ಕಾರವಾರ: ವಿದ್ಯುತ್ ಫ್ರೀ ಆಸೆಯಲ್ಲಿದ್ದವರಿಗೆ ಹೆಸ್ಕಾಂ ಶಾಕ್..!

ಗೃಹಜ್ಯೋತಿ ಯೋಜನೆಯಲ್ಲಿ 200 ಯುನಿಟ್ ಫ್ರೀ ಸಿಗುತ್ತದೆ ಎಂದು ಖುಷಿಯಲ್ಲಿದ್ದ ಜನರಿಗೆ ಹೆಸ್ಕಾಂ ಇಲಾಖೆ ಭರ್ಜರಿ ದರ ಹೆಚ್ಚಳ ಮಾಡಿ ದೊಡ್ಡ ಶಾಕನ್ನೇ ನೀಡಿದ್ದು, ಇದೀಗ ಜನರು ಹಿಂದಿನಂತೆಯೇ ನಿಗದಿ ದರ ಇರಲಿ, ನಮಗೆ ಯಾವುದೇ ಫ್ರೀ ವಿದ್ಯುತ್ ಬೇಡ ಎನ್ನುವಂತಾಗಿದೆ.

HESCOM Shock for Those Who Want Free Electricity in Uttara Kannada grg

ಭರತ್‌ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಕಾರವಾರ(ಜೂ.09):  ರಾಜ್ಯ ಸರ್ಕಾರ ಪ್ರತೀ ಮನೆಗೆ 200 ಯೂನಿಟ್ ಉಚಿತ ನೀಡುವುದಾಗಿ ಘೋಷಣೆಯನ್ನು ಮಾಡಿದೆ. ಇದರಿಂದಾಗಿ ಮುಂದಿನ ತಿಂಗಳಿಂದ ತಮಗೆ ಉಚಿತ ವಿದ್ಯುತ್ ಅಂತಾ ಖುಷಿಯಲ್ಲಿದ್ದ ಉತ್ತರಕನ್ನಡ ಜಿಲ್ಲೆಯ ಜನರಿಗೆ ಇದೀಗ ದುಪ್ಪಟ್ಟು ದರದ ಬಿಲ್ ಗಳು ಶಾಕ್ ನೀಡಲಾರಂಭಿಸಿವೆ. ಹೆಸ್ಕಾಂನ ವಿದ್ಯುತ್ ದರ ಹೆಚ್ಚಳ ಗ್ರಾಹಕರನ್ನು ತಲ್ಲಣಗೊಳಿಸಿದ್ದು, ಜನರು ಸರಕಾರದ ಮೇಲೆ ಅಸಮಾಧಾನ ವ್ಯಕ್ತಪಡಿಸಲಾರಂಭಿಸಿದ್ದಾರೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ...

HESCOM Shock for Those Who Want Free Electricity in Uttara Kannada grg

ಗೃಹ ಜ್ಯೋತಿ ಯೋಜನೆಯ ಆಸೆ ತೋರಿಸಿ ಜನರಿಗೆ ಶಾಕ್ ಕೊಟ್ಟ ರಾಜ್ಯ ಸರ್ಕಾರ

ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯಲ್ಲಿ ಪ್ರತಿ ಮನೆಗಳಿಗೆ 200 ಯುನಿಟ್ ವಿದ್ಯುತ್ ಉಚಿತ ನೀಡುವುದಾಗಿ ಸರಕಾರ ತಿಳಿಸಿದೆ. ಆದ್ರೆ, ಇದರ ಜೊತೆಗೆ ವಿದ್ಯುತ್ ಬಿಲ್ ನ ದರವನ್ನು ಯರ್ರಾಬಿರ್ರಿ ಹೆಚ್ಚು ಮಾಡಲಾಗಿದ್ದು, ಉತ್ತರಕನ್ನಡ ಜಿಲ್ಲೆಯ ಹೆಸ್ಕಾಂ ಇಲಾಖೆ ಗ್ರಾಹಕರಿಗೆ ಒಂದು ಪಟ್ಟು ಹೆಚ್ಚು ದರ ವಿಧಿಸಿ ಶಾಕ್ ನೀಡಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಹೆಸ್ಕಾಂ ನಿಂದ ಪ್ರತಿ 0-100 ಯುನಿಟ್‌‌ಗೆ ಪ್ರತೀ ಒಂದು ಯುನಿಟ್ ಮೇಲೆ 4.75ರೂ. ದರ ನಿಗದಿ ಮಾಡಲಾಗಿದ್ದು, 100 ಯುನಿಟ್ ಗೂ ಹೆಚ್ಚಾದಲ್ಲಿ ಪ್ರತೀ ಯುನಿಟ್ ಮೇಲೆ 7.00ರೂ. ದರ ವಿಧಿಸಲಾಗುತ್ತಿದೆ. ಇನ್ನು ಸಾಮಾನ್ಯ ಬಿಲ್‌ಗಳ ಮೇಲೆ  ಮಿನಿಮಮ್ ಚಾರ್ಜ್ ಎಂದು ಫಿಕ್ಸ್ ಚಾರ್ಜ್- 330, ಎಫ್‌ಎಸಿ- 91.80ರೂ. ಟ್ಯಾಕ್ಸ್- 15.39 ಸೇರಿಸಿ 437.19ರೂ. ಪಾವತಿ ಮಾಡಬೇಕಾಗುತ್ತದೆ. ಇದರ ಮೇಲೆ ಜನರು ಬಳಕೆ ಮಾಡಿದ ವಿದ್ಯುತ್ ಯುನಿಟ್ ಲೆಕ್ಕ ಸೇರಿಸಲಾಗುತ್ತದೆ. ಈ ತಿಂಗಳ ಬಿಲ್ ನಲ್ಲಿಯೇ ವಿದ್ಯುತ್  ದರ ಹೆಚ್ಚಾಗಿರುವುದು ನೋಡಿ ಜನರಿಗೆ ಶಾಕ್ ಮೇಲೆ ಶಾಕ್ ಕಾಣಿಸಿಕೊಂಡಿದೆ. ವಿದ್ಯುತ್ ದರ ಜತೆಗೆ ಆಹಾರ ಪದಾರ್ಥಗಳ ದರ ಸಹ ಹೆಚ್ಚಾಗತೊಡಗಿದ್ದು, ಸರ್ಕಾರ ಹೇಳಿದ್ದೇ ಬೇರೆ ಈಗ ಮಾಡುತ್ತಿರುವುದೇ ಬೇರೆ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಂಕುಸ್ಥಾಪನೆ ಮುಗಿದು ಎರಡು ವರ್ಷಕಳೆದರೂ ನಿರ್ಮಾಣಗೊಳ್ಳದ ಶಿರಸಿ ಬಸ್‌ಸ್ಟ್ಯಾಂಡ್‌!

ಮನೆಗಳ ವಿದ್ಯುತ್ ಬಿಲ್ ಅಲ್ಲದೇ ವಾಣಿಜ್ಯ ಮಳಿಗೆಗಳಿಗೂ ವಿದ್ಯುತ್ ದರ ಹೆಚ್ಚು ಮಾಡಲಾಗಿದೆ. ಅಂಗಡಿ ಹಾಗೂ ಇತರ ಉದ್ಯಮ ನಡೆಸುವವರಿಗೆ ದೊಡ್ಡ ತಲೆನೋವಾಗಿ ಕಾಣಿಸಿಕೊಂಡಿದೆ. ಜನ ಸಾಮಾನ್ಯರ ಮನೆಗಳಲ್ಲಂತೂ 600ರೂ., 900ರೂ., 1500ರೂ. ಬಿಲ್ ಬರುತ್ತಿದ್ದವರಿಗೆ ಈ ಬಾರಿ 1,500ರೂ., 2000ರೂ, 3000ರೂ. ಬಿಲ್‌ಗಳು ಬಂದಿರೋದು ತಲೆ ಮೇಲೆ ಹೊಡೆದಂತಾಗಿದೆ. ಸಣ್ಣ ಸಣ್ಣ ಅಂಗಡಿಗಳನ್ನು ನಡೆಸುವವರು, ದಿನಗೂಲಿ ಮಾಡುವವರಿಗೆ ಇದು ಶಾಕ್ ನೀಡಿದ್ದು, ದುಡಿದ ಹಣವನ್ನು ಕೂಡಾ ವಿದ್ಯುತ್ ಬಿಲ್ ಪಾವತಿಸಲು ನೀಡಬೇಕಲ್ಲಾ ಎಂದು ಬೇಸರದಲ್ಲಿದ್ದಾರೆ. ಇನ್ನು ಸರಕಾರ ತಿಳಿಸಿರುವ 200 ಯುನಿಟ್ ಫ್ರೀ ವಿಚಾರದಲ್ಲಿ ವಾರ್ಷಿಕ ಸರಾಸರಿ ನೋಡಿ ಕೇವಲ ಶೇ.10ರಷ್ಟು ಹೆಚ್ಚು ಬಳಕೆಗೆ ಮಾತ್ರ ಅವಕಾಶ ಎಂದು ತಿಳಿಸಿದೆ‌. ಇದು ಜನರಲ್ಲಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದ್ದು, ಸರಳ ನಿಯಮಗಳ ಮೂಲಕ ಈ ಗೊಂದಲ ಪರಿಹರಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ಗೃಹಜ್ಯೋತಿ ಯೋಜನೆಯಲ್ಲಿ 200 ಯುನಿಟ್ ಫ್ರೀ ಸಿಗುತ್ತದೆ ಎಂದು ಖುಷಿಯಲ್ಲಿದ್ದ ಜನರಿಗೆ ಹೆಸ್ಕಾಂ ಇಲಾಖೆ ಭರ್ಜರಿ ದರ ಹೆಚ್ಚಳ ಮಾಡಿ ದೊಡ್ಡ ಶಾಕನ್ನೇ ನೀಡಿದ್ದು, ಇದೀಗ ಜನರು ಹಿಂದಿನಂತೆಯೇ ನಿಗದಿ ದರ ಇರಲಿ, ನಮಗೆ ಯಾವುದೇ ಫ್ರೀ ವಿದ್ಯುತ್ ಬೇಡ ಎನ್ನುವಂತಾಗಿದೆ.

Latest Videos
Follow Us:
Download App:
  • android
  • ios