ಪಿರಿಯಾಪಟ್ಟಣ[ಆ.15]: ಕಳೆದೆರಡು ದಿನಗಳಿಂದ ದಿನಗಳಿಂದ ತಾಲೂಕಿನಾದ್ಯಂತ ಹೆಚ್ಚು ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಕಾವೇರಿ ತೀರದ ಭಾಗದ ನದಿಯಲ್ಲಿನ ನೀರಿನ ಪ್ರಮಾಣ ಹೆಚ್ಚಾಗಿ ನದಿ ಹರಿಯುವ ಪಿರಿಯಾಪಟ್ಟಣ ತಾಲೂಕಿನ ಗಡಿಭಾಗದ ಗ್ರಾಮದ ಜನರಿಗೆ ಜಲಪ್ರವಾಹದ ಭೀತಿ ಎದುರಾಗಿದೆ.

ತಾಲೂಕಿನ ಆವರ್ತಿ ಗ್ರಾಮದಿಂದ ದೊಡ್ಡ ಕಮರವಳ್ಳಿ ಗ್ರಾಮಕ್ಕೆ ಸಂರ್ಪಕ ಕಲ್ಪಿಸುವ ಮುಖ್ಯರಸ್ತೆಯಲ್ಲಿನ ದಿಂಡಗಾಡು ಗ್ರಾಮದ ಬಳಿ ರಸ್ತೆ ಜಲಾವೃತವಾಗಿದ್ದು, ವಾಹನ ಸವಾರರು ರಸ್ತೆ ದಾಟಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಯ ಪಕ್ಕದಲ್ಲಿಯೇ ಕಾವೇರಿ ಹೊಳೆ ಹರಿಯುತ್ತಿದ್ದು, ಮಂಗಳವಾರ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಮುಖ್ಯರಸ್ತೆಯವರೆಗೂ ನೀರು ಆವರಿಸಿ ರಸ್ತೆ ಕಾಣದಂತಾದ ಸ್ಥಿತಿ ನಿರ್ಮಾಣವಾಗಿ ವಾಹನಗಳು ಸಂಚರಿಸದಂತಾಗಿದೆ. 

ರಸ್ತೆಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ನೀರಿನಲ್ಲಿ ಹಾದು ಹೋಗಲು ಪ್ರಯತ್ನಿಸಿದರೆ ಮಂಡಿಯುದ್ದ ನೀರು ಬರುತ್ತಿದ್ದು, ಸುತ್ತ
ಮುತ್ತಲ ಗ್ರಾಮಸ್ಥರಿಗೆ ಪ್ರವಾಹದ ಭೀತಿ ಎದುರಾಗಿದೆ. ಹೊಳೆಯಿಂದ ನೀರು ರಸ್ತೆಗೆ ನುಗ್ಗಿದ್ದರಿಂದ ಅಕ್ಕಪಕ್ಕದ ಜಮೀನಿನಲ್ಲಿ ರೈತರು ಬೆಳೆದಿದ್ದ ಬಾಳೆ, ಜೋಳ, ಶುಂಠಿ, ನಾಶವಾಗಿದ್ದು, ರೈತರಿಗೆ ದಿಕ್ಕು ತೋಚದಂತಾಗಿದೆ.

ಆಕ್ರೋಶ
ಕಳೆದ ಎರಡು ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆ ವತಿಯಿಂದ ರಸ್ತೆಗೆ ಡಾಂಬರೀಕರಣ ಮಾಡುವಾಗ ಪ್ರಸ್ತುತ ನೀರಿನಿಂದ ಮುಚ್ಚಿ ಹೋಗಿರುವ ಸ್ಥಳದಲ್ಲಿ ಸೇತುವೆ ನಿರ್ಮಿಸುವಂತೆ ಇಲಾಖೆ ಹಾಗೂ ಅಂದಿನ ಶಾಸಕರಾಗಿದ್ದ ಕೆ. ವೆಂಕಟೇಶ್ ಅವರಿಗೆ ಹಲವಾರು ಬಾರಿ ಮನವಿ ಮಾಡಿದ್ದರು. ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರಾದ ಮರಟಿಕೊಪ್ಪಲು ಗ್ರಾಮದ ಕೃಷ್ಣ, ಅಮರ್, ಪ್ರಕಾಶ್, ಲಲಿತ್, ಸಂತೋಷ್, ಆಕ್ರೋಶ ವ್ಯಕ್ತಪಡಿಸಿದರು. ಶಾಸಕರಿಗೆ ಘಟನೆ ಬಗ್ಗೆ ವಿವರಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ ಎಂದರು.