ಉಡುಪಿ/ಮಂಗಳೂರು(ಜೂ.05): ಅರಬ್ಬಿ ಸಮುದ್ರದಲ್ಲಿ ನಿಸರ್ಗ ಚಂಡಮಾರುತದ ಪ್ರಭಾವ ಗುರುವಾರವೂ ಕರಾವಳಿಯಲ್ಲಿ ಜೋರಾಗಿತ್ತು. ಬುಧವಾರ ರಾತ್ರಿ ಮತ್ತು ಗುರುವಾರ ಉಡುಪಿ ಜಿಲ್ಲೆಯಲ್ಲಿ ಮಾಮೂಲಿಗಿಂತ ಉತ್ತಮ ಮಳೆಯಾಗಿದೆ. ಆದರೆ, ಗುಡುಗು-ಮಿಂಚು, ಗಾಳಿಯ ಕಾಟ ಕಡಿಮೆಯಾಗಿತ್ತು.

ಹವಾಮಾನ ಇಲಾಖೆಯ ಜಿಲ್ಲೆಯಲ್ಲಿ ಸಾಧಾರಣ ಅಪಾಯದ ಕಿತ್ತಳೆ ಎಚ್ಚರಿಕೆ (ಆರೆಂಜ್‌ ಅಲರ್ಟ್‌) ನೀಡಿದೆ. ಚಂಡಮಾರುತದ ಪ್ರಭಾವ ಇನ್ನೂ ಎರಡು ದಿನಗಳ ಕಾಲ ಇರಲಿದ್ದು, ಉತ್ತಮ ಮಳೆಯಾಗಲಿದೆ ಎಂದು ಇಲಾಖೆ ಹೇಳಿದೆ.

ಉಡುಪಿ ಜಿಲ್ಲೆ: 5 ಶತಕ ದಾಟಿದ ‘ಮಹಾಸೋಂಕು’

ಅರಬ್ಬಿ ಸಮುದ್ರದಲ್ಲಿ ಮಳೆಯಿಂದಾಗಿ ಸಮುದ್ರ ಬಹಳ ಒರಟಾಗಿದೆ, ಆದ್ದರಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದವರು ಅವಧಿಗೆ ಮೊದಲೇ ದಡಕ್ಕೆ ಬಂದು ಲಂಗರು ಹಾಕಿದ್ದಾರೆ. ಜೂ.15ರಿಂದ ಈ ಬಾರಿ ಮುಂಗಾರು ಮೀನುಗಾರಿಕೆ ನಿಷೇಧ ಜಾರಿಯಾಗಲಿದೆ.

ಗುರುವಾರ ಮುಂಜಾನೆವರೆಗೆ ಜಿಲ್ಲೆಯಲ್ಲಿ (ವಾಡಿಕೆಯ 20.30 ಮಿ.ಮೀ.ಗಿಂತ ಹೆಚ್ಚು) ಸರಾಸರಿ 35.30 ಮಿ.ಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 22.30 ಮಿ.ಮೀ., ಕಾರ್ಕಳ ತಾಲೂಕಿನಲ್ಲಿ 16.00 ಮಿ.ಮೀ. ಮತ್ತು ಕುಂದಾಪುರ ತಾಲೂಕಿನಲ್ಲಿ 56.30 ಮಿ.ಮೀ. ಮಳೆ ದಾಖಲಾಗಿದೆ.

ಉಡುಪಿ: ಕೊರೋನಾ ಮುಕ್ತ 9 ಪೊಲೀಸರ ಬಿಡುಗಡೆ

ದಕ್ಷಿಣ ಕನ್ನಡ ಜಿಲ್ಲಾದ್ಯಂತ ಗುರುವಾರ ಸಾಧಾರಣ ಮಳೆಯಾಗಿದೆ. ಜತೆಗೆ ದಿನವಿಡಿ ಮೋಡ ಕವಿದ ವಾತಾವರಣವಿತ್ತು. ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗಿದ್ದರಿಂದ ಜಿಲ್ಲೆಯಲ್ಲಿ ತಂಪು ವಾತಾವರಣವಿದೆ. ಬುಧವಾರ ಬೆಳಗ್ಗಿನಿಂದ ಗುರುವಾರ ಬೆಳಗ್ಗಿನವರೆಗೆ ಬಂಟ್ವಾಳದಲ್ಲಿ 33.6 ಮಿ.ಮೀ., ಬೆಳ್ತಂಗಡಿಯಲ್ಲಿ 23.8 ಮಿ.ಮೀ., ಮಂಗಳೂರಲ್ಲಿ 20.9 ಮಿ.ಮೀ., ಪುತ್ತೂರಲ್ಲಿ 17.6 ಮಿ.ಮೀ., ಸುಳ್ಯದಲ್ಲಿ 45.5 ಮಿ.ಮೀ. ಮಳೆ ದಾಖಲಾಗಿದೆ.