ಬೆಂಗಳೂರು/ಮಂಗಳೂರು/ಕಾರವಾರ/ಬೆಳಗಾವಿ[ಆ. 07] ಭಾರೀ ಮಳೆ ಸುರಿಯುತ್ತಿದ್ದು ಹವಾಮಾನ ಇಲಾಖೆ ಮುನ್ನಚ್ಚರಿಕೆ ಕ್ರಮಗಳನ್ನು ತಿಳಿಸಿದೆ. ಮುಂಜಾಗೃತಾ ಕ್ರಮವಾಗಿ ಯಾವ ಯಾವ ಜಿಲ್ಲೆಗಳ ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಇಲ್ಲಿದೆ ವಿವರ. 

ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡ, ದಕ್ಷಣಕನ್ನಡ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡ,  ಮಲೆನಾಡಿನಲ್ಲಿ ಕಳೆದ 15 ದಿನಗಳಿಂದ ಅಬ್ಬರಿಸುತ್ತಿರುವ ಮಳೆ ಸಾವು-ನೋವಿನ ದರ್ಶನ ಮಾಡಿಸಿದೆ. ನಿರಂತರ ಮಳೆಗೆ ಬದುಕು ಕೊಚ್ಚಿಹೋಗಿದ್ದು ಎಲ್ಲಿ ನೋಡಿದರೂ ನೀರೇ ನೀರು.

ರಕ್ಷಣೆಗಾಗಿ 24 ಗಂಟೆ ಮನೆ ಮೇಲೆ ಕಾದು ಕುಳಿತ ದಂಪತಿ!

ಮಹಾಮಳೆಗೆ ಮಲೆನಾಡು ಜನರ ಬದುಕು ಕೊಚ್ಚಿ ಹೋಗಿದೆ. ಹಾಸನದಲ್ಲಿ ಹೇಮಾವತಿ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಹೊಳೆ ಮಲ್ಲೇಶ್ವರ ದೇಗುಲ ಜಲಾವೃತಗೊಂಡಿದೆ. ಬೇಲೂರಿನ ಅಗಸರಹಳ್ಳಿ ಸೇತುವೆ ಜಲಾವೃತಗೊಂಡಿದ್ದು, ಸಂಪರ್ಕ ಕಡಿತಗೊಂಡಿದೆ.

ಇನ್ನು ಶಿವಮೊಗ್ಗದಲ್ಲಿ ಪ್ರವಾಹದ ಹೊಡೆತಕ್ಕೆ ತುಂಗಾನದಿಯಲ್ಲಿ ಮಹಿಳೆಯೊಬ್ಬಳು ಕೊಚ್ಚಿ ಹೋಗಿದ್ದಾಳೆ. ಶಿವಮೊಗ್ಗದ ತಹಸೀಲ್ದಾರ್ ಕಚೇರಿ ಬಳಿ ಭಾರೀ ಗಾಳಿ ಮಳೆಗೆ ನೋಡನೋಡುತ್ತಿದ್ದಂತೆ ಮರ ಧರೆಗುರುಳಿದ್ದು ಕ್ಷಣಾರ್ಧದಲ್ಲಿ ಅನಾಹುತ ತಪ್ಪಿದೆ. ಸಾಗರದ ಕೌಂತೀ ಗ್ರಾಮ, ಬಸವೇಶ್ವರ ದೇವಸ್ಥಾನ ಜಲಾವೃತಗೊಂಡಿದೆ.

ಚಿಕ್ಕಮಗಳೂರಿನ ಎನ್.ಆರ್.ಪುರದಲ್ಲಿ ವಿದ್ಯುತ್ ತಂತಿ ತಗುಲಿ ಕೂಲಿ ಕಾರ್ಮಿಕ ಮೃತಪಟ್ಟಿದ್ದಾನೆ. ಮೂಡಿಗೆರೆ ತಾಲೂಕಿನ ಹಂತೂರು ಗ್ರಾಮದಲ್ಲಿ ನೆರೆಯಲ್ಲಿ ಸಿಲುಕಿದ್ದ 9 ಜನರನ್ನು ರಕ್ಷಣೆ ಮಾಡಲಾಗಿದೆ.  ಬಣಕಲ್ ಪ್ರಾಥಮಿಕ ಶಾಲಾ ಕಾಂಪೌಂಡ್ ಕುಸಿಯುವ ದೃಶ್ಯವಂತೂ ಬೆಚ್ಚಿಬೀಳಿಸುವಂತಿದೆ.

ಇತ್ತ ಕರಾವಳಿಯಲ್ಲಿ ಸಮುದ್ರದ ರಕ್ಕ ಅಲೆಗಳ ಹೊಡೆತಕ್ಕೆ ಸಮುದ್ರ ತೀರದ ಜನ ನಲುಗಿ ಹೋಗಿದ್ದಾರೆ. ಸೋಮೇಶ್ವರ, ಉಚ್ಚಿಲ ಪ್ರದೇಶದಲ್ಲಿ ಕಡಲ್ಕೊರೆತ ಹೆಚ್ಚಾಗಿದೆ. ಜಿಲ್ಲಾದ್ಯಾಂತ 2 ದಿನ ರೆಡ್ ಅಲರ್ಟ್ ಘೋಷಣೆ  ಮಾಡಲಾಗಿದೆ. ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದಲ್ಲಿ ನೇತ್ರಾವತಿ ಉಕ್ಕಿ ಹರಿಯುತ್ತಿದ್ದು ಭೀತಿ ಎದುರಾಗಿದೆ.

ಭಾರೀ ಮಳೆಯಿಂದ ಚಾರ್ಮಾಡಿ ಘಾಟ್ ನಲ್ಲಿ ‌ಗುಡ್ಡ ಕುಸಿತ ಉಂಟಾಗಿದ್ದು ನಾಳೆ ರಾತ್ರಿ 12 ಗಂಟೆವರೆಗೆ ಸಂಚಾರ ನಿಷೇಧಿಸಿಲಗಾಗಿದೆ, ಶಿರಾಡಿ ಘಾಟ್ ಹೆದ್ದಾರಿಯಲ್ಲೂ ಮರಗಳು ಧರೆಗುರುಳಿವೆ..ಉತ್ತರ ಕನ್ನಡದಲ್ಲೂ ಮಳೆ ಆರ್ಭಟ ಜೋರಾಗಿದೆ. ಕಾರವಾರದ ಕದ್ರಾ ಡ್ಯಾಂನ 10 ಕ್ರಸ್ಟ್ ಗೇಟ್ ಓಪನ್​ ಮಾಡಲಾಗಿದ್ದು 100ಕ್ಕೂ ಹೆಚ್ಚು ಕುಟುಂಬಗಳನ್ನು ಶಿಫ್ಟ್ ಮಾಡಲಾಗಿದೆ. ಪ್ರವಾಸಕ್ಕೆ ಬಂದು ನೀರಿನಲ್ಲಿ ಸಿಲುಕಿದ್ದ ಮಹಿಳೆ ಸೇರಿ 6 ಜನರನ್ನು ರಕ್ಷಣೆ ಮಾಡಲಾಗಿದೆ.