60 ಸಾವಿರ ಬಂಡವಾಳ, 2 ಲಕ್ಷ ಲಾಭ: ಲಾಕ್‌ಡೌನ್‌ನಲ್ಲೂ ಕಲ್ಲಂಗಡಿ ಬಂಪರ್ ಸೇಲ್
ಸಾವಯವ ಕೃಷಿಯಲ್ಲಿ ಕಲ್ಲಂಗಡಿ ಬೆಳೆಗಾಗಿ ಈ ರೈತ ಸಹೋದರರು ಖರ್ಚು ಮಾಡಿದ್ದು, ಕೇವಲ 60 ಸಾವಿರ ರು. ಆದರೆ, ಖರ್ಚು ಕಳೆದು ಲಾಭ ಗಳಿಸಿದ್ದು 2.20 ಲಕ್ಷ ರು.ಗಳು! ಬಂಪರ್ ಕಲ್ಲಂಗಡಿ ಸೇಲ್ ನಡೆದಿದ್ದು ಹೇಗೆ..? ಇಲ್ಲಿ ಓದಿ
ಚಿಕ್ಕಮಗಳೂರು(ಮೇ.02): ತರೀಕೆರೆ ಸಮೀಪದ ಅಜ್ಜಂಪುರ ತಾಲೂಕು ಬಗ್ಗವಳ್ಳಿ ರೈತ ಸಹೋದರರಾದ ಮೃತ್ಯುಂಜಯಪ್ಪ ಮತ್ತು ಲೋಕೇಶಪ್ಪ ಅವರು ತಮ್ಮ ಎರಡು ಎಕರೆ ಪ್ರದೇಶದಲ್ಲಿ ಸಾವಯವ ಕೃಷಿ ಮಾಡಿ, ಕಡಿಮೆ ಖರ್ಚಿನಲ್ಲಿ ಗುಣಮಟ್ಟದ ಕಲ್ಲಂಗಡಿ ಬೆಳೆದು ಹೆಚ್ಚು ಲಾಭ ಗಳಿಸುವ ಮೂಲಕ ಇತರರಿಗೆ ಮಾದರಿ ಎನಿಸಿದ್ದಾರೆ.
ಬೆಳೆದ ಕಲ್ಲಂಗಡಿ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯೂ ದೊರೆತಿದೆ. ಸಾವಯವ ಕೃಷಿಯಲ್ಲಿ ಕಲ್ಲಂಗಡಿ ಬೆಳೆಗಾಗಿ ಈ ರೈತ ಸಹೋದರರು ಖರ್ಚು ಮಾಡಿದ್ದು, ಕೇವಲ 60 ಸಾವಿರ ರು. ಆದರೆ, ಖರ್ಚು ಕಳೆದು ಲಾಭ ಗಳಿಸಿದ್ದು 2.20 ಲಕ್ಷ ರು.ಗಳು!
ಸಾವಯವ ಪದ್ದತಿ:
ರೈತರಾದ ಮೃತ್ಯುಂಜಯಪ್ಪ, ಲೋಕೇಶಪ್ಪ ಸಹೋದರರೇ ಈ ಯಶೋಗಾಥೆ ಸಾಧಿಸಿದವರು. ತಮ್ಮ ಜಮೀನಿನಲ್ಲಿ ಮ್ಯಾಕ್ಸ್ ತಳಿಯ ಕಲ್ಲಂಗಡಿಯನ್ನು ಎರಡು ತಿಂಗಳ ಹಿಂದೆ ನಾಟಿ ಮಾಡಿದ್ದರು. ಉನ್ನತವಾದ ಹೊಸ ತಾಂತ್ರಿಕತೆಗಳಾದ ಪ್ಲಾಸ್ಟಿಕ್ ಹೊದಿಕೆ, ಎಷ್ಟುಅಗತ್ಯವೋ ಅಷ್ಟುಗೊಬ್ಬರವನ್ನು ಹನಿ ನೀರಾವರಿ ಮೂಲಕ ಕೊಡುವ ರಸಾವರಿ ಪದ್ಧತಿಗಳನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡಿದ್ದಾರೆ. ಈ ರೈತರು ಸಾವಯವ ಔಷಧ ಹಾಗೂ ಗೊಬ್ಬರಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸಿ ಲಾಕ್‌ಡೌನ್ ಸಂದರ್ಭದಲ್ಲೂ ಬಂಪರ್ ಬೆಳೆಯನ್ನು ಪಡೆದಿದ್ದಾರೆ ಮತ್ತು ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯನ್ನು ಪಡೆದಿದ್ದಾರೆ.
43 ಟನ್ ಕಲ್ಲಂಗಡಿ ಬೆಳೆ:
ನಮ್ಮ ಎರಡು ಎಕರೆ ಪ್ರದೇಶದಲ್ಲಿ ನಾವು ಕಲ್ಲಂಗಡಿ ಬೆಳೆ ಬೆಳೆದಿದ್ದೇವೆ. ಸಾವಯವ ಪದ್ಧತಿಯಲ್ಲಿ ಕಲ್ಲಂಗಡಿ ಬೆಳೆ ಬೆಳೆಯಲು ನಾವು ಖರ್ಚು ಮಾಡಿರುವುದು ಕೇವಲ 60 ಸಾವಿರ. ಆದರೆ, ಗಳಿಸಿರುವ ಆದಾಯ 2.20 ಲಕ್ಷ ರು.ಗಳು, 43 ಟನ್ ಕಲ್ಲಂಗಡಿ ಬೆಳೆ ಬೆಳೆದಿದ್ದು, 8 ರು.ಗೆ ಕೆ.ಜಿ.ಯಂತೆ ಈಗಾಗಲೇ ಮಾರಾಟವಾಗಿದೆ ಎಂದು ಈ ರೈತರು ತಿಳಿಸಿದ್ದಾರೆ.
ಥೈವಾನ್ ರೆಡ್ ಲೇಡಿ ಪಪ್ಪಾಯಿ ಕೇಳೋರಿಲ್ಲ, 30 ಟನ್ ಫಸಲು ನಷ್ಟ
ನಮ್ಮ ಮಕ್ಕಳಾದ ಶಿವು ಮತ್ತು ಶಂಕರ್ ಇಬ್ಬರೂ ಸಾಫ್ಟ್‌ವೇರ್ ಎಂಜಿನಿಯರ್‌ಗಳು. ರಜೆ ಸಮಯದಲ್ಲಿ ಊರಿಗೆ ಬಂದಾಗಲೆಲ್ಲಾ ನಮ್ಮ ಜೊತೆಗೂಡಿ ಜಮೀನಿನಲ್ಲೂ ಅಪ್ಪಟ ಕೃಷಿಕರಂತೆ ವ್ಯವಸಾಯ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಈಗ ಲಾಕ್‌ಡೌನ್ ಹಿನ್ನೆಲೆಯಲ್ಲಿ ಇಬ್ಬರೂ ವರ್ಕ್ ಫ್ರಮ್ ಹೋಂ ನಿರ್ವಹಿಸುತ್ತಿದ್ದು, ಜೊತೆಗೆ ಕೃಷಿಯನ್ನೂ ಮಾಡುತ್ತಿದ್ದಾರೆ ಎಂದು ತಮ್ಮ ಮಕ್ಕಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ತಾಂತ್ರಿಕತೆ, ಪರಿಶ್ರಮ ಮುಖ್ಯ
ಬಗ್ಗವಳ್ಳಿ ಗ್ರಾಪಂ ಉಪಾಧ್ಯಕ್ಷ ಸಿ.ಎಸ್.ಸಿದ್ದೇಗೌಡ ಚೆನ್ನಾಪುರ ಅವರು ಸಾವಯವ ಕೃಷಿ ಬಗ್ಗೆ ನಮಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಾರೆ. ತಾಂತ್ರಿಕತೆ ಹಾಗೂ ಪರಿಶ್ರಮ ಎರಡನ್ನೂ ಅಳವಡಿಸಿದರೆ ಕೃಷಿಯಲ್ಲಿ ಲಾಭ ನಿಶ್ಚಿತ ಎಂದು ಕಲ್ಲಂಗಡಿ ಬೆಳೆ ರೈತರಾದ ಮೃತ್ಯುಂಜಯಪ್ಪ ಮತ್ತು ಲೋಕೇಶ್ವರಪ್ಪ ತಿಳಿಸಿದ್ದಾರೆ.
ಕೇರಳ ಸರ್ಕಾರದ ನಡೆ ಉಳಿದ ರಾಜ್ಯ ಸರ್ಕಾರಗಳಿಗೆ ಆಗಲಿ ಮಾದರಿ
ಕಲ್ಲಂಗಡಿ ಬೆಳೆ ಪ್ರತಿ ಕಾಯಿಯು 2 ರಿಂದ 3 ಕೆ.ಜಿ.ಮಾತ್ರ ಇಳುವರಿ ಕೊಡುತ್ತದೆ. ಆದರೆ, ಬಗ್ಗವಳ್ಳಿ ರೈತರಾದ ಮೃತ್ಯುಂಜಯಪ್ಪ ಲೋಕೇಶಪ್ಪ ಅವರು ಸಾವಯವ ಕೃಷಿಯಲ್ಲಿ ಶ್ರಮಪಟ್ಟು ಹೆಚ್ಚು ನಿಗಾ ವಹಿಸಿ ಕಾಲ ಕಾಲಕ್ಕೆ ಅಗತ್ಯವಾದಷ್ಟುಮಾತ್ರ ನೀರು, ಗೊಬ್ಬರ ಒದಗಿಸಿ ಬೆಳೆ ಆರೈಕೆ ಮಾಡಿದ್ದರಿಂದ, ನಾಲ್ಕುವರೆಯಿಂದ ಐದು ಕೆ.ಜಿ ತೂಗುವ ಗುಣಮಟ್ಟದ ಕಲ್ಲಂಗಡಿ ಬೆಳೆದಿದ್ದಾರೆ. ಪ್ಲಾಸ್ಟಿಕ್ ಹೊದಿಕೆಗೆ ಇಲಾಖೆಯಿಂದ ಈ ರೈತರು ಸಹಾಯಧನ ಪಡೆದಿದ್ದಾರೆ. ಸಾವಯವ ಕೃಷಿಯಲ್ಲಿ ಈ ರೀತಿ ಹೆಚ್ಚು ಇಳುವರಿ ಪಡೆಯುವ ಮೂಲಕ ಉಳಿದ ರೈತರಿಗೆ ಮಾದರಿಯಾಗಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಯತಿರಾಜ್ ತಿಳಿಸಿದ್ದಾರೆ.
-ಅನಂತ ನಾಡಿಗ್