ಹಾವೇರಿಯಲ್ಲಿ ಅವಳಿ-ಜವಳಿ ಕಂದಮ್ಮ ಸೇರಿ ಒಂದೇ ಕುಟುಂಬದ ಮೂವರನ್ನು ಬಲಿ ಪಡೆದ ರಣ ಭೀಕರ ಮಳೆ!
ಹಾವೇರಿ ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆ ಮನೆ ಗೋಡೆ ಕುಸಿದು ಅವಳಿ ಜವಳಿ ಸೇರಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ಇಲ್ಲಿನ ಸವಣೂರು ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ.
ಸವಣೂರು (ಜು.19): ಹಾವೇರಿ ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆ ಮನೆ ಗೋಡೆ ಕುಸಿದು ಅವಳಿ ಜವಳಿ ಸೇರಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ಇಲ್ಲಿನ ಸವಣೂರು ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ.
ಮನೆಯಲ್ಲಿ ಮೂವರು ವೇಳೆ ಈ ದುರಂತ ನಡೆದಿದ್ದು, ಸುಮಾರು 30 ವರ್ಷದ ಚೆನ್ನಮ್ಮ ಜೊತೆಗೆ ಅಮೂಲ್ಯ ಮತ್ತು ಅನನ್ಯ ಎಂಬ ಎರಡು ಎಳೆಯ ಕಂದಮ್ಮಗಳು ಮೃತಪಟ್ಟಿವೆ. ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗ್ತಿರೋ ಹಿನ್ನಲೆ ಮನೆ ಗೋಡೆ ಕುಸಿದು ಇಂದು ನಸುಕಿನ ಜಾವ ಸುಮಾರು 3.30 ಕ್ಕೆ ಈ ಘಟನೆ ನಡೆದಿದೆ. ಮನೆಯಲ್ಲಿ ಒಟ್ಟು 6 ಜನ ವಾಸವಾಗಿದ್ದರು. ಮಲಗಿದ್ದ ಆರು ಜನರ ಮೇಲೆ ಕೂಡ ಗೋಡೆಗಳು ಬಿದ್ದಿದೆ. ನೆರೆ ಹೊರೆಯವರು ಆಸ್ಪತ್ರೆಗೆ ದಾಖಲಿಸೋ ಪ್ರಯತ್ನ ನಡೆಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೂವರು ಸಾವನ್ನಪ್ಪಿದ್ದಾರೆ.
ಕಬಿನಿ ಜಲಾಶಯದಿಂದ ಬರೋಬ್ಬರಿ 70 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ, ಪ್ರವಾಹದಲ್ಲಿ ತೇಲಿಬಂದ ಹಸುವಿನ ಮೃತದೇಹ!
ಇನ್ನು ವಯೋವೃದ್ದೆ ಯಲ್ಲಮ್ಮ ಹಾಗೂ ಅವರ ಪುತ್ರ ಮುತ್ತು ಜೊತೆಗೆ ಸೊಸೆ ಸುನೀತಾಗೆ ಗಂಭೀರ ಗಾಯವಾಗಿದ್ದು, ಸವಣೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹುಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
2 ಗಂಟೆ ಕಳೆದರೂ ಬರದ ಆ್ಯಂಬುಲೆನ್ಸ್
ದುರ್ಘಟನೆ ನಡೆದು 2 ತಾಸು ಆದರೂ ಆ್ಯಂಬುಲೆನ್ಸ್ ಸಿಗಲಿಲ್ಲ. ಆ್ಯಂಬುಲೆನ್ಸ್ ಸಕಾಲಕ್ಕೆ ಬಂದಿದ್ದರೆ ಮೂರು ಜೀವಗಳು ಉಳಿಯುತ್ತಿದ್ದವು. ಎಳೆಯ ಕಂದಮ್ಮಗಳಿನ್ನೂ ಜೀವಂತ ಇದ್ದವು. ಆ್ಯಂಬುಲೆನ್ಸ್ ಸಕಾಲಕ್ಕೆ ಬಂದಿದ್ದರೆ ಮಕ್ಕಳನ್ನು ಬದುಕಿಸಬಹುದಿತ್ತು. ಆದರೆ ಆ್ಯಂಬುಲೆನ್ಸ್ ಬರಲೇ ಇಲ್ಲ ಎಂದು ಸವಣೂರು ಸರ್ಕಾರಿ ಆಸ್ಪತ್ರೆ ಬಳಿ ಮಾದಾಪುರ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಅನಂತ್-ರಾಧಿಕಾ ಅದ್ಧೂರಿಯಲ್ಲಅತೀ ಕಂಜೂಸ್ ಮದುವೆ, ಇದು ನಿಜ ಅಂಬಾನಿ ಜಿಪುಣರಲ್ಲೇ ಜಿಪುಣ, ಕಾರಣಗಳು ಹಲವು!
ಮೇಲ್ಚಾವಣಿಯೇ ಮೂವರಿಗೆ ಮುಳುವಾಯ್ತು:
ಹಳೆಯ ಕಾಲದ ಮನೆಯಲ್ಲಿಯೇ ವಾಸವಿದ್ದ 6 ಜನರ ಕುಟುಂಬಕ್ಕೆ ಮನೆಯ ಮೇಲ್ಚಾವಣಿಯೇ ಮೂವರಿಗೆ ಮುಳುವಾಯ್ತು. ರಾತ್ರಿಯಿಡೀ ಮಳೆ ಸುರಿದ ಪರಿಣಾಮ ಸಂಪೂರ್ಣ ನೆನೆದು ಹೋಗಿದ್ದ ಮಣ್ಣಿನ ಮೇಲ್ಚಾವಣಿ. ಮೇಲೆ ಟಾರ್ಪಲಿನ್ ಹೊದಿಕೆ ಹಾಕಿದ್ದರೂ ಸಹ ವಿಪರೀತ ಮಳೆಗೆ ಟಾರ್ಪಲಿನ್ ಮೇಲೆ ನೀರು ನಿಂತ ಹಿನ್ನಲೆ ನೀರಿನ ಭಾರಕ್ಕೆ ಕುಸಿದು ಬಿತ್ತು.
ಮೇಲ್ಚಾವಣಿ ಕುಸಿದ ಶಬ್ದ ಕೇಳಿದ ತಕ್ಷಣ ನೆರೆಹೊರೆಯವರು ರಕ್ಷಣೆಗೆ ಧಾವಿಸಿದರು. ಮಣ್ಣಿನಡಿ ಸಿಲುಕಿದ್ದ 6 ಜನರಲ್ಲಿ ಮೂವರನ್ನು ಮೊದಲು ರಕ್ಷಣೆ ಮಾಡಲಾಯಿತು. ಆದರೆ ಮೇಲ್ಚಾವಣಿ ಮಣ್ಣು ಹಸಿಯಿದ್ದ ಕಾರಣ ಮಣ್ಣು ತೆರವು ಮಾಡೋದು ತಡ ಆಯ್ತು. ಆದರೂ ಮಣ್ಣಿನಡಿ ಸಿಲುಕಿದ್ದ ಎರಡು ಅವಳಿ ಜವಳಿ ಮಕ್ಕಳನ್ನು ನೆರೆಹೊರೆಯ ಜನ ಹೊರ ತೆಗೆದಿದ್ದರು. ಅಂಬುಲೆನ್ಸ್ ಬರೋದು ತಡ ಆದ ಕಾರಣ ಅವಳಿ ಜವಳಿ ಮಕ್ಕಳು ಸಾವನ್ನಪ್ಪಿದರು.
ಇನ್ನು ಘಟನೆ ನಡೆದ ಸ್ಥಳಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಭೇಟಿ ಕೊಟ್ಟು, ಮನೆ ಮೇಲ್ಚಾವಣಿ ಕುಸಿದು ಬಿದ್ದ ಜಾಗ ವೀಕ್ಷಿಸಿದರು. ಘಟನೆ ಸಂಭವಿಸಿದ ಬಗ್ಗೆ ಸ್ಥಳೀಯರು , ಅಧಿಕಾರಿಗಳಿಂದ ಮಾಹಿತಿ ಪಡೆದ ಬೊಮ್ಮಾಯಿ, ಮೃತರ ಸಂಬಂಧಿಕರಿಗೆ ಸಾಂತ್ವನ ಹೇಳಿದರು. ಜೊತೆಗೆ ವೈಯಕ್ತಿಕವಾಗಿ ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ನೀಡಿದರು.
ಬಳಿಕ ಮಾತನಾಡಿದ ಬೊಮ್ಮಾಯಿ, ಬಹಳ ದೊಡ್ಡ ದುರ್ಘಟನೆ ನಡೆದಿದೆ. ಒಂದೇ ಕುಟುಂಬದ ಮೂರು ಜನ ರಾತ್ರಿ ಮೂರು ಗಂಟೆಗೆ ಮೃತಪಟ್ಟಿದ್ದಾರೆ. ಸ್ಥಳೀಯರು ಹೇಳುವ ಪ್ರಕಾರ ಅಂಬುಲೆನ್ಸ್ ಬಂದಿದ್ದರೆ ಮಕ್ಕಳನ್ನು ಉಳಿಸಿಕೊಳ್ಳಬಹುದಿತ್ತು ಅಂತ ಮಾಹಿತಿ ನೀಡಿದ್ದಾರೆ. ಬಹಳ ತಡ ಆಗಿದೆ, ಬಹಳ ದೊಡ್ಡ ಲೋಪ ಆಗಿದೆ. ತುರ್ತು ಸಂದರ್ಭದಲ್ಲಿ ಸ್ಪಂದನೆ ಆಗದಿದ್ದರೆ ಅದು ವೈಫಲ್ಯವೇ.
ಒಬ್ಬ ಮಹಿಳೆ ಬದುಕಿದ್ದಾಳೆ, ಅಂಬುಲೆನ್ಸ್ ಬಂದಿದ್ದರೆ ಮಕ್ಕಳು ಬದುಕ್ತಾ ಇದ್ದವು. ಸರ್ಕಾರ ಪರಿಹಾರ ಕೊಡಲಿ. ಜನರ ರಕ್ಷಣೆಗೆ ಆಡಳಿತ ಯಂತ್ರ ಮುಂಜಾಗೃತ ಕ್ರಮ ತಗೊಂಡಿಲ್ಲ. ಉತ್ತರ ಕನ್ನಡ , ಶಿವಮೊಗ್ಗ ಮಳೆ ಆದರೆ ಹಾವೇರಿ ಜಿಲ್ಲೆಯಲ್ಲಿ ವರದಾ ನದಿ ತುಂಬಿ ಹರಿಯುತ್ತೆ. ಮುಂಜಾಗೃತಾ ಕ್ರಮ ತಗೊಬೇಕು. ಆದರೂ ಕೂಡಾ ಮುಂಜಾಗ್ರತಾ ಕ್ರಮ ತಗೊಂಡಿಲ್ಲ. ಹೀಗಾಗಿ ಅನಾಹುತ ಆಗ್ತಾವೆ. ಮಣ್ಣಿನ ಚಾವಣಿ ಆಗಿರುವ ಕಾರಣ ಕುಸಿದು ಬಿದ್ದಿದೆ. ಪ್ರವಾಹ ಬಂದರೂ ಯಾವುದೇ ಕ್ರಮ ಇಲ್ಲ. ಈ ಸರ್ಕಾರ ಸಂಕಷ್ಟದಲ್ಲಿರುವ ಜನರ ಪಾಲಿಗೆ ಇದ್ದೂ ಇಲ್ಲದಂತಾಗಿದೆ ಎಂದು ಬೊಮ್ಮಾಯಿ ಹೇಳಿದರು.