ಚಿಕ್ಕಮಗಳೂರು(ಮೇ.02): ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಗುರುವಾರ ಸಂಜೆ ಬೀಸಿದ ಬಿರುಗಾಳಿ, ಮಳೆಯ ಹೊಡೆತಕ್ಕೆ ಸಾವಿರಾರು ನೇಂದ್ರ ಬಾಳೆ, ರಬ್ಬರ್‌ ಮರ, ಅಡಕೆ ಮರ ಉರುಳಿ ಬಿದ್ದಿದ್ದು, ಲಕ್ಷಾಂತರ ರುಪಾಯಿ ನಷ್ಟಉಂಟಾಗಿದೆ.

ಮಡಬೂರು ಸಮೀಪದ ಎಕ್ಕಡಬೈಲು ಹೂವಪ್ಪ ಎಂಬುವರ ಮನೆಯ ಮೇಲೆ ಮರ ಉರುಳಿ ಬಿದ್ದು, ಹೆಂಚು ಪುಡಿಯಾಗಿ, ಗೋಡೆ ಬಿರುಕು ಬಿಟ್ಟಿದೆ. ಮಲ್ಲಿಕೊಪ್ಪದ ಪಿ.ಸಿ.ವರ್ಗೀಸ್‌ ಎಂಬುವರ 4 ಎಕರೆ ರಬ್ಬರ್‌ ತೋಟದಲ್ಲಿ 65 ರಬ್ಬರ್‌ ಮರ ಉರುಳಿ ಬಿದ್ದಿದೆ. ನೇಂದ್ರ ಬಾಳೆ, ಅಡಿಕೆ ಮರ ಉರುಳಿದೆ. ಇದೇ ಗ್ರಾಮದ ರನ್ನಿ ಎಂಬುವರ 3600 ನೇಂದ್ರ ಬಾಳೆ ಉರುಳಿ ಬಿದ್ದಿದೆ. ರನ್ನಿ ಅವರು 6 ಲಕ್ಷ ರು. ಖರ್ಚು ಮಾಡಿದ್ದು ಇನ್ನು ಕೇವಲ 20 ದಿನದಲ್ಲಿ ಬಾಳೆ ಕೊನೆ ಕಟಾವು ಮಾಡಬೇಕಾಗಿತ್ತು.

60 ಸಾವಿರ ಬಂಡವಾಳ, 2 ಲಕ್ಷ ಲಾಭ: ಲಾಕ್‌ಡೌನ್‌ನಲ್ಲೂ ಕಲ್ಲಂಗಡಿ ಬಂಪರ್ ಸೇಲ್

ಮಲ್ಲಿಕೊಪ್ಪ ಗ್ರಾಮದ ಸಂತೋಷ್‌ ಅವರಿಗೆ ಸೇರಿದ ಟ್ಯಾಂಪಿಂಗ್‌ಗೆ ಬಂದಿದ್ದ 200 ರಬ್ಬರ್‌ ಮರ ಉರುಳಿ ಬಿದ್ದಿವೆ. ಸೆಬಾಸ್ಟಿನ್‌ ಅವರಿಗೆ ಸೇರಿದ ರಬ್ಬರ್‌ ಮರಗಳು ಉರುಳಿ ಬಿದ್ದಿದೆ. ಇದೇ ಗ್ರಾಮದ ಪುಷ್ಪ ಎಂಬುವರ ಮನೆಯ ಮಾಡಿನ 12 ಶೀಟ್‌ಗಳು ಹಾರಿಹೋಗಿದ್ದು, ಉಳಿದ ಮಾಡಿನ ಶೀಟ್‌ಗಳು ಬಿರುಕು ಬಿಟ್ಟಿದೆ.

ಕೆ.ಕಣಬೂರು ಗ್ರಾಮದ ಜಂಬಳ್ಳಿಯ ಎಂ.ವಿ.ಬೇಬಿ ಎಂಬುವರಿಗೆ ಸೇರಿದ 900 ನೇಂದ್ರ ಬಾಳೆ ಮುರಿದು ಬಿದ್ದಿದೆ. ಸಾತ್ಕೋಳಿ ಗ್ರಾಮದ ಶೇಖರ ಮತ್ತು ಮಧು ಎಂಬುವರ ಮನೆಯ ಶೀಟು, ಹೆಂಚು ಹಾರಿ ಹೋಗಿದೆ, ಗೋಡೆ ಬಿರುಕು ಬಿಟ್ಟಿದೆ.

ಜನಪ್ರತಿನಿಧಿಗಳ ಭೇಟಿ:

ಬಿರುಗಾಳಿಯಿಂದ ಹಾನಿಗೊಳಗಾದ ತೋಟಗಳನ್ನು ಶುಕ್ರವಾರ ಜಿಪಂ ಸದಸ್ಯ ಪಿ.ಆರ್‌.ಸದಾಶಿವ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್‌, ಮುತ್ತಿನಕೊಪ್ಪ ಗ್ರಾಪಂ ಅಧ್ಯಕ್ಷ ಸಫೀರ್‌ ಅಹಮ್ಮದ್‌, ಕಡಹಿನಬೈಲು ಗ್ರಾಪಂ ಸದಸ್ಯ ಎ.ಎಲ್‌.ಮಹೇಶ್‌ ವೀಕ್ಷಣೆ ಮಾಡಿದರು.

ಜಿಪಂ ಸದಸ್ಯ ಪಿ.ಆರ್‌.ಸದಾಶಿವ ಸುದ್ದಿಗಾರರೊಂದಿಗೆ ಮಾತನಾಡಿ, ಬಿರುಗಾಳಿಯಿಂದ ರೈತರಿಗೆ ಲಕ್ಷಾಂತರ ರುಪಾಯಿ ಬೆಳೆ ನಷ್ಟಉಂಟಾಗಿದೆ. ಸರ್ಕಾರವು ತಕ್ಷಣ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.