ಉಡುಪಿಗೆ ಬಂದ್ರೆ ಎಲ್ಲಾ ರಸ್ತೆ ಗಳು ಹೊಂಡಾಗುಂಡಿ
ಉಡುಪಿ(Udupi) ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66(National Highway) ಮತ್ತು ಮಲ್ಪೆ(Malpe) ತೀರ್ಥಹಳ್ಳಿ (Teerthahalli)ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಪೂರ್ಣ ಹೊಂಡಗಳದ್ದೇ ಕಾರುಬಾರು!
ವರದಿ- ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಜು.21) : ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಮಳೆಯಾಗಿದೆ, ಜುಲೈ ತಿಂಗಳಲ್ಲಿ ದಾಖಲೆ ಪ್ರಮಾಣದ ಮಳೆ ಸುರಿದಿದೆ. ಆರಂಭದಲ್ಲಿ ಮಳೆಯ ಕೊರತೆ ಯಾಗಿತ್ತಾದರೂ, ಕಳೆದ 15 ದಿನಗಳಲ್ಲಿ ಬಾಕಿಯಾದ ಮಳೆಯೆಲ್ಲಾ ಸುರಿದು ಜನ ಜೀವನದ ಮೇಲೆ ಗಂಭೀರ ಪರಿಣಾಮ ಉಂಟುಮಾಡಿದೆ. ಅದರಲ್ಲೂ ಸಾರ್ವಜನಿಕ ರಸ್ತೆಗಳ ಪಾಡು ಹೇಳತೀರದು.
ಉಡುಪಿ(Udupi) ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66(National Highway) ಮತ್ತು ಮಲ್ಪೆ(Malpe) ತೀರ್ಥಹಳ್ಳಿ (Teerthahalli)ರಾಷ್ಟ್ರೀಯ ಹೆದ್ದಾರಿಯಲ್ಲಿ ಈಗ ಸಂಪೂರ್ಣ ಹೊಂಡಗಳದ್ದೇ ಕಾರುಬಾರು. ಜಿಲ್ಲೆಯ ಸಾವಿರಾರು ಪ್ರಯಾಣಿಕ ವಾಹನಗಳಿಗೆ ನಿತ್ಯ ಆಸರೆಯಾಗಿರುವ ಹೆದ್ದಾರಿಗಳು ಮರಣ ಗುಂಡಿಗಳಾಗಿ ಬದಲಾಗಿದೆ. ಈಗಾಗಲೇ ಈ ಗುಂಡಿಗಳಲ್ಲಿ ತಮ್ಮ ವಾಹನಗಳೊಂದಿಗೆ ಸಂಚರಿಸುವಾಗ ಬಿದ್ದು ಜೀವ ಕಳೆದುಕೊಂಡ ನಿದರ್ಶನಗಳೂ ಕೂಡ ಇವೆ.
ಉಡುಪಿ : ರಸ್ತೆ ಪಕ್ಕ ಮೀನು ಮಾರುವಂತಿಲ್ಲ
ಇತ್ತೀಚೆಗೆ ದೇಶದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತನ್ ಗಡ್ಕರಿ (Nitin Gadkari)ಯವರು ಕುಂದಾಪುರ (Kundapur) ಗೋವಾರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಹಾಗೂ ಸುರತ್ಕಲ್(Suratkal) ಕುಂದಾಪುರ ರಾಷ್ಟ್ರೀಯ ಹೆದ್ದಾರಿಯ ಸುಂದರವಾದ ಚಿತ್ರಗಳನ್ನು ಟ್ವೀಟ್(Tweet) ಮಾಡಿದ್ದರು. ಆದರೆ ಸದ್ಯ ಸುರತ್ಕಲ್ ಕುಂದಾಪುರ ರಾಷ್ಟ್ರೀ ಹೆದ್ದಾರಿ ಸ್ಥಿತಿ ಹೇಳತೀರದು. ಹೆದ್ದಾರಿಯ ತುಂಬಾ ಹೊಂಡಗಳೇ ತುಂಬಿಕೊಂಡಿದ್ದು ಸಂಚಾರ ಸಂಕಷ್ಠವಾಗಿದೆ. ಹೊಂಡಾ ಗುಂಡಿ ರಸ್ತೆಯಲ್ಲಿ ವಾಹನ ಸಂಚರಿಸುವಾಗ ಬೆನ್ನು ಮೂಳೆ ಮುರಿಯುವ ಸ್ಥಿತಿ ಉಂಟಾಗಿದೆ.
ಪ್ರಯಾಣದ ವೇಳೆ ಸ್ವಲ್ಪ ಎಚ್ಚರ ತಪ್ಪಿದರೂ ಸಾಕು ವಾಹನ ಹೊಂಡಕ್ಕೆ ಬೀಳುವುದು ಖಚಿತ.ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಆಳವಾದ ಹೊಂಡವನ್ನು ತಪ್ಪಿಸಲು ಮುಂಬೈ – ಮಂಗಳೂರು ಖಾಸಗಿ ಬಸ್ಸೊಂದು ಕುಂದಾಪುರ ಸಮೀಪ ಡಿವೈಡರ್ ಮೇಲೆ ಚಲಿಸಿದ್ದರೆ, ಮಲ್ಪೆ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಹಿರಿಯಡ್ಕ ಸಮೀಪ ದ್ವಿಚಕ್ರ ವಾಹನ ಸವಾರರೋರ್ವರು ಹೊಂಡ ತಪ್ಪಿಸಲು ಹೋಗಿ ವಾಹನದಿಂದ ಬಿದ್ದು ಮೃತಪಟ್ಟ ಘಟನೆ ಕೂಡ ನಡೆದಿದೆ. ಮಂಗಳೂರು- ಉಡುಪಿ- ಕುಂದಾಪುರ ರಸ್ತೆಯಲ್ಲಿ ನೂರಿನ್ನೂರು ಮೀಟರ್ ಗೊಂದು ದೊಡ್ಡ ಗಾತ್ರದ ಹೊಂಡಗಳು ಇವೆ. ಈ ಹೊಂಡಗಳು ಅಫಘಾತಗಳಿಗೆ ಕಾರಣವಾಗುತ್ತಿದೆ.
ಉಡುಪಿ: ಬೇಲಾಡಿ- ಪರಪ್ಪಾಡಿ ಸಂಪರ್ಕ ರಸ್ತೆ ಅವ್ಯವಸ್ಥೆ
ಅವೈಜ್ಞಾನಿಕವಾದ ಹೆದ್ದಾರಿ ಕಾಮಗಾರಿಯಿಂದಾಗಿ ಮಳೆ ನೀರು ಸೂಕ್ತ ರೀತಿಯಲ್ಲಿ ಚರಂಡಿಗೆ ಹೋಗದೆ ರಸ್ತೆಯಲ್ಲಿಯೇ ಹರಿಯುತ್ತಿರುವ ಕಾರಣ ರಸ್ತೆಯ ಮೇಲೆ ಹಾಕಿದ ಡಾಮರು ಸವೆತದಿಂದಾಗಿ ಹೊಂಡಗಳು ನಿರ್ಮಾಣಗೊಳ್ಳುತ್ತಿದ್ದು ಅಸರ್ಪಕ ಕಾಮಗಾರಿ ಪ್ರಯಾಣಿಕ ಜೀವಕ್ಕೆ ಕುತ್ತು ತರುತ್ತಿದೆ ಎಂಬ ಆರೋಪಗಳು ಕೂಡ ಇವೆ. ಹೆದ್ದಾರಿಯಲ್ಲೇ ಅಪಯಕಾರಿಯಾಗಿ ನೀರು ಹರಿಯುವುದರಿಂದ ರಾತ್ರಿ ಸಮಯದಲ್ಲಂತೂ ಹೊಂಡಗಳನ್ನು ತಪ್ಪಿಸಿ ಸಂಚರಿಸುವುದೇ ದೊಡ್ಡ ಸಾಹಸವಾಗಿದೆ.
ಕುಂದಾಪುರ ಭಾಗದ ಶಾಸ್ತ್ರಿ ಸರ್ಕಲ್(Shashtri circle) ಬಳಿ ಫ್ಲೈ ಒವರ್(Flyover) ಅಕ್ಕಪಕ್ಕದ ರಸ್ತೆಯಲ್ಲಿ ಮಳೆಗಾಲ(Monsoon)ದಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ಮಳೆ ನೀರು ಸರ್ವಿಸ್ ರಸ್ತೆಯಲ್ಲಿ ಹರಿಯುತ್ತಿದ್ದು ನದಿಯಂತೆ ಕಾಣುತ್ತದೆ. ಸಂಬಂಧಪಟ್ಟವರನ್ನು ಎಚ್ಚರಿಸಬೇಕಾದ ಅಧಿಕಾರಿಗಳು ಜನಪ್ರತಿನಿಧಿಗಳೂ ದಿವ್ಯ ನಿರ್ಲಕ್ಷ್ಯ ವಹಿಸಿರುವುದರಿಂದ ಸಮಸ್ಯೆ ಹಾಗೇಯೇ ಉಳಿದಿದೆ.
ಹೈವೇ ದೊಡ್ಡದಾದ್ರೆ ಸಾಕೇ? ನಿರ್ವಹಿಸುವ ‘ಬುದ್ಧಿ’ ಬೇಡ್ವೇ ಅಧಿಕಾರಿಗಳೇ?
ರಾಷ್ಟ್ರೀಯ ಹೆದ್ದಾರಿಯ ಸ್ಥಿತಿ ಈ ರೀತಿಯಾದರೆ ಉಡುಪಿ, ಕುಂದಾಪುರ, ಕಾರ್ಕಳ ಭಾಗದ ನಗರ ಹಾಗೂ ಗ್ರಾಮೀಣ ರಸ್ತೆಗಳ ಪರಿಸ್ಥಿತಿ ಕೂಡ ಇದರಿಂದ ಹೊರತಾಗಿಲ್ಲ. ಭಾರಿ ಪ್ರಮಾಣದ ಮಳೆಯಿಂದಾಗಿ ನಗರ ಭಾಗದ ರಸ್ತೆಗಳು, ಜಿಲ್ಲಾ ಪ್ರಮುಖ ರಸ್ತೆಗಳು, ಗ್ರಾಮೀಣ ರಸ್ತೆಗಳು ಹೊಂಡಗಳಿಂದ ತುಂಬಿ ಹೋಗಿದ್ದು, ಹಲವು ಕಡೆಗಳಲ್ಲಿ ವಾಹನದಲ್ಲಿ ಓಡಾಡಲು ಕೂಡ ಸಾಧ್ಯವಾಗದ ಪರಿಸ್ಥಿತಿ ಇದೆ.
ಹೊಂಡಮಯ ರಸ್ತೆಯಿಂದಾಗಿ ನಿತ್ಯ ಸಂಚರಿಸುವರು ಯಾತನೆ ಅನುಭವಿಸುತ್ತಿದ್ದು ಕಾರು,ಆಟೋ ಸೇರಿದಂತೆ ಸಣ್ಣ ವಾಹನಗಳು ಈ ರಸ್ತೆಗಳಲ್ಲಿ ಚಲಿಸುವುದು ಹರಸಾಹಸವಾಗಿದೆ. ಉಡುಪಿ ನಗರದ ಕಲ್ಲಂಕ ಅಂಬಾಗಿಲು ರಸ್ತೆಯಲ್ಲಿ ಒಳಚರಂಡಿ ಕಾಮಗಾರಿಗಾಗಿ ರಸ್ತೆ ಅಗೆದು ಹಾಕಿದ್ದು ಬಳಿಕ ಕೇವಲ ತೇಪೆ ಹಾಕಿದ್ದು ಬಿಟ್ಟರೆ ಸೂಕ್ತವಾದ ಡಾಂಬರೀಕರಣ ನಡೆಸದ ಕಾರಣ ಸಂಚಾರ ಮಾಡುವುದೇ ಕಷ್ಟವಾಗಿದೆ.