ಬೆಂಗಳೂರು [ಡಿ.07]: ಅಪರಾಧ ಕೃತ್ಯಗಳು ನಿಯಂತ್ರಣ ಹಾಗೂ ಮಹಿಳೆಯರ ಸುರಕ್ಷತೆ ಸಲುವಾಗಿ ನೆರೆಹೊರೆಯವರ ಮಧ್ಯೆ ಬಾಂಧವ್ಯ ಮೂಡಿಸಲು ರಾಜಧಾನಿ ಪೊಲೀಸರು ‘ಹಲೋ ನೈಬರ್‌’ ಎಂಬ ನೂತನ ಕಾರ್ಯಕ್ರಮ ಜಾರಿಗೊಳಿಸಲು ಮುಂದಾಗಿದ್ದಾರೆ.

ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಪೊಲೀಸರಿಗೆ ಸಾರ್ವಜನಿಕರ ಸಹಕಾರ ಬಹುಮುಖ್ಯವಾಗಿದೆ. ಎಷ್ಟೋ ಜನರಿಗೆ ತಮ್ಮ ಅಕ್ಕಪಕ್ಕದ ನೆಲೆಸಿರುವ ಕುಟುಂಬಗಳೇ ಅಪರಿಚಿತವಾಗಿರುತ್ತವೆ. ಹೀಗಾಗಿ ಅಕ್ಕಪಕ್ಕದ ಜನರಲ್ಲಿ ಬಾಂಧವ್ಯ ಮೂಡಿದರೆ ನೈತಿಕ ಬೆಂಬಲ ಸಿಗುತ್ತದೆ ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅಭಿಪ್ರಾಯಪಟ್ಟರು.

ಪ್ರತಿ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಜನ ವಸತಿ ಪ್ರದೇಶಗಳಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಇದರಲ್ಲಿ ನೆರೆಹೊರೆಯವರನ್ನು ಪರಸ್ಪರ ಪರಿಚಯಿಸಲಾಗುವುದು. ಅಲ್ಲದೆ, ನಾಗರಿಕರಿಗೆ ಠಾಣಾಧಿಕಾರಿಗಳ ಹೆಸರು, ಮೊಬೈಲ್‌ ಸಂಖ್ಯೆ ಹಾಗೂ ಗಸ್ತು ಸಿಬ್ಬಂದಿ ವಿವರ ಒದಗಿಸಲಾಗುವುದು ಅವರು ತಿಳಿಸಿದರು.

ಸುರಕ್ಷಾ ಆ್ಯಪ್‌ಗೆ ಬೇಡಿಕೆ ಹೆಚ್ಚಳ: ನಗರ ವ್ಯಾಪ್ತಿ ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಹೆಚ್ಚಿನ ಜಾಗ್ರತೆವಹಿಸಲಾಗಿದೆ. ಗಸ್ತು ಹೆಚ್ಚಿಸಲಾಗಿದ್ದು, ದುರಸ್ತಿ ಸ್ಥಿತಿಯಲ್ಲಿದ್ದ ಗಸ್ತು ವಾಹನಗಳನ್ನು ರಿಪೇರಿ ಮಾಡಿಸಲಾಗಿದೆ ಎಂದು ಆಯುಕ್ತರು ಹೇಳಿದರು.

ಹೈದರಾಬಾದ್‌ ಘಟನೆ ಬಳಿಕ ಬೆಂಗಳೂರು ಪೊಲೀಸರು ರೂಪಿಸಿರುವ ‘ಸುರಕ್ಷಾ ಆ್ಯಪ್‌’ಗೆ ಬೇಡಿಕೆ ಹೆಚ್ಚಾಗಿದೆ. ಇದುವರೆಗೆ 1.9 ಲಕ್ಷ ಮಂದಿ ಡೌನ್‌ ಲೋಡ್‌ ಮಾಡಿದ್ದಾರೆ. ಸ್ಮಾರ್ಟ್‌ ಫೋನ್‌ ಇಲ್ಲದವರಿಗೆ ನಮ್ಮ 100 (ಪೊಲೀಸ್‌ ನಿಯಂತ್ರಣ ಕೊಠಡಿ) ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ವಿವರಿಸಿದರು.

ಟೀಕೆ ಮಾಡೋರ ಮನೆಯಲ್ಲೂ ಹೆಣ್ಮಕ್ಳಿದ್ದಾರೆ: ಎನ್‌ಕೌಂಟರ್ ಸಮರ್ಥಿಸಿದ ಭಾಸ್ಕರ್ ರಾವ್!...

ಆ್ಯಪ್‌ನಲ್ಲಿ ಸಂಕಷ್ಟದ ಕರೆಗೆ ಸ್ಪಂದಿಸಲು 9 ನಿಮಿಷಗಳ ಕಾಲಮಿತಿ ನಿಗದಿ ಪಡಿಸಲಾಗಿದೆ. ಈಗ ಹೊಸದಾಗಿ ಮತ್ತಷ್ಟುಕ್ರಮಗಳನ್ನು ಕೈಗೊಂಡಿರುವ ಕಾರಣ 7 ನಿಮಿಷಕ್ಕೆ ನೆರವು ಸಿಗಲಿದೆ ಬೆಂಗಳೂರಿನ ರಾತ್ರಿ ಪಾಳೆಯದಲ್ಲಿ ಸಾಕಷ್ಟುಜನರು ಕೆಲಸ ಮಾಡುತ್ತಾರೆ. ಈ ಉದ್ಯೋಗಿಗಳ ಪ್ರಯಾಣ ಸುರಕ್ಷತೆಗೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಹಾಗೂ ಖಾಸಗಿ ಸಾರಿಗೆ ಸಂಸ್ಥೆಗಳಿಗೆ ಸೂಕ್ತ ಸೂಚನೆ ನೀಡಿದ್ದೇವೆ. ಈ ಬಗ್ಗೆ ಸರ್ಕಾರದ ಮುಖ್ಯಕಾರ್ಯದರ್ಶಿಗಳ ಸಹ ಕ್ರಮ ತೆಗೆದುಕೊಂಡಿದ್ದಾರೆ ಎಂದು ಆಯುಕ್ತರು ಹೇಳಿದರು.

ಎನ್‌ಕೌಂಟರ್‌ಗೆ ಬೆಂಬಲ ಅಗತ್ಯ:  ಹೈದರಾಬಾದ್‌ನಲ್ಲಿ ಪಶುವೈದ್ಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳ ಎನ್‌ಕೌಂಟರ್‌ನ್ನು ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಬೆಂಬಲಿಸಿದ್ದಾರೆ.

ಈ ಘೋರ ಘಟನೆಯೂ ದೇಶ ವ್ಯಾಪ್ತಿ ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ ಆರೋಪಿಗಳು ತಪ್ಪಿಸಿಕೊಂಡಿದ್ದರೆ ಪೊಲೀಸರು ಬೆಲೆ ತೆರಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಪೊಲೀಸರನ್ನು ಎಲ್ಲರೂ ಬೆಂಬಲಿಸಬೇಕು ಎಂದು ಮನವಿ ಮಾಡಿದರು.