ಬೆಂಗಳೂರು[ಡಿ.10]: ಸುಮನಹಳ್ಳಿ ಮೇಲ್ಸೇತುವೆಯ ನಾಲ್ಕು ಕಡೆ ಬೇರಿಂಗ್‌ನಲ್ಲಿ ದೋಷವಿದ್ದು, ಸೇತುವೆಯ ಬೀಮ್‌ (ಅಡ್ಡ ಕಂಬ) ಹಾಗೂ ಹಲವೆಡೆ ಸಿಮೆಂಟ್‌ ಸರಿಯಾಗಿ ಭರ್ತಿ (ಹನಿಕೂಂಬ್‌) ಆಗಿಲ್ಲ ಎಂದು ಸಿವಿಲ್‌- ಎಡ್‌ ಟೆಕ್ನೋಕ್ಲಿನಿಕ್‌ ಸಂಸ್ಥೆ ಬಿಬಿಎಂಪಿಗೆ ವರದಿ ನೀಡಿದ ಹಿನ್ನೆಲೆಯಲ್ಲಿ ಡಿ.15ರ ನಂತರ ಮತ್ತೆ ಸೇತುವೆ ದುರಸ್ತಿ ಕಾರ್ಯ ಆರಂಭಿಸುವುದಕ್ಕೆ ಬಿಬಿಎಂಪಿ ತೀರ್ಮಾನಿಸಿದೆ.

ನಗರದ ಹೊರವರ್ತುಲ ರಸ್ತೆಯ ಸುಮನಹಳ್ಳಿಯ ಮೇಲ್ಸೇತುವೆ ಮೇಲ್ಭಾಗದಲ್ಲಿ ದೊಡ್ಡ ಗುಂಡಿ ಸೃಷ್ಟಿಯಾಗಿದ್ದ ಹಿನ್ನೆಲೆಯಲ್ಲಿ ನ.1ರಿಂದ ನ.18ವರೆಗೆ ಗುಂಡಿ ಬಿದ್ದಿರುವ ನಾಗರಬಾವಿಯಿಂದ ಗೊರಗುಂಟೆ ಪಾಳ್ಯ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ ದುರಸ್ತಿ ಮಾಡಿ ನಂತರ ಮತ್ತೆ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಮೇಲ್ಸೇತುವೆಯಲ್ಲಿ ಗುಂಡಿ ಸೃಷ್ಟಿಯಾದ ಹಿನ್ನೆಲೆಯಲ್ಲಿ ಸೇತುವೆಯ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಹಾಗಾಗಿ, ಬಿಬಿಎಂಪಿ ಇಡೀ ಸೇತುವೆಯ ಸದೃಢತೆ ಪರೀಕ್ಷೆ ನಡೆಸುವುದಕ್ಕೆ ಸಿವಿಲ್‌- ಎಡ್‌ ಟೆಕ್ನೋಕ್ಲಿನಿಕ್‌ ಸಂಸ್ಥೆಯನ್ನು ನಿಯೋಜಿಸಿತ್ತು. ಸಂಸ್ಥೆಯ ತಜ್ಞರು ಸುದೀರ್ಘ ತಪಾಸಣೆ ನಡೆಸಿ ಬಿಬಿಎಂಪಿಗೆ ವರದಿ ನೀಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವರದಿಯಲ್ಲಿ ಸೇತುವೆ ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದೆ. ಸೇತುವೆ ರಾರ‍ಯಂಪ್‌ ಹಾಗೂ ಪಿಲ್ಲರ್‌ ಮಧ್ಯೆ ಅಳವಡಿಸಿರುವ ಬೇರಿಂಗ್‌ ದೋಷವಿದೆ. ಅಲ್ಲದೇ ಕಳಪೆ ಕಾಮಗಾರಿಯಿಂದ ಹಲವು ಬೀಮ್‌ ಹಾಗೂ ಸ್ಲಾ್ಯಬ್‌ಗಳಲ್ಲಿ ಹನಿಕೂಂಬ್‌ ಸೃಷ್ಟಿಯಾಗಿದೆ. ಇದು ಸೇತುವೆ ಸುರಕ್ಷತೆ ಮತ್ತು ಸದೃಢತೆಗೆ ಧಕ್ಕೆ ಉಂಟುಮಾಡಲಿದೆ ಎಂದು ತಿಳಿಸಿದೆ.

ಹಾಗಾಗಿ ಬಿಬಿಎಂಪಿ ಸೇತುವೆಯ ಸುರಕ್ಷತೆಗೆ ಬೇಕಾದ ಕ್ರಮ ಕೈಗೊಳ್ಳುವುದಕ್ಕೆ ಮುಂದಾಗಿದೆ. ದೋಷದಿಂದ ಕೂಡಿರುವ ಬೇರಿಂಗ್‌ಗಳನ್ನು ಬದಲಾಯಿಸಿ ಮತ್ತು ಹನಿಕೂಂಬ್‌ ಭಾಗದ ರಿಪೇರಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಡಿ.15ರ ನಂತರ ಸೇತುವೆ ಕಾಮಗಾರಿ ಆರಂಭವಾಗಲಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಹೊರ ರಾಜ್ಯದ ತಜ್ಞರ ತಂಡ

ಸೇತುವೆಯ ಬೇರಿಂಗ್‌ನಲ್ಲಿ ಕಂಡು ಬಂದಿರುವ ದೋಷ ಸರಿಪಡಿಸುವ ತಜ್ಞರು ರಾಜ್ಯದಲ್ಲಿ ಇಲ್ಲವಾಗಿರುವುದರಿಂದ ಮುಂಬೈ ಮತ್ತು ದೆಹಲಿಯಿಂದ ವಿವಿಧ ತಜ್ಞರ ಸಂಸ್ಥೆಗೆ ಬಿಬಿಎಂಪಿ ಆಹ್ವಾನ ನೀಡಿದೆ. ಇನ್ನೆರಡು ದಿನದಲ್ಲಿ ತಜ್ಞರು ಸೇತುವೆಯನ್ನು ಪರಿಶೀಲನೆ ಮಾಡಿ ಸೇತುವೆ ದುರಸ್ತಿಗೆ ಅಂದಾಜು ವೆಚ್ಚ ಪಟ್ಟಿನೀಡಲಿದ್ದಾರೆ. ತದ ನಂತರ ಯಾವ ತಜ್ಞರ ಸಂಸ್ಥೆ ಮೂಲಕ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂಬುದನ್ನು ಬಿಬಿಎಂಪಿ ತೀರ್ಮಾನಿಸಲಿದೆ ಎಂದು ರಾಜರಾಜೇಶ್ವರಿ ವಲಯದ ಮುಖ್ಯ ಎಂಜಿನಿಯರ್‌ ವಿಜಯ್‌ಕುಮಾರ್‌ ಮಾಹಿತಿ ನೀಡಿದ್ದಾರೆ.

ಹಗಲು ಸಂಚಾರ ನಿಷೇಧವಿಲ್ಲ

ಸುಮನಹಳ್ಳಿ ಜಂಕ್ಷನ್‌ ಮೇಲ್ಸೇತುವೆ ದುರಸ್ತಿ ಕಾರ್ಯ ಡಿ.15ರ ನಂತರ ಮತ್ತೆ ಆರಂಭವಾದರೂ ಹಗಲು ವೇಳೆಯಲ್ಲಿ ಸೇತುವೆಯ ಮೇಲ್ಭಾಗದಲ್ಲಿ ವಾಹನ ಸಂಚಾರ ನಿಷೇಧಿಸುವುದಿಲ್ಲ. ರಾತ್ರಿ ವೇಳೆಯಲ್ಲಿ ಮಾತ್ರ ವಾಹನ ಸಂಚಾರ ಬಂದ್‌ ಮಾಡಿ ಕಾಮಗಾರಿ ನಡೆಸುವುದಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ. ಅಂತಿಮವಾಗಿ ತಜ್ಞರ ಅಭಿಪ್ರಾಯ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ಮಾಹಿತಿ ನೀಡಿದ್ದಾರೆ.