ಮಂಗಳೂರು (ಆ. 11): ಹಚ್ಚಹಸಿರು ಹೊದ್ದು ಮಲಗಿದ ಪಶ್ಚಿಮಘಟ್ಟ, ನಿತ್ಯದ ದಿನಚರಿ ಎಂಬಂತೆ ಅಲೆಯನ್ನು ದಡಕ್ಕೆ ಅಪ್ಪಳಿಸುತ್ತಿದ್ದ ಸಮುದ್ರರಾಯ, ಆಗಾಗ ತಂಗಾಳಿಯ ಆಹ್ವಾದ, ಕಣ್ಮನಕ್ಕೆ ಸುತ್ತೆಲ್ಲ ಕಂಪನ್ನು ಬೀರುತ್ತಿದ್ದ ಚಾರುಲತೆಗಳು.. ತೆಂಕಣ ಗಾಳಿ, ಮೂಡಣ ಬಿಸಿಲಿನ ಹಸುರ ಕಾನನಗಳಲ್ಲಿ ಸಂಚರಿಸುವ ಆಪ್ಯಾಯಮಾನ, ಬೆಟ್ಟಗುಡ್ಡಗಳ ಸಂದಿಗಳಿಂದ ಧುಮ್ಮುಕ್ಕುವ ಝರಿಯ ಪರಿ, ಒಮ್ಮೆ ಕರಾವಳಿಯನ್ನು ದಿಟ್ಟಿಸಿ ನೋಡಿದರೆ ಕಣ್ತುಂಬಿಕೊಳ್ಳುವ ದೃಶ್ಯಗಳಿವು.

ಕುರುಕ್ಷೇತ್ರ, ಕೆಂಪೇಗೌಡ-2 ಗೂ ಬಿತ್ತು ನೆರೆ ಬರೆ; ಬಾಕ್ಸಾಫೀಸ್ ಕಲೆಕ್ಷನ್ ಠುಸ್!

ಇದು ಬೇಸಿಗೆ, ಮಳೆ, ಚಳಿಗಾಲ ಎಂಬ ಭೇದವಿಲ್ಲದೆ, ಅನುದಿನವೂ ಕಾಣ ಸಿಗುವ ದೃಶ್ಯ. ಬಹುಕಾಲದ ಈ ಬಗೆಯ ಒಡನಾಟ ಈ ಬಾರಿ ದೂರವಾಗಿದೆ. ಕರಾವಳಿ ಜಿಲ್ಲೆಯಲ್ಲಿ ಪ್ರಕೃತಿ ಮುನಿದಿದೆ. ಹೊದ್ದು ಮಲಗಿದ ಪಶ್ಚಿಮಘಟ್ಟ ಕೊಡವಿ ಎದ್ದಿದೆ. ಅಲೆಯನ್ನು ದಡಕ್ಕೆ ಅಪ್ಪಳಿಸುತ್ತಿದ್ದ ಸಮುದ್ರರಾಜ ದಡವನ್ನೂ ಮೀರಿ ಮುಂದೆ ಬಂದುಬಿಟ್ಟಿದ್ದಾನೆ. ಈ ಪರಿಯ ಯೋಚನೆಯನ್ನೇ ಮಾಡದ ಜನತೆಯೆದುರು ಅಪಾಯ ಬಾಯ್ತೆರೆದು ನಿಂತಿದೆ.

ಕರಾವಳಿಗರ ಬದುಕು ದುಸ್ತರ

ಕರಾವಳಿಗರಿಗೆ ಮಳೆ, ಗಾಳಿಮಳೆ, ಬಿರುಗಾಳಿ, ಸುಂಟರಗಾಳಿ, ವರ್ಷಧಾರೆ, ಧಾರಾಕಾರ ಮಳೆ ಯಾವತ್ತೂ ಹೊಸದಲ್ಲ. ಪ್ರಕೃತಿಯೊಂದಿಗೆ ಬದುಕು ಕಟ್ಟಿಕೊಂಡವರು. ಪ್ರಕೃತಿಯೊಂದಿಗೆ ಸಂಘರ್ಷ, ಸರಸದ ಬದುಕನ್ನು ಕಂಡಿದ್ದಾರೆ. ಅಂತಹ ಕರಾವಳಿಗರ ಬದುಕು ಈಗ ಸಂಕಷ್ಟದಲ್ಲಿದೆ.

'ನಿಮ್ಮ ರಕ್ಷಣೆ ನನ್ನ ಕರ್ತವ್ಯ' : ಪುಟ್ಟ ಮಕ್ಕಳಿಗಾಗಿ ಜೀವ ಪಣಕ್ಕಿಟ್ಟ ಈ 'ಹೀರೋ' ಯಾರು?

ಈ ಮಳೆಗಾಲ ಎಂದಿನಂತೆ ಇಲ್ಲ ಎಂಬುದನ್ನು ಮಳೆ ತೋರಿಸಿಕೊಟ್ಟಿದೆ. ಜೂನ್, ಜುಲೈನಲ್ಲಿ ಗದ್ದೆಗಳಲ್ಲಿ ಕೇಳಿಬರುತ್ತಿದ್ದ ಬತ್ತದ ನಾಟಿ ಮಾಡುತ್ತಿದ್ದ ಸ್ವರ ಕಳೆಗುಂದಿದೆ. ಆ ಎರಡು ತಿಂಗಳು ಮಳೆ ಮಾಸಿದರೆ, ಈಗ ವರಾತ ಇಟ್ಟುಕೊಂಡಿದೆ. ಬೇಡ ಬೇಡ ಎಂದರೂ ವರ್ಷಧಾರೆ ಹುಯ್ಯುತ್ತಿದೆ. ಧಾರಾಕಾರ ಮಳೆಗೆ ಕಂಬಳಿ ಹೊದ್ದು ಮನೆಯಲ್ಲಿ ಮುದುಡಿಕೊಂಡಿದ್ದ ಜೀವಗಳು ಜೀವ ಉಳಿದರೆ ಸಾಕು ಎಂದು ಹೊರಗೋಡುತ್ತಿವೆ.

ನದಿಗಳ ರುದ್ರನೋಟ

ಕಳೆದ ನಾಲ್ಕೈದು ದಿನಗಳಿಂದ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಬಿಟ್ಟುಬಿಡದೆ ಮಳೆ. ಪ್ರಕೃತಿಯೇ ಮುನಿಸಿಕೊಂಡು ಉಧೋ ಎಂದು ಸುರಿಯುತ್ತಿದೆ. ಮಂಗಳೂರು ನಗರ ಸೇರಿದಂತೆ ದ.ಕ. ಜಿಲ್ಲೆಯ ಎಲ್ಲ ಏಳು ತಾಲೂಕುಗಳಲ್ಲೂ ವರುಣನ ರುದ್ರ ನರ್ತನ. ಹಳ್ಳಕೊಳ್ಳಗಳು ಭರ್ತಿಯಾದರೂ ನಿಲ್ಲದ ಮಳೆಯ ಅಬ್ಬರ. ಉಕ್ಕಿ ಹರಿಯುತ್ತಿರುವ ನದಿ, ತೊರೆ, ತೋಡು, ಹೊಳೆಗಳು. ಅಪಾಯ ಮಟ್ಟವನ್ನು ಮೀರಿದ ಪ್ರವಾಹ ಜಿಲ್ಲೆಯ ಜನಜೀವನವನ್ನು ಹೊಸಕಿ ಹಾಕಿದೆ.

ಬೆಳಿಗ್ಗೆ ಎದ್ದು ಬಾಗಿಲು ತೆರೆದರೆ ಕೆಳಮನೆಯಲ್ಲಿ ನೀರೋ ನೀರು!

ನೇತ್ರಾವತಿ, ಕುಮಾರಧಾರ, ಫಲ್ಗುಣಿ, ಶಾಂಭವಿ, ನಂದಿನಿ, ಸೌಪರ್ಣಿಕಾ, ಸೀತಾ, ವರಾಹಿ.. ಈ ನದಿಗಳೆಲ್ಲ ತಮ್ಮ ಪ್ರತಾಪ ತೋರಿಸುತ್ತಿವೆ. 1974 ರ ಬಳಿಕ ಕರಾವಳಿ ಜಿಲ್ಲೆ ಮತ್ತೊಮ್ಮೆ ನಲುಗಿ ಹೋಗುವಂತಾಗಿದೆ. ಸುರಕ್ಷಿತ, ಪ್ರದೇಶಗಳಿಗೆ ತೆರಳಿದರೂ ಅಲ್ಲಿಯೂ ನಿರಂತರ ಮಳೆ ನೆಮ್ಮದಿಗೆ ಅವಕಾಶ ನೀಡುತ್ತಿಲ್ಲ. ಕಳೆದ ವರ್ಷ ಮೇ ಅಂತ್ಯಕ್ಕೆ ಒಂದೇ ದಿನದಲ್ಲಿ ಜಿಲ್ಲೆಯನ್ನು ಹಿಂಡಿಹಿಪ್ಪೆ ಮಾಡಿದ ಮಳ ಈ ಬಾರಿ ಕರಾವಳಿಗರ ಜೀವ ಸೆಲೆಯನ್ನೇ ಕಿತ್ತುಕೊಂಡಿದೆ.

- ಆತ್ಮಭೂಷಣ್ ಭಟ್