ನಿತ್ಯವೂ ಮಧ್ಯಾಹ್ನದ ಬಳಿಕ ತಡರಾತ್ರಿ ವರೆಗೂ ಸುರಿಯುತ್ತಿರುವ ವರುಣ

ಬೆಂಗಳೂರು(ಆ.03): ಕಳೆದೊಂದು ವಾರದಿಂದ ನಗರದಲ್ಲಿ ರಾತ್ರಿ ವೇಳೆ ಮಳೆ ಸುರಿಯುತ್ತಿದ್ದು ಭಾರಿ ಅವಾಂತರ ಸೃಷ್ಟಿಸುತ್ತಿದೆ. ಮಂಗಳವಾರ ರಾತ್ರಿ 8.30ರ ಸುಮಾರಿಗೆ ಆರಂಭಗೊಂಡ ಮಳೆಯು ರಾತ್ರಿ ಬಹಳ ಹೊತ್ತಿನವರೆಗೂ ಮುಂದುವರೆದಿತ್ತು. ನಗರದ ಯಶವಂತಪುರ, ಶಿವಾನಂದವೃತ್ತ, ಮಹಾಲಕ್ಷ್ಮಿ ಲೇಔಟ್‌, ರಾಜಾಜಿ ನಗರ, ಶ್ರೀರಾಂಪುರ, ಗೊರಗುಂಟೆಪಾಳ್ಯ, ಪೀಣ್ಯ, ಯಲಹಂಕ, ಮಾಗಡಿ ರಸ್ತೆ, ಜಯನಗರ, ಶಿವಾಜಿನಗರ, ಕೆಂಗೇರಿ, ಹೆಬ್ಬಾಳ, ಬನಶಂಕರಿ, ಮೆಜೆಸ್ಟಿಕ್‌ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಭಾರಿ ಮಳೆ ಸುರಿಯಿತು.

ನಗರದಲ್ಲಿ ಮಂಗಳವಾರ ರಾತ್ರಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶಗಳಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು ಅವಾಂತರ ಸೃಷ್ಟಿಸಿತ್ತು. ಬೆಳಗ್ಗಿನಿಂದಲೇ ನಗರದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿತ್ತು. ಕೆಲವೆಡೆ ಸೂರ್ಯನ ಉರಿ ಬಿಸಿಲು ಕೂಡ ಇತ್ತಾದರೂ ಮಧ್ಯಾಹ್ನದ ಬಳಿಕ ದಟ್ಟಮೋಡ ಆವರಿಸಿತು. ಸಂಜೆ ಹೊತ್ತು ಮಳೆ ಸುರಿದಿದ್ದರಿಂದ ವಾಹನ ಸವಾರರು, ಬೀದಿಬದಿ ವ್ಯಾಪಾರಿಗಳು, ಪಾದಚಾರಿಗಳು ತೊಂದರೆ ಅನುಭವಿಸಬೇಕಾಯಿತು. ತಗ್ಗು ರಸ್ತೆಗಳು, ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು.

ಕರ್ನಾಟಕದಲ್ಲಿ ಮಳೆಯಬ್ಬರಕ್ಕೆ 11 ಬಲಿ: ಕೆಲವು ದಿನಗಳ ಬಿಡುವು ಬಳಿಕ ವರುಣನ ಆರ್ಭಟ

ಮನೆಗಳಿಗೆ ನುಗ್ಗಿದ ನೀರು

ಜಯನಗರ 4ನೇ ಡಿ ಬ್ಲಾಕ್‌, ಜೀವನ್‌ಭೀಮಾ ನಗರ ಸಂಚಾರಿ ಪೊಲೀಸ್‌ ಠಾಣೆ ಸಮೀಪ ತಲಾ ಒಂದು ಮರಗಳು ಧರೆಗುರುಳಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಬಿಬಿಎಂಪಿ ಸಿಬ್ಬಂದಿ ಮರ ತೆರವುಗೊಳಿಸಿದರು. ಮಳೆಯಿಂದಾಗಿ ಹೆಬ್ಬಾಳದ ಕೆಂಪಾಪುರದಲ್ಲಿ ರಾಜಕಾಲುವೆ ತುಂಬಿ ಹರಿದು ರಸ್ತೆಗೆ ನೀರು ನುಗ್ಗಿ ವಾಹನ ಸಂಚಾರಕ್ಕೆ ಅಡ್ಡಿಯುಂಟು ಮಾಡಿತ್ತು. ಎಚ್‌ಬಿಆರ್‌ ಲೇಔಟ್‌ 15ನೇ ಕ್ರಾಸ್‌ನಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದ್ದು, ಕುಟುಂಬದ ಜನರು ನೀರು ಹೊರ ಹಾಕಲು ಹರಸಾಹಸ ಪಟ್ಟರು.

ಬೊಮ್ಮನಹಳ್ಳಿಯ ಅನುಗ್ರಹ ಲೇಔಟ್‌ನಲ್ಲಿ ರಾಜಕಾಲುವೆ, ಚರಂಡಿಗಳು ಉಕ್ಕಿ ಹರಿದ ಪರಿಣಾಮ 10ಕ್ಕೂ ಹೆಚ್ಚು ಮನೆಗಳಿಗೆ ಕೊಳಚೆ ನೀರು ನುಗ್ಗಿತ್ತು. ಚೋಳನಾಯನಹಳ್ಳಿಯ ಸಿಐಎಲ್‌ ಲೇಔಟ್‌ನಲ್ಲಿಯೂ ನಾಲ್ಕೈದು ಮನೆಗಳಿಗೆ ನೀರು ಹರಿದಿದ್ದು ಗೃಹೋಪಯೋಗಿ ವಸ್ತುಗಳು ಹಾನಿಗೊಳಗಾದ ಘಟನೆ ನಡೆಯಿತು. ರಾಮಮೂರ್ತಿ ನಗರದ ತ್ರಿವೇಣಿ ರಸ್ತೆಯಲ್ಲೂ ಚರಂಡಿಗಳು ತುಂಬಿ ಹರಿದಿದ್ದ ಮೂರ್ನಾಲ್ಕು ಮನೆಗಳಿಗೆ ಮಳೆ ನೀರು ನುಗ್ಗಿದೆ. ಹಾಗೆಯೇ ಒಎಂಬಿಆರ್‌ ಲೇಔಟ್‌ನಲ್ಲಿ ಚರಂಡಿಗಳು ತುಂಬಿ ರಸ್ತೆಗಳಿಗೆ ನೀರು ಹರಿದು ಜನರ ಓಡಾಟಕ್ಕೆ ಅಡ್ಡಿಯುಂಟಾಗಿತ್ತು.

ವಿಜಯನಗರದ ಎಂಸಿ ಲೇಔಟ್‌ನಲ್ಲಿ ಮರವೊಂದು ಬಿದ್ದ ಪರಿಣಾಮ ಎರಡು ಕಾರುಗಳು ಸಂಪೂರ್ಣ ಜಖಂಗೊಂಡಿರುವ ಘಟನೆ ನಡೆದಿದೆ. ಜೊತೆಗೆ ಒಂದು ಬೈಕ್‌ ಮತ್ತು ಮನೆಯೊಂದರ ಗೋಡೆಗೆ ಹಾನಿಯುಂಟಾಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯವಾಗಿಲ್ಲ.

ಕರ್ನಾಟಕದಲ್ಲಿ ಇನ್ನೂ 4 ದಿನ ಭಾರೀ ಮಳೆ: ಆ.6ರವರೆಗೆ ರೆಡ್‌ ಅಲರ್ಟ್‌

ಆರ್‌ಆರ್‌ ನಗರದಲ್ಲಿ ಅತ್ಯಧಿಕ ಮಳೆ

ರಾತ್ರಿ 10ರ ಹೊತ್ತಿಗೆ ರಾಜರಾಜೇಶ್ವರಿ ನಗರ (1) 7.2 ಸೆಂ.ಮೀ, ವಿದ್ಯಾಪೀಠ 6.15, ರಾಜರಾಜೇಶ್ವರಿ ನಗರ (2), ವಿಶ್ವನಾಥನಾಗೇನಹಳ್ಳಿಯಲ್ಲಿ ತಲಾ 6.3, ಸಂಪಂಗಿರಾಮ ನಗರ 5.7, ರಾಜಮಹಲ್‌ ಗುಟ್ಟಹಳ್ಳಿ, ಬಾಣಸವಾಡಿ, ವನ್ನಾರ್‌ಪೇಟ್‌ 5.3, ದೊಡ್ಡನೆಕ್ಕುಂದಿ 5.2, ಉತ್ತರಹಳ್ಳಿ, ಕೆಂಗೇರಿ 4.5, ಕೋನೆನ ಅಗ್ರಹಾರ, ಎಚ್‌ಎಎಲ್‌ ವಿಮಾನ ನಿಲ್ದಾಣ 4.5, ಪುಲಕೇಶಿ ನಗರ, ದೊಮ್ಮಲೂರು, ಕೆಂಗೇರಿ (2) 4.2, ರಾಮಮೂರ್ತಿನಗರ 4.1, ನಾಗರಬಾವಿ, ಎಚ್‌ಎಂಟಿ ವಾರ್ಡ್‌ 4 ಸೆಂ.ಮೀ ಮಳೆಯಾಗಿದೆ.

ವಾರವಿಡೀ ಮಳೆ

ನಗರದಲ್ಲಿ ಬುಧವಾರ ಮತ್ತು ಗುರುವಾರವೂ ಗುಡುಗು ಸಹಿತ ಮಳೆ ಮುಂದುವರಿಯಲಿದೆ. ಶುಕ್ರವಾರ ಮತ್ತು ಶನಿವಾರ ಮಳೆ ಇನ್ನಷ್ಟುಬಿರುಸಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಚ್‌ ಪ್ರಕಟಿಸಲಾಗಿದೆ. ನಗರದ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 29 ಮತ್ತು 20 ಡಿಗ್ರಿ ಸೆಲ್ಸಿಯಸ್‌ ದಾಖಲಾಗುವ ಸಾಧ್ಯತೆಯಿದೆ. ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆ, ಛತ್ತೀಸ್‌ಗಢದಿಂದ ಕನ್ಯಾಕುಮಾರಿವರೆಗೆ ಹಬ್ಬಿರುವ ಟ್ರಫ್‌, ಆಂಧ್ರ ಪ್ರದೇಶದ ಕರಾವಳಿಯಲ್ಲಿರುವ ಮೇಲ್ಮೈ ಸುಳಿಗಾಳಿಯ ಪ್ರಭಾವ ಉದ್ಯಾನ ನಗರಿಯ ಹವಾಮಾನದ ಮೇಲಾಗಿದೆ.