ಶ್ರೀರಂಗಪಟ್ಟಣ [ಆ.12] : ಕೃಷ್ಣರಾಜಸಾಗರ ಅಣೆಕಟ್ಟೆಯಿಂದ 1.50 ಲಕ್ಷಕ್ಕೂ ಅಧಿಕ ಕ್ಯೂಸೆಕ್‌ ನೀರನ್ನು ಕಾವೇರಿ ನದಿಗೆ ಬಿಡುತ್ತಿರುವುದರಿಂದ ನದಿ ಪಾತ್ರದ ತಗ್ಗು ಪ್ರದೇಶದಲ್ಲಿ ಮುಳುಗಡೆ ಭೀತಿ ಎದುರಾಗಿದೆ.

ಕಾವೇರಿ ಕಣಿಯ ಮೇಲ್ಭಾಗ ಪ್ರದೇಶದಲ್ಲಿ ಅತಿ ಹೆಚ್ಚಿನ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟೆಗೆ 1.87 ಲಕ್ಷ ಕ್ಯುಸೆಕ್‌ಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಜಲಾಶಯದಿಂದ ನದಿಗೆ 1.5 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಬಿಡಲಾಗಿದೆ.

ಪಟ್ಟಣದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ಸ್ನಾನ ಘಟ್ಟಬಳಿಯ ಕಾವೇರಿ ನದಿ ತಟದಲ್ಲಿದ್ದ ದೇವಸ್ಥಾನಗಳು, ಪಶ್ಚಿಮ ವಾಹಿನಿಯಲ್ಲಿರುವ ಪುರಾತನ ಮಂಟಪ ಮತ್ತು ಧಾರ್ಮಿಕ ಶ್ರದ್ಧಾ ಕೇಂದ್ರಗಳು ಜಲಾವೃತವಾಗಿವೆ.

ಚೆಕ್‌ ಪೋಸ್ಟ್‌ ಬಳಿಯ ಸಾಯಿಮಂದಿರಕ್ಕೆ ಪ್ರವಾಹದ ನೀರು ನುಗ್ಗಿದೆ. ಶ್ರೀನಿಮಿಷಾಂಬ ದೇವಾಲಯದ ಬಳಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಭಕ್ತರ ಸ್ನಾನಗೃಹ ಜಲಾವೃತಗೊಂಡಿದೆ. ದೇವಾಲಯದ ಮುಖ್ಯದ್ವಾರದ ಬಳಿ ವರೆಗೆ ನೀರು ನುಗ್ಗಿದೆ. ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆಯ ಭೀತಿಯಲ್ಲಿದೆ. ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಮೇಲೆ ಯಾವುದೇ ವಾಹನ ಸಂಚರಿಸಿದಂತೆ ನಿರ್ಬಂಧಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೇತುವೆಗೆ ಅಡ್ಡಲಾಗಿ ತಾತ್ಕಾಲಿಕ ಗೋಡೆ ನಿರ್ಮಿಸಲಾಗಿದೆ. ಅಲ್ಲದೇ ನದಿ ಪಾತ್ರದ ಪ್ರಮುಖ ಆಯಕಟ್ಟಿನ ಸ್ಥಳಗಳಿಗೆ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ.

1.80 ಲಕ್ಷ ಕ್ಯುಸೆಕ್‌ ನೀರಿನ ಪ್ರಮಾಣ ದಾಟಿದರೆ ಬಹುತೇಕ ನದಿ ಪಾತ್ರದ ದೇವಾಲಯಗಳು ಮುಳುಗಡೆಯಾಗುವ ಸಂಭವ ಹೆಚ್ಚಾಗಲಿದೆ. ಜಲಾಶಯದಿಂದ ಹೆಚ್ಚಿನ ಪ್ರಮಾಣದ ಹೊರಹರಿವಿನಿಂದ ನದಿ ಪಕ್ಕದ ಗ್ರಾಮಗಳಿಗೆ ಪ್ರವಾಹ ಭೀತಿ ಹೆಚ್ಚಿದೆ. ಇದು ಆತಂಕಕ್ಕೂ ಕಾರಣವಾಗಿದೆ.

1.80 ಲಕ್ಷ ಕ್ಯುಸೆಕ್‌ ನೀರು ಬಿಟ್ಟರೆ ಟಿಪ್ಪು ಕಾಲದ ವೆಲ್ಲಸ್ಲಿ ಸೇತುವೆ ಮುಳುಗಡೆಯಾಗಲಿದೆ. ಪ್ರವಾಹ ವಿಕೋಪ ಪರಿಸ್ಥಿತಿ ಎದುರಿಸಲು ಜಿಲ್ಲಾ ಹಾಗೂ ತಾಲೂಕು ಆಡಳಿತ ಸನ್ನದ್ಧವಾಗಿ, ಕಾರ್ಯಾಚರಣೆಗಾಗಿ ಎನ್‌.ಡಿ.ಆರ್‌.ಎಫ್‌. ಪಡೆ ಕಳುಹಿಸುವಂತೆ ಮನವಿ ಮಾಡಿದೆ ಎಂದು ತಿಳಿದು ಬಂದಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಲೂಕಿನ ದೊಡ್ಡೇಗೌಡನಕೊಪ್ಪಲು ಗ್ರಾಮದ ಬಳಿ ಇರುವ ಗೌತಮ ಕ್ಷೇತ್ರದ ಸುತ್ತಲು ನೀರು ಆವರಿಸಿದೆ. ಈ ಸ್ಥಳ ದ್ವೀಪದಂತಾಗಿ ಜಲಾವೃತವಾಗಿದೆ. ಮುಂಜಾಗೃತ ಕ್ರಮವಾಗಿ ಎನ್‌ಡಿಆರ್‌ಎಫ್‌ ಪಡೆ ಸಿಬ್ಬಂದಿ ಗೌತಮ ಕ್ಷೇತ್ರದ ಶ್ರೀ ಗಜಾನನ ಸ್ವಾಮೀಜಿ ಅವರ ಮನವೊಲಿಸಿ ಆಶ್ರಮದಿಂದ ಬೇರೆಡೆ ಸ್ಥಳಾಂತರಿಸಲು ಯಶಸ್ವಿಯಾಗಿದ್ದಾರೆ. ಕಳೆದ ವರ್ಷ ಪ್ರವಾಹ ಹೆಚ್ಚಾಗಿದ್ದರೂ ಸ್ವಾಮೀಜಿಗಳು ಆಶ್ರಮದಿಂದ ಹೊರ ಬರಲು ಮೊಂಡುತನ ತೋರಿದ್ದರು. ಇದರಿಂದ ಜಿಲ್ಲಾಡಳಿತಕ್ಕೆ ತಲೆನೋವು ಉಂಟಾಗಿತ್ತು.

ಪ್ರವಾಸಿತಾಣದ ನದಿ ಪಾತ್ರಕ್ಕೆ ಪೊಲೀಸ್‌ ಸಿಬ್ಬಂದಿ ನಿಯೋಜಿಸಿ ಕಟ್ಟೆಚ್ಚರ ವಹಿಸಿರುವ ಜಿಲ್ಲಾ ಪೊಲೀಸ್‌ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ವಹಿಸಿದೆ.