ತಾಯಿ ಕೈಮುಗಿತೀನಿ, ಬಡವರ ಕೆಲ್ಸ ಮಾಡಿಕೊಡಿ: ಸಚಿವ ಕೃಷ್ಣ ಭೈರೇಗೌಡ
ತಾಯಿ ಕೈ ಮುಗಿತೀನಿ. ಬಡವರ ಕೆಲಸ ಕಣವ್ವ ಮಾಡಿಕೊಡು. ಬೇರೆಯವರದ್ದು ಏನಾದ್ರು ಮಾಡಿಕೊ. ನಮಗೆ ಹೆಸರು ತಾ. ಚಿತ್ರದುರ್ಗ ತಹಸೀಲ್ದಾರ್ ಮುಂದೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾಡಿಕೊಂಡ ಭಿನ್ನಹ ಇದು.
ಚಿತ್ರದುರ್ಗ (ಅ.11): ತಾಯಿ ಕೈ ಮುಗಿತೀನಿ. ಬಡವರ ಕೆಲಸ ಕಣವ್ವ ಮಾಡಿಕೊಡು. ಬೇರೆಯವರದ್ದು ಏನಾದ್ರು ಮಾಡಿಕೊ. ನಮಗೆ ಹೆಸರು ತಾ. ಚಿತ್ರದುರ್ಗ ತಹಸೀಲ್ದಾರ್ ಮುಂದೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾಡಿಕೊಂಡ ಭಿನ್ನಹ ಇದು. ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಪಿಂಚಣಿ ಬಾಕಿ ಇರುವ ಪ್ರಕರಣ ಚರ್ಚೆಗೆ ಎತ್ತಿಕೊಂಡು ಮಾತನಾಡಿದ ಅವರು, ನೀವುಗಳು ಲೋಪ ಮಾಡಿದರೆ ಪಿಂಚಣಿ ನಿಂತು ಹೋಗುತ್ತದೆ. ತರುವಾಯ ಪಿಂಚಣಿ ನಿಲ್ಲಿಸಿದರು ಎಂಬ ಕೆಟ್ಟ ಹೆಸರು ಸರ್ಕಾರಕ್ಕೆ ಬರುತ್ತದೆ. ಇಂತಹ ಕೆಲಸ ಮಾಡಲು ಹೋಗಬೇಡಿ ಎಂದರು.
ಎಲ್ಲ ಕಂದಾಯ ಅಧಿಕಾರಿಗಳ ಸಭೆ ಕರೆದು ಬಿಗಿ ನಿರ್ದೇಶನ ನೀಡಿದ್ದೇನೆ. ನಗರ ವ್ಯಾಪ್ತಿಯಲ್ಲಿ ಮಾತ್ರ ಸಮಸ್ಯೆಯಾಗುತ್ತಿದೆ. ಇಂದು ಈ ವಾರ್ಡ್‌ನಲ್ಲಿ ಇದ್ದವರು 2 ವರ್ಷಗಳ ನಂತರ ಬೇರೆಡೆ ಹೋಗುತ್ತಾರೆ. ಡೂಪ್ಲಿಕೇಷನ್ ಆಗುವುದು ಪತ್ತೆ ಹಚ್ಚಲು ಕಷ್ಟವಾಗುತ್ತಿದೆ ಎಂದು ತಹಸೀಲ್ದಾರ್ ಸಮಜಾಯಿಸಿ ನೀಡಿದರು. ಚಿತ್ರದುರ್ಗ ಸಬ್ ರಿಜಿಸ್ಟ್ರಾರ್ ಮೇಲೆ, ಸಿಕ್ಕಾಪಟ್ಟೆ ದೂರುಗಳು ಬಂದಿದ್ದು, ಇವುಗಳ ಸಹಿಸಿಕೊಳ್ಳಲು ಆಗುವುದಿಲ್ಲ. ಪಾಲುವಿಭಾಗ ಆದರೂ ಮರೆ ಮಾಚಿ ಬೇರೆಯವರಿಗೆ ನೋಂದಣಿ ಮಾಡಲಾಗಿದೆ ಎಂಬ ಗಂಭೀರ ಆರೋಪಗಳಿವೆ. ಜಿಲ್ಲಾ ನೋಂದಣಿ ಅಧಿಕಾರಿ ಇಂತಹ ದೂರುಗಳ ಗಂಭೀರವಾಗಿ ಪರಿಗಣಿಸಿ ಪರಿಶೀಲಿಸಬೇಕು. ಜಿಲ್ಲಾಧಿಕಾರಿಗಳು ತನಿಖೆ ಮಾಡಿ ವರದಿ ಸಲ್ಲಿಸುವಂತೆ ಸಚಿವರು ತಾಕೀತು ಮಾಡಿದರು.
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬುರುಡೆ ರಾಜ: ಶಾಸಕ ಎಚ್.ಸಿ.ಬಾಲಕೃಷ್ಣ
ಈ ಮಾತಿಗೆ ಪ್ರತಿಕ್ರಿಯಿಸಿದ ಉಪ ನೋಂದಣಾಧಿಕಾರಿ, ಇಂತಹ ಯಾವುದೇ ತಪ್ಪುಗಳು ಆಗಿಲ್ಲ. ಈ ಬಗ್ಗೆ ಸ್ವತಃ ಲಿಖಿತ ರೂಪದಲ್ಲಿ ಬರೆದುಕೊಟ್ಟಿದ್ದು, ಪರಿಶೀಲನೆ ಮಾಡುವಂತೆ ಮನವಿ ಮಾಡಿದ್ದೇನೆ ಎಂದರು. ವ್ಯಕ್ತಿಯೋರ್ವ ವೈಯುಕ್ತಿಕ ದ್ನೇಷದ ಕಾರಣಕ್ಕೆ ಈ ರೀತಿ ದೂರುಗಳ ಕೊಡುವ ಕೆಲಸ ಮಾಡುತ್ತಿದ್ದಾನೆಂದರು. ಈ ಮಾತಿಗೆ ತುಸು ಗರಂ ಆದ ಸಚಿವ ಕೃಷ್ಣ ಬೈರೇಗೌಡ, ನಾನು ಪ್ರಿಜುಡಿಸ್ ಆಗಿ ಮಾತಾಡುತ್ತಿಲ್ಲ. ದೂರುಗಳು ಬಂದಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದರು. ಜನರ ಕೆಲಸ ಮಾಡಿಕೊಡುವ ವಿಚಾರದಲ್ಲಿ ಉದಾಸೀನ ತೋರಿದರೆ ನಾನು ಸಹಿಸೋಲ್ಲ.
ಚಿಕ್ಕಮಗಳೂರು ಜಿಲ್ಲೆಯ ತಹಸೀಲ್ದಾರರೋರ್ವರ ಮೇಲೆ ಈಗಾಗಲೇ ಕ್ರಮಿನಲ್ ಕೇಸು ಹಾಕಿದ್ದೇವೆ. ಬೆಂಗಳೂರಿನ ಓರ್ವ ಎಸಿ ಮೇಲೂ ಕೂಡಾ ಮೊಕದ್ದಮೆ ದಾಖಲು ಮಾಡಲಾಗಿದೆ. ಜನರ ಕೆಲಸ ಮಾಡಿಕೊಡಬಾರದು ಎನ್ನುವುದಕ್ಕೆ ಹತ್ತಾರು ನೆಪಗಳು ಸಿಗುತ್ತವೆ. ಆದರೆ ಮಾಡಿಕೊಡುವ ಇಚ್ಛೆ ಇದ್ದರೆ ಯಾವುದೂ ಅಡ್ಡಿ ಬರುವುದಿಲ್ಲ. ಜಿಲ್ಲೆಯಲ್ಲಿ ಸಮಸ್ಯೆಗಳ ಪೈಕಿ ಶೇ.75ರಷ್ಟಕ್ಕೆ ಪರಿಹಾರ ಒದಗಿಸಬಹುದಾಗಿದೆ. ತಾಳ್ಮೆಯಿಂದ ಇರ್ತೇನೆ ಅಂತ ಏನೇನೋ ಉತ್ತರ ಕೊಡಲು ಹೋಗಬೇಡಿ. ಸಿದ್ಧ ಮಾದರಿಗಳು ನನಗೆ ಬೇಕಿಲ್ಲ. ಪರಿಹಾರ ಸೂಚಿಸುವ ಉತ್ತರಗಳಿರಲಿ ಎಂದು ಎಚ್ಚರಿಕೆ ನೀಡಿದರು.
ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ: ಅಕ್ರಮ ಸಕ್ರಮ ಬಗರ್ ಹುಕುಂ ಯೋಜನೆಯಡಿ ಜಿಲ್ಲೆಯಲ್ಲಿ ಸಲ್ಲಿಕೆಯಾಗಿರುವ 41580 ಅರ್ಜಿಗಳನ್ನು ಒಂದು ವರ್ಷದೊಳಗೆ ವಿಲೇವಾರಿ ಮಾಡಬೇಕು. ಅರ್ಜಿ ಸಲ್ಲಿಸಿದವರಲ್ಲಿ, ಸಾಗುವಳಿಯೇ ಮಾಡಿದವರು ಕೂಡ ಇರುವ ಸಾಧ್ಯತೆಗಳಿದ್ದು, ಪರಿಶೀಲನೆ ನಡೆಸಬೇಕು. ನಮೂನೆ 50, 53, 57ಕ್ಕೆ ಸಂಬಂಧಿಸಿದಂತೆ ಅಕ್ರಮ ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಲು ಕೋರಿ ಸಾವಿರಾರು ಜನ ಅರ್ಜಿ ಸಲ್ಲಿಸಿದ್ದಾರೆ. ಅಧಿಕಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಗರ್ ಹುಕುಂ ಆ್ಯಪ್ ಅಭಿವೃದ್ಧಿ ಪಡಿಸುತ್ತಿದ್ದು, ಇದರ ಸಹಾಯದಿಂದ ಸ್ಯಾಟಲೈಟ್ ಇಮೇಜ್ ಪಡೆದು ನೈಜ ಸಾಗುವಳಿದಾರರನ್ನು ಗುರುತಿಸಬಹುದು. ಅಲ್ಲದೆ, ಇ-ಸಾಗುವಳಿ ಚೀಟಿಯನ್ನೂ ನೀಡಬಹುದು ಎಂದರು.
ಶೀಘ್ರ ಬೆಳೆ ಸಮೀಕ್ಷೆ ನಡೆಸಿ: ಜಿಲ್ಲೆಯ 6 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಹೀಗಾಗಿ ಅಧಿಕಾರಿಗಳು ಮುಂದಿನ ಒಂದು ವಾರದಲ್ಲಿ ಬೆಳೆ ಸಮೀಕ್ಷೆ ನಡೆಸಿ ಸಂಪೂರ್ಣ ಮಾಹಿತಿಯನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಿದರೆ ಮಾತ್ರ ರೈತರಿಗೆ ಬೆಳೆ ನಷ್ಟ ತುಂಬಿಕೊಡಲು ಸಾಧ್ಯ. ಆ ನಿಟ್ಟಿನಲ್ಲಿ ಅಧಿಕಾರಿಗಳು ಶೀಘ್ರದಲ್ಲಿ ಬೆಳೆ ಸಮೀಕ್ಷೆ ನಡೆಸಿದ ಅಂಕಿ ಅಂಶಗಳನ್ನು ತಂತ್ರಾಂಶದಲ್ಲಿ ನಮೂದಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದರು. ಬೆಳೆ ನಷ್ಟಕ್ಕೆ ರೈತರಿಗೆ 5 ಎಕರೆವರೆಗೆ ಪರಿಹಾರ ಸಿಗಲಿದೆ. ಒಮ್ಮೆ ಬೆಳೆ ಸಮೀಕ್ಷೆ ಮುಗಿಸಿದ ನಂತರ ಬಿಟ್ಟುಹೋದ ರೈತರ ಹೆಸರನ್ನು ಮತ್ತೆ ಪರಿಹಾರದ ಪಟ್ಟಿಗೆ ಸೇರಿಸುವುದು ಅಸಾಧ್ಯ.
ಅಲ್ಲದೇ, ನಗದಿನ ಮೂಲಕವೂ ಪರಿಹಾರ ನೀಡಿಕೆಗೆ ಅವಕಾಶ ಇಲ್ಲ. ಪರಿಹಾರದ ಹಣ ಬ್ಯಾಂಕ್ ಖಾತೆಗೆ ಸಂದಾಯವಾಗಲಿ. ಅಧಿಕಾರಿಗಳು ಈಗಲೇ ಬೆಳೆ ಸಮೀಕ್ಷೆಯನ್ನು ಶೇ.100ರಷ್ಟು ದಕ್ಷತೆಯಿಂದ ಮುಗಿಸಬೇಕು ಎಂದರು. ಬರ ಪರಿಸ್ಥಿತಿ ಘೋಷಣೆಯಾಗಿರುವುದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಮೇವು ಸಂಗ್ರಹಣೆಗಾಗಿ ಕೂಡಲೇ ಸಿದ್ಧತೆ ಮಾಡಿಕೊಳ್ಳಬೇಕು. ಪಶು ಸಂಗೋಪನೆ ಇಲಾಖೆಯಿಂದ ಮೇವು ಬೀಜಗಳ ವಿತರಣೆಗೆ ಕ್ರಮಕೈಗೊಳ್ಳಲಾಗಿದ್ದು, ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯವಿರುವ ಹಾಗೂ ಮೇವು ಬೆಳೆಯಲು ಆಸಕ್ತ ಇರುವ ರೈತರನ್ನು ಗುರುತಿಸಿ, ಮೇವು ಬೀಜಗಳ ವಿತರಣೆಗೆ ಕ್ರಮಕೈಗೊಳ್ಳಬೇಕು ಎಂದರು.
ಸೋಮಣ್ಣ ಪವರ್ ಫುಲ್ ಲೀಡರ್, ಸಿದ್ದರಾಮಯ್ಯರನ್ನ ಸೋಲಿಸುವ ಶಕ್ತಿ ಇತ್ತು: ಕೆ.ಎಸ್.ಈಶ್ವರಪ್ಪ
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು ಸೂಚಿಸಿರುವ ವಿಷಯಗಳನ್ನು ಕೆಡಿಪಿ ಸಭೆಗಳಲ್ಲಿ ಪ್ರಗತಿ ಪರಿಶೀಲನೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು. ಶಾಸಕರಾದ ಬಿ.ಜಿ.ಗೋವಿಂದಪ್ಪ, ಡಾ.ಎಂ.ಚಂದ್ರಪ್ಪ, ಟಿ.ರಘುಮೂರ್ತಿ, ಕೆ.ಸಿ.ವೀರೇಂದ್ರ ಪಪ್ಪಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಕಂದಾಯ ಇಲಾಖೆ ಆಯುಕ್ತ ಸುನೀಲ್ ಕುಮಾರ್, ಸರ್ವೆ ಇಲಾಖೆ ಆಯುಕ್ತ ಮಂಜುನಾಥ್ ಹಾಗೂ ಜಿಲ್ಲಾಧಿಕಾರಿ ದಿವ್ಯಾಪ್ರಭು ಕರ್ನಾಟಕ ಲ್ಯಾಂಡ್ ಕಾರ್ಪೋರೇಷನ್ ವ್ಯವಸ್ಥಾಪಕ ನಿರ್ದೇಶಕ ವಸಂತ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.