ವಂಚನೆ ಪ್ರಕರಣ| ಎಫ್‌ಐಆರ್‌, ದೋಷಾರೋಪಪಟ್ಟಿ ರದ್ದು| ಐಎಂಎ ಸಂಸ್ಥೆ ಯಾವುದೇ ತಪ್ಪು ಮಾಡಿಲ್ಲ. ಅದರ ಮುಖ್ಯಸ್ಥ ಮತ್ತು ನಿರ್ದೇಶಕರ ವಿರುದ್ಧ ಕ್ರಮ ಜರುಗಿಸುವ ಅಗತ್ಯವಿಲ್ಲ’ ಎಂದು ವರದಿಯಲ್ಲಿ ಶಿಫಾರಸು| ರೋಷನ್‌ ಆಸ್ತಿ ಜಪ್ತಿಗೆ ಕ್ರಮಕೈಗೊಳ್ಳಲು ಸೂಚನೆ| ಸಿಬಿಐ ವರದಿಗಾಗಿ ಕಾಯಬೇಕಿಲ್ಲ: ಹೈಕೋರ್ಟ್‌| 

ಬೆಂಗಳೂರು(ಮಾ.20): ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಐಜಿಪಿ ಹೇಮಂತ್‌ ನಿಂಬಾಳ್ಕರ್‌ ವಿರುದ್ಧ ಸಿಬಿಐ ದಾಖಲಿಸಿರುವ ಎಫ್‌ಐಆರ್‌ ಮತ್ತು ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ರದ್ದುಪಡಿಸಿ ಹೈಕೋರ್ಟ್‌ ತೀರ್ಪು ನೀಡಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಸಿಬಿಐ ದಾಖಲಿಸಿರುವ ಎಫ್‌ಐಆರ್‌, ಹೆಚ್ಚುವರಿ ದೋಷಾರೋಪ ಪಟ್ಟಿ ಹಾಗೂ ಅದನ್ನು ಆಧರಿಸಿ ಸಿಬಿಐ ವಿಶೇಷ ನ್ಯಾಯಾಲಯ ತೆಗೆದುಕೊಂಡ ಕಾಗ್ನಿಜೆನ್ಸ್‌ ಮತ್ತು ಪ್ರಾಸಿಕ್ಯೂಷನ್‌ಗಾಗಿ ರಾಜ್ಯ ಸರ್ಕಾರ ನೀಡಿದ ಪೂರ್ವಾನುಮತಿ ರದ್ದುಪಡಿಸುವಂತೆ ಕೋರಿ ಹೇಮಂತ್‌ ನಿಂಬಾಳ್ಕರ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಜಾನ್‌ ಮೈಕೆಲ್‌ ಕುನ್ಹಾ ಅವರು ಶುಕ್ರವಾರ ಪ್ರಕಟಿಸಿದರು.

‘ಐಎಂಎ ಸಂಸ್ಥೆ ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸಿದ ಬಗ್ಗೆ ಕಮರ್ಷಿಯಲ್‌ ಸ್ಟ್ರೀಟ್‌ ಠಾಣಾ ಸಬ್‌ ಇನ್ಸ್‌ಪೆಕ್ಟರ್‌ ಆಗಿದ್ದ ಇ.ಬಿ. ಶ್ರೀಧರ್‌ ನೀಡಿದ್ದ ವಿಚಾರಣಾ ವರದಿಯನ್ನು ಸಿಐಡಿ ಡಿಜಿಪಿ ಆಗಿದ್ದ ನಿಂಬಾಳ್ಕರ್‌ ಅವರು ರಾಜ್ಯ ಡಿಜಿ-ಐಜಿಪಿಗೆ ರವಾನಿಸಿದ್ದಾರೆ. ‘ಐಎಂಎ ಸಂಸ್ಥೆ ಯಾವುದೇ ತಪ್ಪು ಮಾಡಿಲ್ಲ. ಅದರ ಮುಖ್ಯಸ್ಥ ಮತ್ತು ನಿರ್ದೇಶಕರ ವಿರುದ್ಧ ಕ್ರಮ ಜರುಗಿಸುವ ಅಗತ್ಯವಿಲ್ಲ’ ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಆರ್‌ಬಿಐ ಮನವಿ ಹೊರತಾಗಿಯೂ ಬಿ.ಇ ಶ್ರೀಧರ್‌ ನೀಡಿದ್ದ ವರದಿ ಮರು ಪರಿಶೀಲಿಸಿಲ್ಲ ಎಂಬ ಕಾರಣಕ್ಕೆ ನಿಂಬಾಳ್ಕರ್‌ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. ಆದರೆ, ವಿಚಾರಣಾ ವರದಿ ರವಾನಿಸಿದ ಮತ್ತು ಬಿ.ಇ. ಶ್ರೀಧರ್‌ ನೀಡಿದ್ದ ವರದಿ ಮರು ಪರಿಶೀಲಿಸದ ಕಾರಣಕ್ಕೆ ಅರ್ಜಿದಾರರು ಸುಳ್ಳು ವರದಿ ಸಲ್ಲಿಸಿದ್ದಾರೆ. ‘ಅಧಿಕಾರ ದುರ್ಬಳಕೆ ಮಾಡಿಕೊಂಡು ಐಎಂಎ ಸಂಸ್ಥೆಗೆ ನೆರವು ನೀಡಿದ್ದಾರೆ. ಅದರ ಪ್ರತಿಫಲವಾಗಿ ಕಾನೂನು ಬಾಹಿರವಾಗಿ ಹಣ ಮತ್ತು ಚಿನ್ನಾಭರಣ ಪಡೆದಿದ್ದಾರೆ’ ಎಂಬ ಅಭಿಪ್ರಾಯಕ್ಕೆ ನ್ಯಾಯಾಲಯ ಬರಲು ಸಾಧ್ಯವಿಲ್ಲ. ಮೇಲಾಗಿ ಅರ್ಜಿದಾರರ ವಿರುದ್ಧದ ಆರೋಪ ಸಾಬೀತುಪಡಿಸುವಂತಹ ಸೂಕ್ತ ಸಾಕ್ಷ್ಯಧಾರ ಇಲ್ಲ’ ಎಂದು ನ್ಯಾಯಪೀಠ ತೀರ್ಪಿನಲ್ಲಿ ತಿಳಿಸಿದೆ.

ಎನ್‌ಒಸಿಗಾಗಿ 5 ಕೋಟಿ ಲಂಚ ಕೊಟ್ಟಿದ್ದ IMA

ಅಲ್ಲದೆ, ನಿಂಬಾಳ್ಕರ್‌ ಅವರ ಅರ್ಜಿಯನ್ನು ಪುರಸ್ಕರಿಸಿ ಅವರ ವಿರುದ್ಧ ಸಿಬಿಐ ದಾಖಲಿಸಿದ ಎಫ್‌ಐಆರ್‌, ಪೂರಕ ದೋಷಾರೋಪ ಪಟ್ಟಿ, ಅದನ್ನು ಆಧರಿಸಿ ಸಿಬಿಐ ವಿಶೇಷ ನ್ಯಾಯಾಲಯದ ತೆಗೆದುಕೊಂಡ ಕಾಗ್ನಿಜೆನ್ಸ್‌ ಮತ್ತು ಪ್ರಾಸಿಕ್ಯೂಷನ್‌ಗೆ ಸರ್ಕಾರ ನೀಡಿದ ಪೂರ್ವಾನುಮತಿಯನ್ನು ರದ್ದುಪಡಿಸಿ ನ್ಯಾಯಪೀಠ ಆದೇಶಿಸಿದೆ.

ಪ್ರಕರಣ ಏನು?:

ಐಎಂಎ ವಂಚನೆ ಹಗರಣದ ಸಂಬಂಧ ದೂರುಗಳು ದಾಖಲಾಗುವ ಸಂದರ್ಭದಲ್ಲಿ ಸಿಐಡಿಯ ಆರ್ಥಿಕ ಅಪರಾಧ ತನಿಖಾ ವಿಭಾಗದ ಮುಖ್ಯಸ್ಥರಾಗಿ (ಐಜಿಪಿ) ಹೇಮಂತ್‌ ನಿಂಬಾಳ್ಕರ್‌ ಕಾರ್ಯ ನಿರ್ವಹಿಸುತ್ತಿದ್ದರು. ಈ ವೇಳೆ ನಿಂಬಾಳ್ಕರ್‌ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ. ಜತೆಗೆ, ಐಎಂಎ ಸಂಸ್ಥೆಗೆ ಪೂರಕವಾಗಿ ಕೆಲಸ ಮಾಡಿದ್ದಾರೆ ಎಂಬ ಆರೋಪದ ಮೇಲೆ ಸಿಬಿಐ 2020ರ ಫೆ.2ರಂದು ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಿತ್ತು. ಸರ್ಕಾರವು 2020ರ ಸೆ.9ರಂದು ನೀಡಿದ ಪೂರ್ವಾನುಮತಿ ಮೇರೆಗೆ ಸಿಬಿಐ ತನಿಖಾಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪ ಪಟ್ಟಿಸಲ್ಲಿಸಿದ್ದರು. ಅದನ್ನು ಆಧರಿಸಿ ನ.6ರಂದು ವಿಶೇಷ ನ್ಯಾಯಾಲಯವು ನಿಂಬಾಳ್ಕರ್‌ ವಿರುದ್ಧ ಕಾಗ್ನಿಜೆನ್ಸ್‌ ತೆಗೆದುಕೊಂಡಿತ್ತು. ಈ ಎಲ್ಲಾ ಪ್ರಕ್ರಿಯೆಯ ರದ್ದತಿಗೆ ಕೋರಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ರೋಷನ್‌ ಆಸ್ತಿ ಜಪ್ತಿಗೆ ಕ್ರಮಕೈಗೊಳ್ಳಲು ಸೂಚನೆ

ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಎದುರಿಸುತ್ತಿರುವ ಮಾಜಿ ಶಾಸಕ ಆರ್‌. ರೋಷನ್‌ ಬೇಗ್‌ ಅವರ ಆಸ್ತಿಯನ್ನು ಜಪ್ತಿ ಮಾಡುವ ಕುರಿತಂತೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.
ಹಗರಣದ ಸಂಬಂಧ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ನೇತೃತ್ವದ ನ್ಯಾಯಪೀಠ ಈ ನಿರ್ದೇಶನ ನೀಡಿತು. ಐಎಂಎ ಪ್ರಕರಣದಲ್ಲಿ ಸಿಬಿಐ ಅಂತಿಮ ವರದಿ ಸಲ್ಲಿಸುವವರೆಗೆ ಸರ್ಕಾರವು ಕಾಯಬೇಕಿಲ್ಲ. ವರದಿಗಾಗಿ ಕಾಯುತ್ತಿರುವುದು ತಪ್ಪು ನಡೆಯಾಗುತ್ತದೆ. ಹೀಗಾಗಿ, ರೋಷನ್‌ ಬೇಗ್‌ ಅವರ ಆಸ್ತಿ ಜಪ್ತಿ ಮಾಡುವ ಕುರಿತು ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು ಏ.16ರೊಳಗೆ ನಿರ್ಧಾರ ಕೈಗೊಳ್ಳಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.

3,243 ಮಂದಿಗೆ ಪರಿಹಾರ

ವಿಚಾರಣೆ ವೇಳೆ ಐಎಂಎ ಹಗರಣ ಸಂಬಂಧ ನೇಮಕಗೊಂಡಿರುವ ಸಕ್ಷಮ ಪ್ರಾಧಿಕಾರ ಪ್ರಮಾಣ ಪತ್ರ ಸಲ್ಲಿಸಿ, ಸಂಸ್ಥೆಯಿಂದ ವಶಪಡಿಸಿಕೊಂಡ 5.3 ಕೋಟಿ ನಗದು ಪ್ರಾಧಿಕಾರದ ಬಳಿಯಿತ್ತು. ಆ ಹಣವನ್ನು ಠೇವಣಿದಾರರಿಗೆ ಮರು ಪಾವತಿ ಮಾಡಲು ವಿಶೇಷ ನ್ಯಾಯಾಲಯ ಸೂಚನೆ ನೀಡಿತ್ತು. ಅದರಂತೆ ಅರ್ಹತೆ ಆಧಾರದ ಮೇಲೆ 3,243 ಠೇವಣಿದಾರರಿಗೆ ಒಟ್ಟು 4.92 ಕೋಟಿ ಮರು ಪಾವತಿ ಮಾಡಲಾಗಿದೆ. ಕೆಲ ಠೇವಣಿದಾರರಿಗೆ ಪೂರ್ತಿ ಹಣ, ಮತ್ತೆ ಕೆಲವರಿಗೆ ಭಾಗಶಃ ಹಣ ಮರುಪಾವತಿ ಮಾಡಲಾಗಿದೆ ಎಂದು ತಿಳಿಸಿದರು. ಈ ಪ್ರಮಾಣ ಪತ್ರ ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆ ಮುಂದೂಡಿತು.