Asianet Suvarna News Asianet Suvarna News

Uttara Kannadaದಲ್ಲಿ ನಿಲ್ಲದ ಮಳೆಯ ಅಬ್ಬರ

ಐದು ದಿನಗಳ ಕಾಲ ರೆಡ್ ಹಾಗೂ ಆರೆಂಜ್ ಅಲರ್ಟ್ ಘೋಷಿಸಿದ್ದ ಬೆನ್ನಲ್ಲೇ  ಉತ್ತರಕನ್ನಡದಲ್ಲಿ ವರುಣಾರ್ಭಟ ಜೋರಾಗಿದೆ.

Heavy rain in  Uttara Kannada gow
Author
Bengaluru, First Published Jun 22, 2022, 12:40 AM IST

ಭರತ್‌ರಾಜ್ ಕಲ್ಲಡ್ಕ , ಏಷ್ಯಾನೆಟ್ ಸುವರ್ಣನ್ಯೂಸ್

ಉತ್ತರಕನ್ನಡ (ಜೂನ್ 22 ):  ಕರಾವಳಿ ಜಿಲ್ಲೆ ಉತ್ತರಕನ್ನಡದಲ್ಲಿ ವರುಣಾರ್ಭಟ ಜೋರಾಗಿದೆ. ಐದು ದಿನಗಳ ಕಾಲ ರೆಡ್ ಹಾಗೂ ಆರೆಂಜ್ ಅಲರ್ಟ್ ಘೋಷಿಸಿದ್ದ ಬೆನ್ನಲ್ಲೇ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿದಿದ್ದು ಸಾಕಷ್ಟು ಅವಾಂತರಗಳನ್ನೇ ಸೃಷ್ಟಿಸಿದೆ. ಕಾರವಾರ ನಗರದಲ್ಲಿ ಮಳೆಯ ಅಬ್ಬರಕ್ಕೆ ಹಲವೆಡೆ ನೀರು ನಿಂತು ಕೆರೆಯಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾಷ್ಟ್ರೀಯ ಹೆದ್ದಾರಿ ಪಕ್ಕದ ಜನವಸತಿ ಪ್ರದೇಶಗಳು ಸಹ ಜಲಾವೃತಗೊಂಡು ಜನರು ಪರದಾಡಬೇಕಾದ ಸ್ಥಿತಿ ಎದುರಾಗಿತ್ತು. 

ಒಂದೆಡೆ ರಸ್ತೆಯಲ್ಲಿ ನೀರು ನಿಂತ ಪರಿಣಾಮ ಪರದಾಡುತ್ತಿರುವ ವಾಹನ ಸವಾರರು. ಇನ್ನೊಂದೆಡೆ ಏರಿಯಾದೆಲ್ಲೆಡೆ ನೀರು ನಿಂತ ಪರಿಣಾಮ ರಸ್ತೆ ಯಾವುದು, ಗುಂಡಿ ಯಾವುದು ತಿಳಿಯದೇ ಓಡಾಡೋಕ್ಕೆ ಹರಸಾಹಸ ಪಡುತ್ತಿರುವ ಪಾದಾಚಾರಿಗಳು. ಮತ್ತೊಂದೆಡೆ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ನೀರು ನುಗ್ಗಿದ ಪರಿಣಾಮ ಜಲಾವೃತವಾಗಿರುವ ಜನವಸತಿ ಪ್ರದೇಶ. ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಉತ್ತರಕನ್ನಡ ಜಿಲ್ಲೆಯ ಕೆಲವೆಡೆ ಕೆಲವೇ ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಯಿಂದ. ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಬಿಟ್ಟೂ ಬಿಡದೇ ಸುರಿದ ಮಳೆಯಿಂದ ಜನರು ಹೈರಾಣಾಗಿ ಹೋಗಿದ್ದರು.

YOGA HALL IN CHICKPET ಪಾಳು ಬಿದ್ದ ಜಾಗದಲ್ಲಿ ಯೋಗ ಸೆಂಟರ್ ನಿರ್ಮಾಣ

ಕಾರವಾರದ ಹಬ್ಬುವಾಡ, ಸೋನಾರವಾಡ, ಹೈಚರ್ಚ್ ರಸ್ತೆ, ಆಮದಳ್ಳಿ, ಚೆಂಡಿಯಾ, ಅರಗಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆಯ ನೀರು ಹರಿದುಬಂದಿದ್ದು, ರಸ್ತೆಗಳೆಲ್ಲಾ ಜಲಾವೃತಗೊಂಡಿದ್ದವು. ಮಳೆಯ ನೀರು ಕಾಲುವೆಗಳಲ್ಲಿ ಸರಾಗವಾಗಿ ಹರಿದುಹೋಗಲು ಸಾಧ್ಯವಾಗದ ಹಿನ್ನೆಲೆ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹವಾಗಿದ್ದು, ರಸ್ತೆಗಳಲ್ಲಿ ಸಂಚರಿಸಲು ವಾಹನ ಸವಾರರು ಪರದಾಡುವಂತಾಯಿತು.

ಕೆಲವೆಡೆ ರಸ್ತೆಗಳಲ್ಲಿ ಮೊಣಕಾಲಿನ ವರೆಗೆ ನೀರು ನಿಂತಿದ್ದು ರಸ್ತೆ, ಗುಂಡಿಗೆ ವ್ಯತ್ಯಾಸ ಇಲ್ಲದಂತಾಗಿ ಪಾದಚಾರಿಗಳು ಓಡಾಡಲು ಹರಸಾಹಸ ಪಡುವಂತಾಗಿತ್ತು. ಮಳೆಗಾಲಕ್ಕೆ ಮುನ್ನ ನಗರಸಭೆ ವತಿಯಿಂದ ಮಳೆ ನೀರಿನ ಕಾಲುವೆಗಳನ್ನು ಸ್ವಚ್ಛಗೊಳಿಸದ್ದರಿಂದಲೇ ಈ ಪರಿಸ್ಥಿತಿ ನಿರ್ಮಾಣವಾಗುವಂತಾಗಿದ್ದು, ಜನಸಾಮಾನ್ಯರು ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕಿದ್ದಾರೆ.

ಶತಶೃಂಗ ಪರ್ವತದಲ್ಲಿ ಯೋಗ ಮಾಡಿ ದಾಖಲೆ ಸೃಷ್ಠಿಸಿದ ಕೋಲಾರ

ಇನ್ನು ಜಿಲ್ಲೆಯಲ್ಲಿ ಜೂನ್ 21 ರಿಂದ 25ರ ವರೆಗೆ ಭಾರೀ ಮಳೆ ಸುರಿಯುವ ಮುನ್ಸೂಚನೆ ನೀಡಿದ್ದ ಹವಾಮಾನ ಇಲಾಖೆ ರೆಡ್ ಹಾಗೂ ಆರೆಂಜ್ ಅಲರ್ಟ್ ಘೋಷಿಸಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಕರಾವಳಿಯಲ್ಲಿ ಅತೀ ಹೆಚ್ಚು ಮಳೆಯಾಗಿದ್ದು ಕಾರವಾರದಲ್ಲಿ 32.5 ಮಿಮೀ, ಅಂಕೋಲಾ 42.9 ಮಿಮೀ, ಕುಮಟಾ 35.3 ಮಿಮೀ, ಹೊನ್ನಾವರ 38.2 ಮಿಮೀ ಹಾಗೂ ಭಟ್ಕಳದಲ್ಲಿ 41.7 ಮಿಮೀ ಮಳೆ ಸುರಿದಿದೆ. ನಿನ್ನೆ ತಡರಾತ್ರಿಯಿಂದಲೇ ಮಳೆಯ ಅಬ್ಬರ ಜೋರಾಗಿದ್ದು ಸತತವಾಗಿ ಸುರಿದ ಮಳೆಯಿಂದಾಗಿ ಕಾರವಾರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಅರಗಾ, ಚೆಂಡಿಯಾ ಗ್ರಾಮಗಳಲ್ಲಿ ಜನವಸತಿ ಪ್ರದೇಶಗಳಿಗೆ ನೀರು ನುಗ್ಗುವಂತಾಗಿತ್ತು.

ತಗ್ಗು ಪ್ರದೇಶದ ಹಲವಾರು ಮನೆಗಳಿಗೆ ನೀರು ನುಗ್ಗಿದ್ದು ಅಲ್ಲಿನ ನಿವಾಸಿಗಳು ತಮ್ಮ ವಸ್ತುಗಳನ್ನ ಸುರಕ್ಷಿತವಾಗಿ ಇಟ್ಟುಕೊಳ್ಳಲು ಪರದಾಡುವಂತಾಯಿತು. ಹೆದ್ದಾರಿ ಅಗಲೀಕರಣ ಕಾರ್ಯ ಕೈಗೊಂಡಿರುವ ಐಆರ್‌ಬಿ ನಿರ್ಲಕ್ಷ್ಯದಿಂದಾಗಿ ಮಳೆಯ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲವಾಗಿದ್ದು, ಜತೆಗೆ ನೌಕಾನೆಲೆಯಿಂದಾಗಿ ನೀರು ಸಮುದ್ರ ಸೇರಲು ಅಡ್ಡಿಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಒಂದು ದಿನ ಸುರಿದ ಮಳೆಯೇ ಇಷ್ಟೆಲ್ಲಾ ಅವಾಂತರಗಳನ್ನ ಸೃಷ್ಟಿಸಿದ್ದು, ಜನರು ಪರದಾಡುವಂತಾಗಿದೆ. ಇನ್ನೂ ನಾಲ್ಕೈದು ದಿನಗಳು ಭಾರೀ ಮಳೆ ಸುರಿಯುವ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದ್ದು, ಇದು ತಗ್ಗು ಪ್ರದೇಶದ ನಿವಾಸಿಗಳ ಆತಂಕಕ್ಕೆ ಕಾರಣವಾಗಿರೋದಂತೂ ಸತ್ಯ.

Follow Us:
Download App:
  • android
  • ios