ಮಲೆನಾಡಿನಲ್ಲಿ ಅವಾಂತರ ಸೃಷ್ಟಿಸಿದ ಮಳೆರಾಯ
ಒಂದು ಕಡೆ ಧಾರಾಕಾರ ಮಳೆಯಾಗುತ್ತಿದ್ದರೆ, ಮತ್ತೊಂದು ಕಡೆ ಪ್ರವಾಹದ ಮಟ್ಟ ಮೀರಿ ಹೇಮಾವತಿ, ತುಂಗಾ, ಭದ್ರಾ ನದಿಗಳು ಹರಿಯುತ್ತಿದ್ದು ಜನರಲಿ ಆತಂಕವನ್ನು ಸೃಷ್ಟಿಮಾಡಿದೆ.
ಚಿಕ್ಕಮಗಳೂರು[ಆ.13]: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಅವಾಂತರವನ್ನೇ ಸೃಷ್ಟಿ ಮಾಡಿ, ಜನಜೀವನ ವ್ಯವಸ್ಥೆಯನ್ನ ಅಸ್ತವ್ಯಸ್ತಗೊಳಿಸಿದೆ.
ಒಂದು ಕಡೆ ಧಾರಾಕಾರ ಮಳೆಯಾಗುತ್ತಿದ್ದರೆ, ಮತ್ತೊಂದು ಕಡೆ ಪ್ರವಾಹದ ಮಟ್ಟ ಮೀರಿ ಹೇಮಾವತಿ, ತುಂಗಾ, ಭದ್ರಾ ನದಿಗಳು ಹರಿಯುತ್ತಿದ್ದು ಜನರಲಿ ಆತಂಕವನ್ನು ಸೃಷ್ಟಿಮಾಡಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಉದುಸೆ ಗ್ರಾಮದಲ್ಲಿ ಹೇಮಾವತಿ ನದಿಯ ಪ್ರವಾಹದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಾಟಿ ಮಾಡಿದ ಭತ್ತದ ಬೆಳೆ ನಾಶವಾಗಿದ್ದು ನೆರೆಯ ಭೀತಿಯನ್ನ ಉಂಟು ಮಾಡಿದೆ. ಇನ್ನೂ ಕಣತಿ ಗ್ರಾಮದಲ್ಲಿ ಆನೆಬಿದ್ದ ಹಳ್ಳ ಅವಾಂತರವನ್ನ ಉಂಟುಮಾಡಿದ್ದು, ಕಾಫಿತೋಟಕ್ಕೆ ಹಳ್ಳದ ನೀರು ನುಗ್ಗಿ ಕಾಫಿ ಮೆಣಸು ಅಡಿಕೆ ಬೆಳೆ ನಾಶವಾಗಿದೆ.
ಇನ್ನು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಮುಳ್ಳಯ್ಯನ ಗಿರಿ ರಸ್ತೆ ಮಾರ್ಗದಲ್ಲಿ ಗುಡ್ಡಗಳು ಕುಸಿದು ರಸ್ತೆಗೆ ಬೀಳುತ್ತಿದ್ದು ಪ್ರಸಿದ್ಧ ಪ್ರವಾಸಿ ಸ್ಥಳಗಳಾದ ದತ್ತಾತ್ರೇಯ ಬಾಬಾ ಬುಡನ್ ಗಿರಿ ಮುಳ್ಳಯ್ಯನ ಗಿರಿ ರಸ್ತೆ ಮಾರ್ಗವನ್ನ ಸಂಪೂರ್ಣ ಬಂದ್ ಮಾಡಲಾಗಿದೆ. ಗಿರಿಶ್ರೇಣಿಗಳಿಗೆ ತೆರಳದಂತೆ ಚಿಕ್ಕಮಗಳೂರು ಸಮೀಪದ ಕೈಮರ ಚೆಕ್ ಪೋಸ್ಟ್ ಬಳಿ ಪ್ರವಾಸಿಗರ ವಾಹನಗಳನ್ನ ತಡೆಹಿಡಿದು ಮುನ್ನೆಚ್ಚರಿಕೆಯಾಗಿ ವಾಪಸ್ಸು ಕಳಿಸಲಾಗುತ್ತಿದೆ. ಜತೆಗೆ ಜಿಲ್ಲೆಯ ಎನ್ ಅರ್ ಪುರ ಕೊಪ್ಪ ,ಶೃಂಗೇರಿ, ಮೂಡಿಗೆರೆ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆಯನ್ನ ಜಿಲ್ಲಾಡಳಿತ ನೀಡಿದೆ.