ಮಡಿಕೇರಿ(ಜು.08): ಕೊಡ​ಗಿನ ಕಾವೇರಿ ಸನ್ನಿಧಿಯ ಸುತ್ತಮುತ್ತ ಪ್ರದೇಶದಲ್ಲಿ ಮಂಗಳವಾರ ಭಾರಿ ಮಳೆಯಾಗಿದ್ದು, ಒಂದು ಕಡೆಯಲ್ಲಿ ಭೂಕುಸಿತ ಉಂಟಾಗಿದ್ದರೆ, ಮತ್ತೊಂಡೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ತಲಕಾವೇರಿ ವ್ಯಾಪ್ತಿಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ತಲಕಾವೇರಿ-ಭಾಗಮಂಡಲ ರಸ್ತೆ ಕೋಳಿಕಾಡು ಎಂಬಲ್ಲಿ ಬರೆ ಕುಸಿದಿದ್ದು, ಚೇರಂಗಾಲ ರಸ್ತೆಗೆ ಅಡ್ಡಲಾಗಿ ಮಣ್ಣು ಬಿದ್ದಿದೆ. ಬೆಟ್ಟದ ಮೇಲಿಂದ ಝರಿಯಂತೆ ನೀರು ಹರಿದಿದ್ದು, ಬಂಡೆಕಲ್ಲು, ಮರಗಳು ರಸ್ತೆಗೆ ಬಂದಿದೆ. ಮಳೆ ಹೆಚ್ಚಾದರೆ ಮತ್ತಷ್ಟುಕುಸಿತ ಉಂಟಾಗುವ ಸಾಧ್ಯತೆಯಿದೆ.

ಕೊರೋನಾ ಕಾಟ: ಆಂಧ್ರ-ತೆಲಂಗಾಣ ಜನರ ಪ್ರವೇಶ ನಿರ್ಬಂಧ

ಬರೆ ಕುಸಿತದಿಂದ ಚೇರಂಗಾಲ-ತಲಕಾವೇರಿ, ಭಾಗಮಂಡಲ-ತಲಕಾವೇರಿ ಸಂಪರ್ಕ ಕಡಿತೊಂಡಿದೆ. ಎರಡು ವರ್ಷದ ಹಿಂದೆ ಇದೇ ಜಾಗದಲ್ಲಿ ಭೂಕುಸಿತ ಉಂಟಾಗಿ ಎರಡು ತಿಂಗಳು ರಸ್ತೆ ಸಂಪರ್ಕ ಬಂದ್‌ ಆಗಿತ್ತು.

ರಸ್ತೆ ಮೇಲೆ ನೀರು: ಭಾರಿ ಮಳೆಯಿಂದಾಗಿ ಭಾಗಮಂಡಲದ ನಾಪೋಕ್ಲು-ಅಯ್ಯಂಗೇರಿ ರಸ್ತೆಯ ಮೇಲೆ ನೀರು ಏರಿಕೆಯಾಗಿದೆ. ಮಂಗಳವಾರ ಸಂಜೆ 6 ಗಂಟೆ ವೇಳೆಗೆ 3 ಅಡಿಗಳಷ್ಟುನೀರು ಏರಿಕೆಯಾಗಿತ್ತು. ಇದರಿಂದಾಗಿ ವಾಹನ ಸಂಚಾರ ಬಂದ್‌ ಆಗಿದೆ. ಹೆಚ್ಚು ಮಳೆಯಾದರೆ ಪ್ರವಾಹ ಮುಂದುವರೆಯಲಿದೆ.

ಸತತ ಮಳೆಗೆ ಕೊಡಗಿನಲ್ಲಿ ಭೂಕುಸಿತ, ಮತ್ತೆ ಪ್ರವಾಹ ಭೀತಿ: ಇಲ್ಲಿವೆ ಫೋಟೋಸ್

ಕೊಡಗು ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿದೆ. ಮಂಗಳವಾರ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವು ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಮಳೆಯಿಂದಾಗಿ ಚಳಿಯೂ ಹೆಚ್ಚಾಗಿದೆ.

ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ದಿನವೂ ಉತ್ತಮ ಮಳೆಯಾಗುತ್ತಿದ್ದು, ಭಾಗಮಂಡಲದ ತ್ರಿವೇಣಿ ನೀರಿನ ಮಟ್ಟಏರಿಕೆಯಾಗಿದೆ. ಜಿಲ್ಲೆಯ ಹಲವು ಕಡೆ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೊಳೆ, ನದಿಗಳು ಉಕ್ಕಿ ಹರಿಯುತ್ತಿದ್ದು ಹಾರಂಗಿ ಹಾಗೂ ಚಿಕ್ಲಿಹೊಳೆ ಜಲಾಶಯದಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಹೀಗೆ ಮಳೆ ಸುರಿದರೆ ಇನ್ನು ಕೆಲವೇ ದಿನಗಳಲ್ಲಿ ಹಾರಂಗಿ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದೆ.

ಮಳೆ ಅಂಕಿ ಅಂಶ:

ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವ​ಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 38.16 ಮಿ.ಮೀ. ಕಳೆದ ವರ್ಷ ಇದೇ ದಿನ 35.63 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 513.23 ಮಿ.ಮೀ, ಕಳೆದ ವರ್ಷ ಇದೇ ಅವ​ಧಿಯಲ್ಲಿ 434.44 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ 57.30 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ 27.80 ಮಿ.ಮೀ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 29.37 ಮಿ.ಮೀ ಮಳೆಯಾಗಿದೆ.

ಮಡಿಕೇರಿ ಕಸಬಾ 19, ನಾಪೋಕ್ಲು 50, ಸಂಪಾಜೆ 25, ಭಾಗಮಂಡಲ 135.20, ವಿರಾಜಪೇಟೆ ಕಸಬಾ 34.20, ಹುದಿಕೇರಿ 25.10, ಶ್ರೀಮಂಗಲ 53.40, ಪೊನ್ನಂಪೇಟೆ 25.10, ಅಮ್ಮತ್ತಿ 9, ಬಾಳೆಲೆ 20, ಸೋಮವಾರಪೇಟೆ ಕಸಬಾ 21, ಶನಿವಾರಸಂತೆ 24.20, ಶಾಂತಳ್ಳಿ 87.20, ಕೊಡ್ಲಿಪೇಟೆ 35, ಕುಶಾಲನಗರ 3.60, ಸುಂಟಿಕೊಪ್ಪ 5.20 ಮಿ.ಮೀ. ಮಳೆಯಾಗಿದೆ.