ಗಾಂಧೀನಗರ[ಆ.11]: ಸದ್ಯ ಸುರಿಯುತ್ತಿರುವ ಆಶ್ಲೇಷಾ ಮಳೆ ಹಲವರನ್ನು ನಿರಾಶ್ರಿತರನ್ನಾಗಿಸಿದೆ. ಬಿಡದೇ ಸುರಿಯುತ್ತಿರುವ ಮಳೆಗೆ ಮನೆಯನ್ನು ಕಳೆದುಕೊಂಡ ಜನರು ಪರಿಹಾರ ಕೇಂದ್ರದತ್ತ ಹೆಜ್ಜೆ ಹಾಕಿದ್ದಾರೆ. ರಕ್ಷಣಾ ಸಿಬ್ಬಂದಿ ಜನರ ರಕ್ಷಣೆಗಾಗಿ ಟೊಂಕ ಕಟ್ಟಿ ನಿಂತಿದ್ದಾರೆ. ತಮ್ಮ ಜೀವ ಪಣಕ್ಕಿಟ್ಟು ಜನರನ್ನು ರಕ್ಷಿಸುತ್ತಿದ್ದಾರೆ.  ಹೀಗಿರುವಾಗ ಪೊಲೀಸ್ ಸಿಬ್ಬಂದಿಯೊಬ್ಬರು ಎದೆ ಎತ್ತರ ನೀರಿದ್ದರೂ ಲೆಕ್ಕಿಸದೆ ಇಬ್ಬರು ಪುಟ್ಟ ಮಕ್ಕಳನ್ನು ಹೊತ್ತು ಸಾಗುತ್ತಿರುವ ವಿಡಿಯೋ ಒಂದು ಎಲ್ಲೆಡೆ ವೈರಲ್ ಆಗಿದ್ದು, ಎಲ್ಲರ ಮನ ಕದ್ದಿದೆ. ಹಾಗಾದ್ರೆ ಇಂತಹ ಸಾಹಸ ಮೆರೆದ ಆ ಹೀರೋ ಯಾರು? ಇಲ್ಲಿದೆ ವಿವರ.

ವರುಣನ ಅಬ್ಬರ ಕರ್ನಾಟಕ ಮಾತ್ರವಲ್ಲ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಕೇರಳ, ಗುಜರಾತ್ ಸೇರಿದಂತೆ ದೇಶದ ಹಲವೆಡೆ ಅವಾಂತರ ಸೃಷ್ಟಿಸಿದೆ. ಹೀಗಿರುವಾಗ ಪ್ರವಾಹದಲ್ಲಿ ಸಿಲುಕಿದವರನ್ನು ಕಾಪಾಡಲು ರಕ್ಷಣಾ ಸಿಬ್ಬಂದಿ ಮುಂದಾಗಿದ್ದಾರೆ. ಗುಜರಾತ್ ನ ಮೊರ್ಬಿ ಬಳಿ ಇಬ್ಬರು ಪುಟ್ಟ ಮಕ್ಕಳು ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು. ಹೀಗಿರುವಾಗ ಗುಜರಾತ್ ಪೊಲೀಸ್ ಕಾನ್ಸ್ ಸ್ಟೇಬಲ್ ಪೃಥ್ವಿರಾಜ್ ಸಿನ್ಹಾ ತನ್ನ ಪ್ರಾಣವನ್ನು ಪಣಕ್ಕಿಟ್ಟು, ಪುಟ್ಟ ಮಕ್ಕಳನ್ನು ಕಾಪಾಡಿದ್ದಾರೆ.

ಎದೆ ಎತ್ತರಕ್ಕೆ ನೀರು ತುಂಬಿಕೊಂಡಿದ್ದರೂ ಚಿಂತಿಸದ ಈ ಹೀರೋ, ಮಕ್ಕಳಿಗೆ ನೀರು ಸೋಕದಂತೆ ಭುಜದ ಮೇಲೆ ಕುಳ್ಳಿರಿಸಿ ಸುಮಾರು 2 ಕಿ. ಮೀಟರ್ ದೂರ ಪ್ರವಾಹದಲ್ಲಿ ನಡೆದು ಬಂದಿದ್ದಾರೆ. ಈ ಮೂಲಕ ಪುಟ್ಟ ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಸಿನ್ಹಾ ಈ ಸಾಹಸಕ್ಕೆ ಎಲ್ಲಾರೂ ತಲೆ ಬಾಗಿದ್ದು, ಸಲಾಂ ಎಂದಿದ್ದಾರೆ.