆ ಸಿಟ್ಟಾದ ಅವರು, ಒಮ್ಮೆಗೆ ಹೆಚ್ಚು ರೋಗಿಗಳು ಬಂದರೆ ನೀವೊಬ್ಬರೆ ಹೇಗೆ ಚಿಕಿತ್ಸೆ ನೀಡುತ್ತೀರಾ ಎಂದು ಹಾಜರಿದ್ದ ವೈದ್ಯರನ್ನು ಪ್ರಶ್ನಿಸಿದರು.
ಡ್ರಾಮ ಜೂನಿಯರ್ಸ್ ವೇದಿಕೆಯಲ್ಲಿ ಜನಪ್ರಿಯ ನ್ಯಾ. ಶ್ರೀ ಬಿ ವೀರಪ್ಪ
ಆಸ್ಪತ್ರೆಯಲ್ಲಿ ಲಭ್ಯವಿರುವ ಉಚಿತ ಸೇವೆ ಹಾಗೂ ಸೌಲಭ್ಯಗಳ ಬಗ್ಗೆ ಶಸ್ತ್ರ ಚಿಕಿತ್ಸೆ ವಿಭಾಗದ ವೈದ್ಯ ಡಾ. ಕೆಂಪರಾಜು ಮಾಹಿತಿ ನೀಡಿದರು. ಬಳಿಕ ಒಳರೋಗಿಗಳ ವಾರ್ಡ್‌ಗಳಲ್ಲಿ ಹಾಸಿಗೆಗಳು ಅಸ್ವಚ್ಛತೆಯಿಂದ ಕೂಡಿರುವುದು, 20-30 ಹಾಸಿಗೆಗಳಿರುವ ವಾರ್ಡ್‌ಗಳಲ್ಲಿ ಇಬ್ಬರು ಮೂವರು ರೋಗಿಗಳಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಆಸ್ಪತ್ರೆ ವೈದ್ಯರು ಹಬ್ಬದ ಹಿನ್ನೆಲೆ ರೋಗಿಗಳ ಸಂಖ್ಯೆ ಕಡಿಮೆ ಇದೆ ಎಂದು ಉತ್ತರಿಸಿದರು. ಹಬ್ಬ ಬಂತು ಅಂತಾ ರೋಗ ಬರಲ್ವಾ? ಎಷ್ಟುಹಾಸಿಗೆ ಖಾಲಿ ಇವೆ, ಎಷ್ಟುಬಳಕೆಯಾಗುತ್ತಿವೆ ವರದಿ ನೀಡಿ ಎಂದು ಸಂಬಂಧಪಟ್ಟವೈದ್ಯರಿಗೆ ಸೂಚಿಸಿದರು. ಸರಿಯಾಗಿ ಚಿಕಿತ್ಸೆ ಲಭ್ಯವಿದ್ದರೆ ಹೆಚ್ಚಿನ ರೋಗಿಗಳು ಬರುತ್ತಾರೆ. ಇಲ್ಲದಿದ್ದರೆ ಖಾಸಗಿ ಕಡೆ ಹೋಗುತ್ತಾರೆ ಎಂದು ಕಿಡಿಕಾರಿದರು.
ಪೊರಕೆ ಕೊಡಿ ನಾನೇ ಸ್ವಚ್ಛಗೊಳಿಸುತ್ತೇನೆ!: ಆಸ್ಪತ್ರೆಯ ಔಷಧಾಲಯದಲ್ಲಿ (ಮೆಡಿಕಲ್ ಸ್ಟೋರ್) ಸ್ವಚ್ಛತೆ ಇಲ್ಲದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು ನಾನೇ ಕ್ಲೀನ್ ಮಾಡುತ್ತೇನೆ ಪೊರಕೆ ಕೊಡಿ ಎಂದರು. ಈಗ ತೆರೆದಿದ್ದೇವೆ, ಸ್ವಚ್ಛಗೊಳಿಸಲಾಗುವುದು ಎಂಬಿತ್ಯಾದಿ ಸಮಜಾಯಿಷಿಯನ್ನು ಸಿಬ್ಬಂದಿ ನೀಡಲು ಮುಂದಾದರೂ ಒಪ್ಪದ ಅವರು, ಆಸ್ಪತ್ರೆಯಲ್ಲಿ ಎಷ್ಟುಮಂದಿ ವೈದ್ಯರು ಹಾಗೂ ಸಿಬ್ಬಂದಿ ಇದ್ದಾರೆ, ಎಷ್ಟುಖಾಲಿ ಹುದ್ದೆಗಳಿವೆ ಸಂಪೂರ್ಣ ಮಾಹಿತಿ ನೀಡಿ ಎಂದರು.
ಆಸ್ಪತ್ರೆ ಮುಖ್ಯಸ್ಥರನ್ನು ಹುಡುಕುತ್ತಿದ್ದೇನೆ: ಆಸ್ಪತ್ರೆಯ ಯಜಮಾನರು ಯಾರು ಎಂದು ಗೊತ್ತಿಲ್ಲ. ಅವರು ಬೆಳಿಗ್ಗೆಯಿಂದ ಸಂಜೆಯವರೆಗೆ ಇರಬೇಕು. ಆಸ್ಪತ್ರೆಗೆ ಬಂದಾಗಿನಿಂದ ಹುಡುಕುತ್ತಿದ್ದರೂ ಅವರು ಸಿಕ್ಕಿಲ್ಲ ಎಂದು ನ್ಯಾಯಮೂರ್ತಿ ಬಿ.ವೀರಪ್ಪ ಆಸ್ಪತ್ರೆಯ ನಿರ್ದೇಶಕ, ವೈದ್ಯಕೀಯ ಅಧೀಕ್ಷಕರು ಹಾಜರಿಲ್ಲದ ಕುರಿತು ಬೇಸರ ವ್ಯಕ್ತಪಡಿಸಿದರು.
ಲೋಕ ಅದಾಲತ್‌ನಲ್ಲಿ ದಾಖಲೆಯ 7.6 ಲಕ್ಷ ಕೇಸ್ ರಾಜಿ: ನ್ಯಾ.ವೀರಪ್ಪ
ಆಸ್ಪತ್ರೆಗಳ ಅವ್ಯವಸ್ಥೆ ಬಗ್ಗೆ ದೂರು-ಸರ್ಕಾರಕ್ಕೆ ವರದಿ: ಆಸ್ಪತ್ರೆ ಪರಿಶೀಲನೆ ಬಳಿಕ ಮಾತನಾಡಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರು, ‘ರಾಜ್ಯ ಕಾನೂನು ಪ್ರಾಧಿಕಾರಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಕರ್ಯ ಸರಿಯಿಲ್ಲ ಎಂದು ರಾಜ್ಯದ ಎಲ್ಲ ಕಡೆಯಿಂದ ದೂರುಗಳು ಬರುತ್ತಿವೆ. ಹೀಗಾಗಿ, ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಲಾಗಿತ್ತು. ಆಸ್ಪತ್ರೆಯಲ್ಲಿ 750 ಹಾಸಿಗೆಗಳಿದ್ದು, 100ಕ್ಕಿಂತ ಕಡಿಮೆ ಮಂದಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೌಚಾಲಯಗಳು ಕಿತ್ತೊಗಿದ್ದು, ಆಸ್ಪತ್ರೆ ವಾರ್ಡ್‌ಗಳಲ್ಲಿ ಸ್ವಚ್ಛತೆ ಇಲ್ಲ, ಸರ್ಕಾರ ಎಲ್ಲಾ ಸೌಲಭ್ಯ ಕೊಟ್ಟರು ಆಸ್ಪತ್ರೆ ವೈದ್ಯರು ಉತ್ತಮವಾಗಿ ನಿರ್ವಹಣೆ ಮಾಡಿಕೊಂಡು, ಜನರ ಕಾಳಜಿ ಮಾಡುತ್ತಿಲ್ಲ. ರಜೆ ಅಂತಾ ಸುಮಾರು ವೈದ್ಯರು ಬಂದಿಲ್ಲ. ಕೆಲವರಷ್ಟೇ ಕಾಣಿಸಿದರು. ಆಸ್ಪತ್ರೆಗಳ ಬಗ್ಗೆ ಸರ್ಕಾರ ಹೆಚ್ಚು ಮುತುವರ್ಜಿ ವಹಿಸಬೇಕು. ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗುವುದು’ ಎಂದು ತಿಳಿಸಿದರು.