Asianet Suvarna News Asianet Suvarna News

ಮಳೆರಾಯನ ಆರ್ಭಟಕ್ಕೆ ಪರದಾಡಿದ ಬೆಂಗ್ಳೂರಿನ ಜನ..!

ಮುಂದಿನ ಐದು ದಿನ ಗುಡುಗು ಸಹಿತ ಹಗುರದಿಂದ ಸಾಧಾರಾಣ ಮಳೆಯಾಗುವ ಸಾಧ್ಯತೆ ಇದೆ. ಮೋಡ ಮುಸುಕಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Heavy Rain on June 20th in Bengaluru grg
Author
First Published Jun 21, 2023, 4:39 AM IST

ಬೆಂಗಳೂರು(ಜೂ.21):  ನಗರದಲ್ಲಿ ಮಂಗಳವಾರ ಬೆಳಗ್ಗೆ ಮಳೆರಾಯ ಆರ್ಭಟಿಸಿದ ಪರಿಣಾಮ ನಿತ್ಯದಂತೆ ವಿವಿಧ ಕೆಲಸಗಳಿಗೆ ಹೊರಟವರಿಗೆ, ವಿದ್ಯಾರ್ಥಿಗಳು ಪರದಾಡಿದರು. ಧಾವಂತದಲ್ಲಿ ತಮ್ಮ ವಾಹನದಲ್ಲಿ ತೆರಳುತ್ತಿದ್ದ ಸವಾರರು, ಪಾದಚಾರಿಗಳು ಮಳೆಯಲ್ಲಿ ನೆನೆಯಬೇಕಾಯಿತು.

ನಗರದಲ್ಲಿ ಮಧ್ಯಾಹ್ನ ಇಲ್ಲವೇ ಸಂಜೆ ಸುರಿಯುತ್ತಿದ್ದ ಮಳೆ ಮಂಗಳವಾರ ಬೆಳಗ್ಗೆಯಿಂದಲೇ ಜಿಟಿ ಜಿಟಿಯಾಗಿ ಬರುತ್ತಿತ್ತು. ಸುಮಾರು 10 ಗಂಟೆಯಿಂದ ಧಾರಾಕಾರವಾಗಿ ನಗರದ ಬಹುತೇಕ ಕಡೆ ಸುರಿಯಿತು. ಮಳೆಯಿಂದ ತಪ್ಪಿಸಿಕೊಳ್ಳಲು ವಾಹನ ಸವಾರರು ಅಂಡರ್‌ ಪಾಸ್‌, ಮೆಟ್ರೋ ಮಾರ್ಗದ ಅಡಿಯಲ್ಲಿಯಲ್ಲಿ ನಿಲ್ಲಬೇಕಾಯಿತು. ಹಲವು ರಸ್ತೆಗಳಲ್ಲಿ ನೀರು ನಿಂತು ರಸ್ತೆಗಳು ಹೊಳೆಗಳಾದಂತೆ ಕಂಡು ಬಂತು.

ಮುಂಗಾರು ಕೈಕೊಡುವ ಮುನ್ಸೂಚನೆಯೇ ಇಲ್ಲ: ಹವಾಮಾನ ಇಲಾಖೆ ಘೋಷಣೆ

ನಗರದ ಮೆಜೆಸ್ಟಿಕ್‌ ಸೇರಿದಂತೆ ಶಿವಾಜಿನಗರ, ಗಾಂಧಿನಗರ, ಶಾಂತಿನಗರ, ವಿಜಯನಗರ, ಜಯನಗರ, ಕಾರ್ಪೊರೇಷನ್‌ ಸರ್ಕಲ್‌, ಕೆಆರ್‌ ಮಾರುಕಟ್ಟೆ, ವಿಧಾನಸೌಧ, ಎಂಜಿ ರಸ್ತೆ, ರಿಚ್ಮಂಡ್‌ ರೋಡ್‌, ಹೆಬ್ಬಾಳ, ಯಲಹಂಕ, ರಾಜಾಜಿನಗರ, ಗೋವಿಂದರಾಜನಗರ, ಜೆಪಿ ನಗರ, ವಿದ್ಯಾರಣ್ಯಪುರ, ಬನಶಂಕರಿ, ಹಲಸೂರು, ಶಿವಾನಂದ ಸರ್ಕಲ್‌, ಮಹಾಲಕ್ಷ್ಮೀ ಲೇಔಟ್‌, ರಾಜರಾಜೇಶ್ವರಿ ನಗರ, ಆನಂದರಾವ್‌ ಸೃಕಲ್‌ ಸೇರಿ ಹಲವೆಡೆ ಭಾರೀ ಮಳೆಯಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಅಪಾಯಕಾರಿ ಎಂದು ಗುರುತಿಸಲಾದ ಅಂಡರ್‌ ಪಾಸ್‌ಗಳಿಗೆ ಬ್ಯಾರಿಕೇಡ್‌ ಅಳವಡಿಕೆ ಮಾಡಿ ವಾಹನ ಸಂಚಾರ ನಿರ್ಬಂಧಿಸಲಾಯಿತು. ಮಧ್ಯಾಹ್ನದ ವರೆಗೆ ಜಿಟಿಜಿಟಿ ಮಳೆ ನಗರದಲ್ಲಿ ಮುಂದುವರೆದಿತ್ತು. ಸಂಜೆ ವೇಳೆ ಮಳೆ ಸ್ವಲ್ಪ ಮಟ್ಟಿನ ಬಿಡುವು ನೀಡಿತ್ತು. ಸಂಜೆಯೂ ಮಳೆ ಬರುವ ಸೂಚನೆಗಳ ಕಂಡು ಬಂದ ಹಿನ್ನೆಲೆಯಲ್ಲಿ ಜನರು ಅವಸರದಿಂದ ಮನೆ ಸೇರಿಕೊಂಡರು.

ತೆರವು ಕಾರ್ಯಚರಣೆ ಸ್ಥಗಿತ:

ಮಹದೇವಪುರ ವಲಯದಲ್ಲಿ ಕಳೆದ ಎರಡು ದಿನಗಳಿಂದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಚರಣೆ ನಡೆಸುತ್ತಿದ್ದು, ಮಂಗಳವಾರ ಕಾರ್ಯಚರಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಬೆಳಗ್ಗೆಯಿಂದಲೇ ಮಳೆ ಆರಂಭಗೊಂಡ ಹಿನ್ನೆಲೆಯಲ್ಲಿ ತೆರವು ಕಾರ್ಯಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮಹದೇವಪುರ ವಲಯದ ಮುಖ್ಯ ಎಂಜಿನಿಯರ್‌ ಲೋಕೇಶ್‌ ಮಾಹಿತಿ ನೀಡಿದ್ದಾರೆ.

ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಮಳೆಯ ಆರ್ಭಟ: ಸಾರ್ವಜನಿಕರ ಪರದಾಟ

ನಗರದಲ್ಲಿ ಸರಾಸರಿ 1.4 ಸೆಂ.ಮೀ. ಮಳೆ

ಮಂಗಳವಾರ ನಗರದಲ್ಲಿ ಸರಾಸರಿ 1.4 ಸೆಂ.ಮೀ. ಮಳೆಯಾಗಿದ್ದು, ಹೊರಮಾವಿನಲ್ಲಿ ಅತಿ ಹೆಚ್ಚು 4.7 ಸೆಂ.ಮೀ ಮಳೆಯಾಗಿದೆ. ಕೊಡಿಗೇಹಳ್ಳಿಯಲ್ಲಿ 3.8, ಕೊಟ್ಟಿಗೆಪಾಳ್ಯದಲ್ಲಿ 3.5, ವಿದ್ಯಾಪೀಠದಲ್ಲಿ 3.3, ವಿಶ್ವನಾಥ ನಾಗೇನಹಳ್ಳಿ, ಯಲಹಂಕದಲ್ಲಿ ತಲಾ 2.8, ವಿದ್ಯಾರಣ್ಯಪುರ 2.7, ಜಕ್ಕೂರು, ನಾಗಪುರದಲ್ಲಿ ತಲಾ 2.6, ರಾಜ್‌ಮಹಲ್‌ ಗುಟ್ಟಹಳ್ಳಿಯಲ್ಲಿ 2.4, ಪುಲಕೇಶಿನಗರದಲ್ಲಿ 2.3, ಗಾಳಿ ಆಂಜನೇಯಸ್ವಾಮಿ ದೇವಸ್ಥಾನ 2.2, ಹಂಪಿನಗರ, ದಯಾನಂದ ನಗರದಲ್ಲಿ ತಲಾ 2.1, ಸಂಪಗಿರಾಮನಗರ ಹಾಗೂ ಯಶವಂತಪುರದಲ್ಲಿ ತಲಾ 2 ಸೆಂ.ಮೀ ಮಳೆಯಾದ ವರದಿಯಾಗಿದೆ.

ಇನ್ನೂ ಐದು ದಿನ ಮಳೆ

ನಗರದಲ್ಲಿ ಮುಂದಿನ ಐದು ದಿನ ಗುಡುಗು ಸಹಿತ ಹಗುರದಿಂದ ಸಾಧಾರಾಣ ಮಳೆಯಾಗುವ ಸಾಧ್ಯತೆ ಇದೆ. ಮೋಡ ಮುಸುಕಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Follow Us:
Download App:
  • android
  • ios