ಉಡುಪಿ(ಜೂ. 05): ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಅನಿಯಂತ್ರಿತವಾಗಿ ದಿನೇದಿನೇ ಹೆಚ್ಚುತಿದೆ. ಗುರುವಾರ ಮತ್ತೆ 92 ಮಂದಿಗೆ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದೆ. ಪ್ರಸ್ತುತ ಜಿಲ್ಲೆಯ ಕೊರೋನಾ ಸೋಂಕಿತರ ಸಂಖ್ಯೆ 564 ಆಗಿದೆ.

ಈ ಎಲ್ಲಾ 92 ಸೋಂಕಿತರು ಮಹಾರಾಷ್ಟ್ರದಿಂದಲೇ ಉಡುಪಿಗೆ ಬಂದವರಾಗಿದ್ದಾರೆ. ಇದುವರೆಗೆ ಜಿಲ್ಲೆಯ ಸೋಂಕಿತರಲ್ಲಿ 530 ಮಂದಿ ಮಹಾರಾಷ್ಟ್ರದಿಂದಲೇ ಬಂದವರಾಗಿದ್ದಾರೆ.

ಉಡುಪಿ: ಕೊರೋನಾ ಮುಕ್ತ 9 ಪೊಲೀಸರ ಬಿಡುಗಡೆ

ಈ 92 ಮಂದಿಯಲ್ಲಿ 78 ಮಂದಿ ಪುರುಷರು, 13 ಮಂದಿ ಮಹಿಳೆಯರು ಹಾಗೂ 9 ವರ್ಷದ ಹೆಣ್ಣುಮಗು ಇದ್ದಾರೆ. 50 ವರ್ಷ ಮೇಲ್ಪಟ್ಟವರು 12 ಮಂದಿ ಮತ್ತು 60 ವರ್ಷ ಮೇಲ್ಪಟ್ಟವರು ಒಬ್ಬರಿದ್ದಾರೆ.

ಇವರಲ್ಲಿ ಬಹುತೇಕ ಮಂದಿ 7 ದಿನಗಳ ಸರ್ಕಾರಿ ಕ್ವಾರಂಟೈನ್‌ ಮುಗಿಸಿ, ತಂತಮ್ಮ ಮನೆಗಳಲ್ಲಿ ಕ್ವಾರಂಟೈನ್‌ನಲ್ಲಿದ್ದರು. ಅವರನ್ನು ಮನೆಗಳಿಂದ ಕರೆದುಕೊಂಡು ಬಂದು ಆಯಾ ತಾಲೂಕಿನ ಕೋವಿಡ್‌ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಒಬ್ಬರು ದಕ್ಷಿಣ ಕನ್ನಡ ಜಿಲ್ಲೆಯವರು

ಗುರುವಾರ ಪತ್ತೆಯಾದ ಸೋಂಕಿತರಲ್ಲಿ ಒಬ್ಬರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಉಡುಪಿಗೆ ಬಸ್ಸಲ್ಲಿ ಬಂದಿದ್ದರು. ನಿಯಮದಂತೆ ಇಲ್ಲಿಯೇ ಕ್ವಾರಂಟೈನ್‌ಗೆ ಒಳಗಾಗಿದ್ದರು. ಅವರೀಗ ಸೋಂಕಿರುವುದು ಪತ್ತೆಯಾಗಿದೆ. ಅವರ ಬಗ್ಗೆ ದ.ಕ. ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದ್ದು, ಅಲ್ಲಿಯೇ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಹೇಳಿದ್ದಾರೆ.

ಮನೆ ಮನೆಗಳೇ ಕಂಟೈನ್ಮೆಂಟ್‌

ಜಿಲ್ಲೆಯಲ್ಲೀಗ ಪತ್ತೆಯಾಗುವ ಸೋಂಕಿರಲ್ಲಿ ಬಹುತೇಕ ಮಂದಿ ಮನೆಗಳಲ್ಲಿಯೇ ಇರುವವರಾದ್ದರಿಂದ, ಅವರ ಮನೆಗಳನ್ನು ಕಂಟೈನ್ಮೆಂಟ್‌ ಮಾಡಲಾಗುತ್ತಿದೆ. ಜಿಲ್ಲೆಯಲ್ಲೀಗ ನೂರಾರು ಕಂಟೈನ್ಮೆಂಟ್‌ಗಳನ್ನು ಮಾಡಲಾಗಿದೆ. 28 ದಿನಗಳ ಕಾಲ ಈ ಕಂಟೈನ್ಮೆಂಟ್‌ ಇರುತ್ತದೆ. ಆ ಮನೆಯವರು ಹೊರಗೆ ಬರುವಂತಿಲ್ಲ, ಬೇರೆಯವರು ಆ ಮನೆಗಳಿಗೆ ಹೋಗುವಂತಿಲ್ಲ. ಆದ್ದರಿಂದ ಅವರಿಗೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತವೇ ಒದಗಿಸುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮುಂಬೈಯಿಂದ ಬರುವವರ ಬಗ್ಗೆ ಆತಂಕ ಬೇಡ

ಹೊರ ರಾಜ್ಯಗಳಿಂದ, ಅದರಲ್ಲೂ ಮಹಾರಾಷ್ಟ್ರದಿಂದ ಉಡುಪಿಗೆ ಬಂದವರು ಸಂಖ್ಯೆ ಸುಮಾರು 8 ಸಾವಿರ, ಇನ್ನೂ ಬರುವವರ ಸಂಖ್ಯೆ ಮೂರ್ನಾಲ್ಕು ಪಟ್ಟಿದೆ. ಅವರೆಲ್ಲರೂ ಸೇವಾಸಿಂಧು ಆ್ಯಪ್‌ನಲ್ಲಿ ಹೆಸರು ನೋಂದಾಯಿಸಿ ಉಡುಪಿ ಜಿಲ್ಲೆಯ ಅನುಮತಿಗಾಗಿ ಕಾಯುತ್ತಿದ್ದಾರೆ. ಆದ್ದರಿಂದ ಅವರು ಉಡುಪಿಗೆ ಬರುತ್ತಿದ್ದಂತೆ ಇನ್ನಷ್ಟುಸೋಂಕಿತರು ಪತ್ತೆಯಾಗುವ ಸಾಧ್ಯತೆ ಇದೆ. ಅವರಿಗೆ ಸೂಕ್ತ ಪರೀಕ್ಷೆ, ಚಿಕಿತ್ಸೆ ನೀಡಲು ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಆದ್ದರಿಂದ ಮುಂಬೈಯಿಂದ ಬರುವವರ ಬಗ್ಗೆ ಅನಗತ್ಯ ಸಂಶಯ, ಸಿಟ್ಟು ಅಗತ್ಯವಿಲ್ಲ.