ಉಡುಪಿ : ರಸ್ತೆ ಪಕ್ಕ ಮೀನು ಮಾರುವಂತಿಲ್ಲ
ಉಡುಪಿ ನಗರದಲ್ಲಿ ರಸ್ತೆ ಪಕ್ಕದಲ್ಲಿ ಯಾರೂ ಮೀನು ಮಾರಾಟ ಮಾಡುವಂತಿಲ್ಲ ಎಂದು ನಗರಸಭೆ ಸುತ್ತೋಲೆ ಹೊರಡಿಸಿದೆ.
ಉಡುಪಿ (ಅ.06) : ಇನ್ನು ಮುಂದೆ ಉಡುಪಿ ನಗರದಲ್ಲಿ ರಸ್ತೆ ಪಕ್ಕದಲ್ಲಿ ಯಾರೂ ಮೀನು ಮಾರಾಟ ಮಾಡುವಂತಿಲ್ಲ ಎಂದು ನಗರಸಭೆ ಸುತ್ತೋಲೆ ಹೊರಡಿಸಿದೆ.
ನಗರದ ಪ್ರಮುಖ ರಸ್ತೆಗಳಲ್ಲಿ ಮೀನುಗಾರ ಮಹಿಳೆಯರು ಕುಳಿತು ಮೀನು ಮಾರಾಟ ಮಾಡುವುದು ಬಹಳ ಹಿಂದಿನ ಪದ್ಧತಿಯಾಗಿದೆ. ಆದರೆ ಇದರಿಂದ ತೊಂದರೆಯಾಗುತ್ತಿದೆ ಸಾರ್ವಜನಿಕರಿಂದ ನಗರಸಭೆಗೆ ದೂರು ಸಲ್ಲಿಕೆಯಾಗಿದೆ.
ಬಡ ಅಜ್ಜಿಯನ್ನು ರಾತ್ರೋ ರಾತ್ರಿ ಲಕ್ಷಾಧಿಪತಿಯಾಗಿಸಿದ ಸತ್ತ ಮೀನು! ...
ಅಲ್ಲದೇ ಕೆಲವು ಯುವಕರು ವಾಹನಗಳಲ್ಲಿ ಮೀನು ತುಂಬಿಕೊಂಡು ಬಂದು ನಗರದಲ್ಲಿ ಸಂಚರಿಸುತ್ತಾ ಮೀನು ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಸ್ವತಃ ಮೀನುಗಾರ ಮಹಿಳೆಯರೇ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಯುವಕರಿಂದ ತಮ್ಮ ವೃತ್ತಿಗೆ ಧಕ್ಕೆಯಾಗುತ್ತಿದೆ ಎಂದು ನಗರಸಭೆಗೆ ದೂರಿದ್ದಾರೆ.
ಈ ಹಿನ್ನೆಲೆಯಲ್ಲಿ ನಗರದಲ್ಲಿ ನಿಗದಿತ ಮೀನು ಮಾರುಕಟ್ಟೆಯಲ್ಲಿಯೇ ಮೀನು ಮಾರಾಟ ಮಾಡಬೇಕು. ಇತರ ಸಾರ್ವಜನಿಕ ಪ್ರದೇಶಗಳಲ್ಲಿ ಅನಧಿಕೃತವಾಗಿ ಮೀನು ಮಾರಾಟ ಮಾಡಬಾರದು. ತಪ್ಪಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಆಯುಕ್ತರು ಹೇಳಿದ್ದಾರೆ.