ಬೆಂಗಳೂರು [ಡಿ.22]:  ಸುಮ್ಮನಹಳ್ಳಿ ಮೇಲ್ಸೇತುವೆಯ ಗುಂಡಿ ದುರಸ್ತಿ ಕಾರ್ಯ ಪೂರ್ಣಗೊಂಡು ಒಂದು ತಿಂಗಳು ಕಳೆದರೂ ಗುಂಡಿ ಬಿದ್ದ ಮಾರ್ಗದಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿಲ್ಲ. ಇದರಿಂದ ಮೇಲ್ಸೇತುವೆಯ ಕೆಳ ಭಾಗದಲ್ಲಿ ವಾಹನ ಸವಾರರು ಪ್ರತಿನಿತ್ಯ ಸಂಚಾರಿ ದಟ್ಟಣೆ ಎದುರಿಸಬೇಕಾಗಿದೆ.

ನಗರದ ಹೊರವರ್ತುಲ ರಸ್ತೆಯ ಸುಮ್ಮನಹಳ್ಳಿಯ ಮೇಲ್ಸೇತುವೆ ಮೇಲ್ಭಾಗದಲ್ಲಿ ಗುಂಡಿ ಸೃಷ್ಟಿಯಾಗಿದ್ದ ಹಿನ್ನೆಲೆಯಲ್ಲಿ ನ.1ರಿಂದ ನ.18ವರೆಗೆ ಗುಂಡಿ ಬಿದ್ದಿರುವ ನಾಗರಬಾವಿಯಿಂದ ಗೊರಗುಂಟೆ ಪಾಳ್ಯಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ ದುರಸ್ತಿ ಮಾಡಿತ್ತು. ನಂತರ ಲಘು ವಾಹನ ಸಂಚಾರಕ್ಕೆ ಮಾತ್ರ ಅವಕಾಶ ನೀಡಿ ಭಾರೀ ವಾಹನಗಳಾದ ಬಸ್‌, ಟ್ರಕ್‌ ಸೇರಿದಂತೆ ಇನ್ನಿತರ ವಾಹನಗಳನ್ನು ಸವೀರ್‍ಸ್‌ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಇದರಿಂದ ಕಳೆದ ಒಂದೂವರೆ ತಿಂಗಳಿನಿಂದ ಸೇತುವೆ ಕೆಳಭಾಗದಲ್ಲಿ ದಿನನಿತ್ಯ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ.

ಇನ್ನೂ ಒಂದು ತಿಂಗಳು ಭಾರೀ ವಾಹನ ನಿಷೇಧ:

ಈಗಾಗಲೇ ಕಳೆದ ಒಂದೂವರೆ ತಿಂಗಳಿನಿಂದ ಗುಂಡಿ ದುರಸ್ತಿ ಕಾಮಗಾರಿ ನಡೆಸಿ ಮಾರ್ಗದಲ್ಲಿ ಭಾರೀ ವಾಹನ ಸಂಚಾರ ನಿಷೇಧಿಸಲಾಗಿದೆ. ಇದೀಗ ಮತ್ತೆ ಬಿಬಿಎಂಪಿ ಇಡೀ ಸೇತುವೆ ದುರಸ್ತಿ ಕಾಮಗಾರಿ ಆರಂಭಿಸುತ್ತಿದೆ. ರಿಪೇರಿ ಕಾರ್ಯ ಪೂರ್ಣಗೊಳ್ಳುವವರೆ ನಾಗರಬಾವಿಯಿಂದ ಗೊರಗುಂಟೆ ಪಾಳ್ಯಕ್ಕೆ ಸಾಗುವ ಮಾರ್ಗದಲ್ಲಿ ಭಾರೀ ವಾಹನ ಸಂಚಾರ ನಿಷೇಧಿಸುವುದಕ್ಕೆ ಬಿಬಿಎಂಪಿ ಅಧಿಕಾರಿಗಳು ಸಂಚಾರಿ ಪೊಲೀಸ್‌ಗೆ ಮನವಿ ಮಾಡಿದ್ದಾರೆ. ಹೀಗಾಗಿ, ಇನ್ನೂ ಒಂದು ತಿಂಗಳು ಗುಂಡಿ ಬಿದ್ದ ಮಾರ್ಗದಲ್ಲಿ ಭಾರೀ ವಾಹನ ಸಂಚಾರ ಇರುವುದಿಲ್ಲ.

ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಮತ್ತೆ ದೋಷ!...

ಈ ಕುರಿತು ಪ್ರತಿಕ್ರಿಯೆ ನೀಡಿದ ರಾಜರಾಜೇಶ್ವರಿ ವಲಯದ ಮುಖ್ಯ ಎಂಜಿನಿಯರ್‌ ವಿಜಯ್‌ಕುಮಾರ್‌, ಸೇತುವೆಯ ಕೆಲವು ಪಿಲ್ಲರ್‌ನ ಬೇರಿಂಗ್‌ ದೋಷವಿದೆ ಎಂದು ತಜ್ಞರು ವರದಿ ನೀಡಿದ ಹಿನ್ನೆಲೆಯಲ್ಲಿ 35 ಲಕ್ಷ ರು. ವೆಚ್ಚದಲ್ಲಿ ದುರಸ್ತಿ ಕಾರ್ಯ ಆರಂಭಿಸಲಾಗುತ್ತಿದೆ. ದುರಸ್ತಿ ಕಾರ್ಯ ಮುಕ್ತಾಯಗೊಳ್ಳುವುದಕ್ಕೆ ಇನ್ನೂ ಒಂದು ತಿಂಗಳು ಬೇಕಾಗಲಿದೆ. ಬಳಿಕವೇ ಭಾರೀ ವಾಹನ ಸಂಚಾರಿ ಅವಕಾಶ ನೀಡಿದರೆ ಉತ್ತಮ ಎಂದು ಸದ್ಯಕ್ಕೆ ಗುಂಡಿ ಬಿದ್ದ ಮಾರ್ಗದಲ್ಲಿ ಭಾರೀ ಸಂಚಾರಕ್ಕೆ ಅವಕಾಶ ನೀಡಿಲ್ಲ ಎಂದು ತಿಳಿಸಿದರು.

ಸೇತುವೆಯ ಸುರಕ್ಷತೆ ಬಗ್ಗೆ ಆತಂಕ ಪಡಬೇಕಾಗಿಲ್ಲ. ಸಣ್ಣ-ಪುಟ್ಟದುರಸ್ತಿ ಕಾಮಗಾರಿ ನಡೆಸಲಾಗುತ್ತಿದೆ. ಮುಗಿದ ಬಳಿಕ ಸೇತುವೆಯ ಮೇಲ್ಭಾಗದಲ್ಲಿ ಎಲ್ಲ ಮಾದರಿಯ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಮಾಹಿತಿ ನೀಡಿದರು.