ಕೊಪ್ಪಳ ಜಿಲ್ಲೆಯಲ್ಲಿ ವರುಣನ ಆರ್ಭಟ: ಒಂದೇ ದಿನ ದಾಖಲೆಯ ಮಳೆ
ಜಿಲ್ಲೆಯಲ್ಲಿ ಒಂದೇ ದಿನ 48.5 ಮಿಲಿಮೀಟರ್ ಮಳೆ | ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು | ಬರದ ಬವಣೆಯಿಂದ ಬಳಲಿದ್ದ ರೈತರ ಮೊಗದಲ್ಲಿ ಮಂದಹಾಸ | ನೀರಿನ ರಭಸಕ್ಕೆ ಕಿತ್ತು ಹೋಗಿರುವ ಹೊಲ-ಗದ್ದೆಗಳ ಒಡ್ಡು| ಕೊಪ್ಪಳ ನಗರದಲ್ಲಿ ನುಗ್ಗಿದ ನೀರು| ರಾತ್ರಿ ನೀರು ಏಕಾಏಕಿ ನುಗ್ಗಿ ಬಂದಿದ್ದರಿಂದ ಜನರು ಗಾಬರಿಯಿಂದ ಮನೆಯಿಂದ ಹೊರಗೆ ಬಂದಿದ್ದಾರೆ| ಗಣೇಶ ನಗರ ಬಹುತೇಕ ಜಲಾವೃತವಾಗಿದೆ|
ಕೊಪ್ಪಳ(ಸೆ.27) ಬುಧವಾರ ತಡರಾತ್ರಿ ಸುರಿದ ಮಳೆ ಪ್ರಸಕ್ತ ವರ್ಷದಲ್ಲಿಯೇ ದಾಖಲೆ ಮಳೆಯಾಗಿದ್ದು, ಒಂದೇ ದಿನ ಬರೋಬ್ಬರಿ 48.5 ಮಿ.ಮೀ. ಮಳೆಯಾಗಿದೆ. ಇದರಿಂದ ಜಿಲ್ಲೆಯ ಕೆರೆಕಟ್ಟೆಗಳು, ಹಳ್ಳ ಕೊಳ್ಳಗಳು ತುಂಬಿ ಹರಿದಿವೆ. ಕಳೆದ ನಾಲ್ಕಾರು ವರ್ಷಗಳಲ್ಲಿಯೇ ಬಿದ್ದ ಭಾರಿ ಮಳೆ ಇದಾಗಿದೆ. ಯಾವುದೇ ಹಾನಿಯಾಗಿಲ್ಲವಾದರೂ ಮಳೆ ಸಾಕಷ್ಟು ಪ್ರಮಾಣದಲ್ಲಿ ಬಿದ್ದಿದೆ. ಹೀಗಾಗಿ ನಗರದ ತಗ್ಗು ಪ್ರದೇಶಗಲ್ಲಿ ನೀರು ನುಗ್ಗಿ, ಜನಜೀವನ ಅಸ್ತವ್ಯಸ್ತಗೊಂಡಿದೆ.
ಜಿಲ್ಲೆಯ ಕುಷ್ಟಗಿಯಲ್ಲಿಯೇ ದಾಖಲೆ ಮಳೆಯಾದ ವರದಿಯಾಗಿದ್ದು, ಇಲ್ಲಿ 24 ಗಂಟೆಯಲ್ಲಿ ಬರೋಬ್ಬರಿ 48.5 ಮಿಲಿಮೀಟರ್ ಮಳೆಯಾಗಿದೆ. ಉಳಿದಂತೆ ಜಿಲ್ಲೆಯ ವಿವಿಧೆಡೆಯೂ 45 ಮಿಮೀ ಆಸುಪಾಸು ಮಳೆಯಾಗಿದೆ.
ತುಂಬಿದ ಕೆರೆಕಟ್ಟೆಗಳು:
ತಾವರಗೇರಾ, ತಲ್ಲೂರು ಕೆರೆಗಳಿಗೂ ಹೂಳು ತೆಗೆದ ಮೇಲೆ ನೀರು ಬಂದಿದ್ದರಿಂದ ಜೀವ ಕಳೆ ಬಂದಿವೆ. ಇನ್ನು ಜಿಲ್ಲೆಯ ಬಹುತೇಕ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಸುಮಾರು 4 ವರ್ಷಗಳಿಂದ ಸತತ ಬರಗಾಲ ಇದ್ದಿದ್ದರಿಂದ ಕೆರೆಕಟ್ಟೆಗಳು ತುಂಬಿದ್ದನ್ನೇ ನೋಡಿರಲಿಲ್ಲ. ಈ ವರ್ಷದಲ್ಲಿ ಈಗ ದೊಡ್ಡ ಮಳೆಯಾಗಿದ್ದು, ಅಂತು ಇಂತು ಮಳೆರಾಯ ಕೊನೆಗೂ ಕೈ ಹಿಡಿದ.
ಕೊಪ್ಪಳ ನಗರಕ್ಕೆ ನುಗ್ಗಿದ ನೀರು:
ಜಿಲ್ಲಾ ಕೇಂದ್ರ ಕೊಪ್ಪಳ ನಗರದ ಹಲವೆಡೆ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಕುವೆಂಪುನಗರ ಮತ್ತು ಗಣೇಶ ನಗರ ಜಲಾವೃತವಾಗಿದ್ದರಿಂದ ರಾತ್ರಿ ಪೂರ್ತಿ ಜನರು ಜಾಗರಣೆ ಮಾಡುವಂತಾಯಿತು. ಕುವೆಂಪು ನಗರದಲ್ಲಿ ನುಗ್ಗಿದ ನೀರು ಹೋಗುವುದಕ್ಕೆ ದಾರಿಯೇ ಇಲ್ಲದಂತೆ ಇರುವುದರಿಂದ ಮನೆಗಳಲ್ಲಿಯೂ ನೀರು ನುಗ್ಗಿತ್ತು. ರಾತ್ರಿಪೂರ್ತಿ ಜನರು ಮನೆಯ ನೀರನ್ನು ಹೊರಹಾಕಿದ ಪ್ರಸಂಗ ಎದುರಾಯಿತು.
ಗಣೇಶ ನಗರಕ್ಕೆ ನುಗ್ಗಿದ ನೀರು:
ಭಾಗ್ಯನಗರಕ್ಕೆ ಹೊಂದಿಕೊಂಡಿರುವ ಗಣೇಶ ನಗರದ ರಾಜಕಾಲುವೆ ಒತ್ತುವರಿಯಾಗಿದೆ. ಹೀಗಾಗಿ, ನೀರು ಹೋಗುವುದಕ್ಕೆ ದಾರಿಯೇ ಇಲ್ಲದಂತಾಗಿದೆ. ರಾಜಕಾಲುವೆ ನಿರ್ಮಾಣ ಅರ್ಧಕ್ಕೆ ನಿಂತಿರುವುದರಿಂದ ಮತ್ತು ಒತ್ತುವರಿಯಾಗಿರುವುದರಿಂದ ತೀವ್ರ ಸಮಸ್ಯೆಯಾಗಿದ್ದು, ನೀರು ಗಣೇಶ ನಗರಕ್ಕೆ ನುಗ್ಗಿ, ಅಪಾರ ಆಸ್ತಿಪಾಸ್ತಿ ಹಾನಿಯಾಗಿದೆ. ನೀರು ಸರಾಗವಾಗಿ ಹೋಗುವುದಕ್ಕೆ ದಾರಿ ಇಲ್ಲದಿರುವುದರಿಂದ ತೀವ್ರ ಸಮಸ್ಯೆಯಾಗಿದ್ದು, ಗಣೇಶ ನಗರ ಬಹುತೇಕ ಜಲಾವೃತವಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ರಾತ್ರಿ ನೀರು ಏಕಾಏಕಿ ನುಗ್ಗಿ ಬಂದಿದ್ದರಿಂದ ಜನರು ಗಾಬರಿಯಿಂದ ಹೊರಗೆ ಬಂದಿದ್ದಾರೆ. ಕೊನೆಗೆ ನೀರು ತಗ್ಗಿದ ಮೇಲೆಯೇ ಮನೆಯ ಒಳಗೆ ಹೋಗಿದ್ದಾರೆ. ಕೇಂದ್ರೀಯ ಬಸ್ ನಿಲ್ದಾಣ ಬಳಿಯೂ ರಾಜಕಾಲುವೆ ಒತ್ತುವರಿಯಾಗಿರುವುದರಿಂದ ನೀರು ರಸ್ತೆಗಳಿಗೆ ನುಗ್ಗಿದ್ದರಿಂದ ಸಂಚಾರಕ್ಕೆ ಸಮಸ್ಯೆಯಾಗಿತ್ತು. ರೈಲ್ವೆ ನಿಲ್ದಾಣದ ರಸ್ತೆ ಸೇರಿದಂತೆ ಅನೇಕ ರಸ್ತೆಗಳ ತುಂಬ ನೀರು ತುಂಬಿಕೊಂಡಿದ್ದರಿಂದ ತೀವ್ರ ಸಮಸ್ಯೆಯಾಯಿತು.
ರಾತ್ರಿಪೂರ್ತಿ ಮಳೆ:
ಬುಧವಾರ ರಾತ್ರಿ 9.30ಕ್ಕೆ ಪ್ರಾರಂಭವಾದ ಮಳೆ ರಾತ್ರಿಪೂರ್ತಿ ಸುರಿಯುತ್ತಿತ್ತು. ಅದರಲ್ಲೂ ಪ್ರಾರಂಭವಾಗಿ 2-3 ಗಂಟೆಗಳ ಕಾಲ ಭಾರಿ ಸುರಿಯಿತು. ಎಲ್ಲಿ ನೋಡಿದರೂ ನೀರೋ ನೀರು ಎನ್ನುವಂತೆ ಆಗಿತ್ತು. ರಾತ್ರಿ ಮಳೆ ಅಬ್ಬರಿಸಿದ್ದರಿಂದ ಮಧ್ಯರಾತ್ರಿ 1 ಗಂಟೆಗೆ ಅನೇಕರು ಮನೆಯ ಆಚೆ ಬಂದು, ನೀರು ತುಂಬಿ ಹರಿಯುತ್ತಿರುವುದನ್ನು ನೋಡುತ್ತಿರುವುದು ಕಂಡುಬಂದಿತು.