Asianet Suvarna News Asianet Suvarna News

ಸಂಪತ್‌ ರಾಜ್‌ ಬಂಧನಕ್ಕೆ ಕ್ರಮ ಕೈಗೊಳ್ಳಿ: ಹೈಕೋರ್ಟ್‌

ಸಂಪತ್‌ ರಾಜ್‌ ಪತ್ತೆ ಹಚ್ಚಿ ಬಂಧಿಸಲು ಪೊಲೀಸರು ಸಾಧ್ಯವಿರುವ ಎಲ್ಲ ಕ್ರಮ ಕೈಗೊಳ್ಳಬೇಕು| ಮುಂದಿನ ವಿಚಾರಣೆ ವೇಳೆ ತನಿಖಾ ಪ್ರಗತಿ ವರದಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು ಪೊಲೀಸರಿಗೆ ಸೂಚಿಸಿದ ನ್ಯಾಯಾಲಯ| 

High Court Has Directed to Police for Arrest Sampat Raj grg
Author
Bengaluru, First Published Nov 14, 2020, 8:54 AM IST

ಬೆಂಗಳೂರು(ನ.14): ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ, ತಲೆಮರೆಸಿಕೊಂಡಿರುವ ಮಾಜಿ ಮೇಯರ್‌ ಸಂಪತ್‌ ರಾಜ್‌ ಬಂಧಿಸಲು ಸಾಧ್ಯವಿರುವ ಎಲ್ಲ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಹೈಕೋರ್ಟ್‌ ಶುಕ್ರವಾರ ನಿರ್ದೇಶಿಸಿದೆ.

ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ಗಲಭೆಯಿಂದ ಉಂಟಾಗಿರುವ ನಷ್ಟಮೊತ್ತವನ್ನು ಅಂದಾಜು ಮಾಡಿ ಹೊಣೆಗಾರಿಕೆ ನಿಗದಿಪಡಿಸಲು ಹಾಗೂ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಲು ಕೋರಿ ಸಲ್ಲಿಕೆಯಾಗಿದ್ದ ಪ್ರತ್ಯೇಕ ನಾಲ್ಕು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಡಿ.ಜೆ.ಹಳ್ಳಿ ಗಲಭೆ: ಸಂಪತ್‌ ರಾಜ್‌ ವಿರುದ್ಧ ಕ್ರಮಕ್ಕೆ ಸೋನಿಯಾಗೆ ಮನವಿ, ಅಖಂಡ

ಸರ್ಕಾರಿ ವಕೀಲರು ಹಾಜರಾಗಿ, ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಾಜಿ ಮೇಯರ್‌ ಸಂಪತ್‌ರಾಜ್‌ ತಲೆ ಮರೆಸಿಕೊಂಡಿದ್ದಾರೆ. ಅವರಿಗೆ ವಿಚಾರಣಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಆ ಹೇಳಿಕೆ ದಾಖಲಿಸಿಕೊಂಡ ಪೀಠ, ಆರೋಪಿ ಸಂಪತ್‌ ರಾಜ್‌ರನ್ನು ಪತ್ತೆ ಹಚ್ಚಿ ಬಂಧಿಸಲು ಪೊಲೀಸರು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಮುಂದಿನ ವಿಚಾರಣೆ ವೇಳೆ ತನಿಖಾ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು ಸೂಚಿಸಿತು.ಹಾಗೆಯೇ, ಪ್ರಕರಣದಲ್ಲಿ ಉಂಟಾಗಿರುವ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟದ ಮೊತ್ತವನ್ನು ಅಂದಾಜಿಸಲು ನೇಮಕಗೊಂಡಿರುವ ಕ್ಲೇಮು ಕಮಿಷನರ್‌ಗೆ ನೀಡಿರುವ ಸವಲತ್ತುಗಳ ಕುರಿತು ನ್ಯಾಯಪೀಠ ಸರ್ಕಾರಿ ವಕೀಲರಿಂದ ಮಾಹಿತಿ ಪಡೆದುಕೊಂಡಿತು. ನಂತರ ಕಾರು ಹಾಗೂ ಬೆರಳಚ್ಚುಗಾರರು ಸೇರಿದಂತೆ ಕ್ಲೇಮು ಕಮಿಷನರ್‌ ಅವರಿಗೆ ಅಗತ್ಯವಿರುವ ಎಲ್ಲ ಸೌಲಭ್ಯವನ್ನು ಕೂಡಲೇ ಒದಗಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.
 

Follow Us:
Download App:
  • android
  • ios