ಕಾರವಾರ: ಸುರಂಗದ ಪ್ರಾರಂಭದಲ್ಲಿ ಗುಡ್ಡ ಕುಸಿತ!
ನಗರದ ಲಂಡನ್ ಬ್ರಿಡ್ಜ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರ್ಮಿಸಲಾದ ಸುರಂಗದ ಪ್ರಾರಂಭದಲ್ಲಿ ಒಂದು ಕಡೆ ಸಣ್ಣಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದೆ.
ಕಾರವಾರ ಜೂ.29) : ನಗರದ ಲಂಡನ್ ಬ್ರಿಡ್ಜ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರ್ಮಿಸಲಾದ ಸುರಂಗದ ಪ್ರಾರಂಭದಲ್ಲಿ ಒಂದು ಕಡೆ ಸಣ್ಣಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದೆ.
ನಗದಲ್ಲಿ ಬುಧವಾರ ನಸುಕಿನಲ್ಲಿ ಭಾರೀ ಮಳೆಯಾಗಿದ್ದು, ಮಧ್ಯಾಹ್ನದವರೆಗೂ ಜಿಟಿ ಜಿಟಿ ಮಳೆಯಾಗಿದೆ. ಹೀಗಾಗಿ ನಗರದಿಂದ ಬಿಣಗಾ ಸಂಪರ್ಕಿಸುವ ಸುರಂಗದ ಆರಂಭದಲ್ಲಿ ಇರುವ ಗುಡ್ಡದ ಮಣ್ಣು ಬುಧವಾರ ಸಂಜೆ ಕುಸಿತವಾಗಿದೆ. ಇದರಿಂದ ಹೆದ್ದಾರಿಯಲ್ಲಿ ಕೆಲಹೊತ್ತು ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಕಂಪೆನಿಯವರು ಸುರಂಗದ ಎದುರು ಬ್ಯಾರಿಕೇಡ್ ಅಳವಡಿಸಿದ್ದು, ಅರ್ಧ ರಸ್ತೆ ಬಂದ್ ಮಾಡಿ ಹಂತ ಹಂತವಾಗಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಳೆಯ ಅವಾಂತರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ
ಜೆಸಿಬಿ ಸಹಾಯದಿಂದ ಗುಡ್ಡದ ಮೇಲಿನ ಮಣ್ಣು ತೆರವು ಮಾಡಲಾಗಿದೆ. ಅದೃಷ್ಟವಶಾತ್ ಯಾವುದೇ ವಾಹನ ಸವಾರರಿಗೆ ತೊಂದರೆಯಾಗಿಲ್ಲ.
ಇಂದು ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ
ಮುಂಗಾರು ಪುನಃ ಚುರುಕುಗೊಂಡಿರುವುದರಿಂದ ಮುಂದಿನ 24 ಗಂಟೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ಆರೆಂಜ್ ಅಲರ್ಚ್’ ಎಚ್ಚರಿಕೆ ನೀಡಲಾಗಿದೆ.
ಕೇರಳದ ಕರಾವಳಿಯಿಂದ ಮಹಾರಾಷ್ಟ್ರದ ಕರಾವಳಿವರೆಗೆ ಗಾಳಿಯ ಒತ್ತಡ ಕಡಿಮೆಯಾದ ವಾತಾವರಣ ರೂಪಗೊಂಡಿರುವುದರಿಂದ ಮುಂದಿನ ಐದು ದಿನ ರಾಜ್ಯದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಮುಂದಿನ 24 ಗಂಟೆಯಲ್ಲಿ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 115 ಮಿ.ಮೀನಿಂದ 204 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿಯ 3 ಜಿಲ್ಲೆಗಳಲ್ಲಿ ಭಾರೀ ಮಳೆಯ ಆರೆಂಜ್ ಅಲರ್ಟ್
ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಮುಂದಿನ 24 ಗಂಟೆಯಲ್ಲಿ 65 ಮಿ.ಮೀ ನಿಂದ 114 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇರುವುದರಿಂದ ಈ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಚ್’ ನೀಡಲಾಗಿದೆ. ಜೂ.30 ರಿಂದ ಜುಲೈ 3ವರೆಗೆ ಕರಾವಳಿಯ ಎಲ್ಲ ಜಿಲ್ಲೆಗಳಿಗೆ ಎಲ್ಲೋ ಅಲರ್ಚ್ ಎಚ್ಚರಿಕೆ ನೀಡಲಾಗಿದೆ. ಉಳಿದಂತೆ ದಕ್ಷಿಣ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಉತ್ತಮ ಮಳೆ ಆಗುವ ಸಾಧ್ಯತೆ ಇದೆ ಹವಾಮಾನ ಇಲಾಖೆ ತಿಳಿಸಿದೆ.