ಬಸವನಗುಡಿಗೆ ಪಾರಂಪರಿಕ ತಾಣ ಮಾನ್ಯತೆ: ಸಿಎಂ ಬೊಮ್ಮಾಯಿ
ಬಸವನಗುಡಿ ಕ್ಷೇತ್ರದಲ್ಲಿರುವ ಹಲವು ಐತಿಹಾಸಿಕ ಸ್ಥಳಗಳನ್ನು ಒಳಗೊಂಡು ‘ಪಾರಂಪರಿಕ ತಾಣ’ವಾಗಿ (ಹೆರಿಟೆಜ್ ಕಾರಿಡಾರ್) ಘೋಷಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಬೆಂಗಳೂರು (ನ.21): ಬಸವನಗುಡಿ ಕ್ಷೇತ್ರದಲ್ಲಿರುವ ಹಲವು ಐತಿಹಾಸಿಕ ಸ್ಥಳಗಳನ್ನು ಒಳಗೊಂಡು ‘ಪಾರಂಪರಿಕ ತಾಣ’ವಾಗಿ (ಹೆರಿಟೆಜ್ ಕಾರಿಡಾರ್) ಘೋಷಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಅವರು ದೊಡ್ಡ ಬಸವಣ್ಣನ ಗುಡಿಯ ಎದುರು ಬಸವಣ್ಣನ ಮೂರ್ತಿಗೆ ಕಡಲೆಕಾಯಿ ತುಲಾಭಾರ ಮಾಡುವ ಮೂಲಕ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಚಾಲನೆ ನೀಡಿ ಮಾತನಾಡಿದರು.
ಕ್ಷೇತ್ರದಲ್ಲಿ ದೊಡ್ಡಗಣಪತಿ ದೇವಾಲಯ, ಕೆಂಪೇಗೌಡರು ನಿರ್ಮಿಸಿದ ದೊಡ್ಡ ಬಸವಣ್ಣ ದೇವಾಲಯ ಒಳಗೊಂಡು ಸಾಕಷ್ಟುಐತಿಹಾಸಿಕ ಸ್ಥಳಗಳಿವೆ. ಇವುಗಳ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸುವುದು ಹಾಗೂ ಹೊರಗಿನಿಂದ ಬರುವವರಿಗೆ ಇದರ ಪರಿಚಯ ಮಾಡಿಕೊಡುವ ಉದ್ದೇಶದಿಂದ ಪಾರಂಪರಿಕ ತಾಣವಾಗಿ ಘೋಷಣೆ ಮಾಡಲಾಗುವುದು. ಜತೆಗೆ ಇಲ್ಲಿನ ಜಿಂಕೆಪಾರ್ಕ್ನಿಂದ ಕೆಂಪಾಂಬುಧಿ ಕೆರೆಯವರೆಗೆ ರೋಪ್ ವೇ ಮಾಡಲು ಮುಂದಿನ ಬಜೆಟ್‌ನಲ್ಲಿ ಅನುದಾನ ಮೀಸಲಿಡುವುದಾಗಿ ತಿಳಿಸಿದರು.
ಸಿದ್ದು ಅವಧಿಯ ಚಿಲುಮೆ ವ್ಯವಹಾರವೂ ತನಿಖೆ: ಸಿಎಂ ಬೊಮ್ಮಾಯಿ
ನಾವು ಇತಿಹಾಸದ ಭಾಗವಾಗಬೇಕು. ಇಲ್ಲವೆ ಇತಿಹಾಸವನ್ನು ಸೃಷ್ಟಿಸಬೇಕು. ನಾಡಪ್ರಭು ಕೆಂಪೇಗೌಡರು ಬೆಂಗಳೂರನ್ನು ನಿರ್ಮಿಸುವಾಗ ಆಯಾ ಸಮುದಾಯದ ಕೆಲಸ ಕಾರ್ಯ, ವಹಿವಾಟನ್ನು ಗಮನದಲ್ಲಿ ಇಟ್ಟುಕೊಂಡು ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಸಮಾನತೆ ತತ್ವದಡಿ ಎಲ್ಲರಿಗೂ ಬದುಕಲು ಅವಕಾಶ ಮಾಡಿಕೊಟ್ಟರು. ಅವರ ಆದರ್ಶ ಪರಿಪಾಲನೆ ಅಗತ್ಯ ಎಂದರು. ಶಾಸಕ ರವಿಸುಬ್ರಹ್ಮಣ್ಯ ಮಾತನಾಡಿ, ಮೂರು ದಿನಗಳ ಪರಿಷೆಯಲ್ಲಿ ಸುತ್ತಮುತ್ತಲ ಗ್ರಾಮ, ಜಿಲ್ಲೆಗಳಿಂದ ಜನತೆ ಬರುತ್ತಾರೆ.
ಕೋಟ್ಯಂತರ ರುಪಾಯಿ ವಹಿವಾಟು ನಡೆಯುತ್ತದೆ. ಹಿಂದಿನ ಗ್ರಾಮೀಣ ವೈಭವವನ್ನು ಮರುಕಳಿಸುವಂತೆ ಮಾಡುವ ದೃಷ್ಟಿಯಿಂದ ಪರಿಷೆಯನ್ನು ಅದ್ಧೂರಿಯಾಗಿ ಮಾಡಲಾಗುತ್ತಿದೆ. ಆದಷ್ಟುಬೇಗ ಸರ್ಕಾರ ಬಸವನಗುಡಿ ಕ್ಷೇತ್ರದ ಐತಿಹಾಸಿಕ ತಾಣವನ್ನು ಸೇರಿಸಿ ಹೆರಿಟೆಜ್ ಕಾರಿಡಾರ್ ಎಂದು ಘೋಷಿಸಬೇಕೆಂದು ಮನವಿ ಮಾಡಿದರು. ಶಾಸಕರಾದದ ಉದಯ್ ಗರುಡಾಚಾರ್, ಸಂಸದ ತೇಜಸ್ವಿ ಸೂರ್ಯ, ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಟಿ.ಎ.ಶರವಣ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ವಲಯ ಆಯುಕ್ತ ಜಯರಾಮ್ ರಾಯಪುರ್ ಸೇರಿ ಇತರರಿದ್ದರು.
ಕಡ್ಲೆಕಾಯಿ, ಬೆಲ್ಲ ಇಷ್ಟ: ಇದೇ ವೇಳೆ ರಾಸುಗಳ ಜೊತೆ ತಾವು ಹೊಂದಿರುವ ನಂಟು ಹಾಗೂ ತಮಗೆ ಇಷ್ಟವಾದ ಕಡಲೆಕಾಯಿ ಕುರಿತು ಹೇಳಿಕೊಂಡ ಮುಖ್ಯಮಂತ್ರಿ ಬೊಮ್ಮಾಯಿ ಅವರು ಚಿಕ್ಕಂದಿನಲ್ಲಿ ಹಳ್ಳಿಗೆ ಹೋದರೆ ದಿನಗಟ್ಟಲೆ ಗೋವುಗಳ ಜೊತೆ ಕಾಲ ಕಳೆಯುತ್ತಿದ್ದೆ. ಬಸವಣ್ಣ ನಾಡಿನ ಕಾಯಕ ಸಂಸ್ಕೃತಿಯ ಸಂಕೇತ. ಹಸಿಕಡಲೆ, ಬೇಯಿಸಿದ ಕಡಲೆ, ಹುರಿದು ಬೆಲ್ಲ ಹಾಕಿದ ಕಡ್ಲೆ ಎಂದರೆ ತಮಗೆ ಬಲುಪ್ರೀತಿ ಎಂದರು.
ಸ್ವಾತಂತ್ರ್ಯ ಹೋರಾಟಗಾರರಿಗಾಗಿ ಬೆಂಗ್ಳೂರಲ್ಲಿ ಸ್ಮಾರಕ: ಸಿಎಂ ಬೊಮ್ಮಾಯಿ
ಕಡಲೆಕಾಯಿ ಕೊಟ್ಟ ಬೊಮ್ಮಾಯಿ: ಪರಿಷೆಗೆ ಚಾಲನೆ ನೀಡಲು ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೇವಸ್ಥಾನದ ಬಳಿಯ ವ್ಯಾಪಾರಿಗಳಿಂದ ಕಡಲೆಕಾಯಿಯನ್ನು ಜನತೆಗೆ ಸಾಂಕೇತಿಕವಾಗಿ ನೀಡಿದರು. ಈ ವೇಳೆ ಸಾಕಷ್ಟು ಜನ ಮುಖ್ಯಮಂತ್ರಿಗಳಿಂದ ಕಡಲೆಕಾಯಿ ಕೊಳ್ಳಲು ಮುಗಿಬಿದ್ದರು. ಬಳಿಕ ಸಿಎಂ ದೊಡ್ಡ ಬಸವಣ್ಣನ ಗುಡಿಗೆ ತೆರಳಿ ಕಡಲೆ ಅಭಿಷೇಕ ಮಾಡಿದರು. ಇದಕ್ಕೂ ಮುನ್ನ ದೊಡ್ಡ ಗಣಪತಿಯ ದರ್ಶನ ಪಡೆದರು.