ಕಲಬುರಗಿ(ಮಾ.15): ಕೊರೋನಾ ವೈರಸ್ ಸೋಂಕಿನಿಂದ ಮಾ.10ರ ಮಂಗಳವಾರ ಮಧ್ಯರಾತ್ರಿ ಮೃತಪಟ್ಟಿದ್ದ ಕಲಬುರಗಿಯ ಮೋಮಿನಪುರ ನಿವಾಸಿ ವಯೋವೃದ್ಧ ವ್ಯಕ್ತಿಯ ಕುಟುಂಬದ ಸದಸ್ಯರ ಪೈಕಿ ವೈರಾಣು ಲಕ್ಷಣ ಕಂಡಿದ್ದ ನಾಲ್ಕು ಜನರ ಗಂಟಲು ದ್ರವ ವರದಿ ಶನಿವಾರ ರಾತ್ರಿ 9 ಗಂಟೆಗೆ ಬಂದಿದ್ದು, ಈ ಪೈಕಿ 3 ಜನರಿಗೆ ಕೊರೋನಾ ವೈರಸ್ ಸೋಂಕು ಇಲ್ಲ ಎಂದು ದೃಢಪಟ್ಟಿದೆ. 

ಶನಿವಾರ ಕಲಬುರಗಿಗೆ ಭೇಟಿ ನೀಡಿದ್ದ ಆರೋಗ್ಯ ಸಚಿವ ಶ್ರೀರಾಮುಲು ಸುದ್ದಿಗೋಷ್ಠಿ ನಡೆಸುವಾಗಲೇ ಪ್ರಯೋಗಾಲಯದ ಈ ವರದಿ ಮಾಹಿತಿ ಬಂತು, ತಕ್ಷಣ ಈ ಸಂಗತಿ ತಿಳಿಸಿದ ಸಚಿವ ಶ್ರೀರಾಮಲು ಕಲಬುರಗಿ ಮಂದಿ ಆಂತಕ್ಕೊಳಗಾಗೋದು ಬೇಡ ಎಂದಿದ್ದಾರೆ. ಮೃತನ ಕುಟುಂಬದ 5 ವರ್ಷದ ಮಗು ಸೇರಿದಂತೆ ನಾಲ್ವರು ಸದಸ್ಯರಲ್ಲಿ ಕೊರೋನಾ ವೈರಸ್ ಸೋಂಕಿನ ಶಂಕೆ ವ್ಯಕ್ತವಾದರಿಂದ ಆ 4 ಸದಸ್ಯರ ಗಂಟಲು ದ್ರವವನ್ನು 2 ದಿನಗಳ ಹಿಂದೆಯೇ ಪರೀ ಕ್ಷೆಗೆ ಬೆಂಗಳೂರಿಗೆ ಕಳುಹಿಸಲಾಗಿತ್ತು. ಇಂದು ಆ ಪೈಕಿ ಮೂವರ ವೈದ್ಯಕೀಯ ವರದಿ ಬಂದಿದ್ದು, ಅದರಲ್ಲಿ ಕೊರೋನಾ ಸೊಂಕು ಇಲ್ಲ. ಕೋವಿದ್ 19 ನೆಗೆಟೀವ್ ಎಂದು ಸ್ಪಷ್ಟವಾಗಿದೆ. ಇನ್ನೊಂದು ವರದಿ ನಾಳೆ ಬರಲಿದೆ ಎಂದರು. 

ಕೊರೋನಾ ಅಲರ್ಟ್ : ಹಾಸನದಲ್ಲಿ ನಾಲ್ವರು ವೈದ್ಯರು ರಜೆ

ಕಲಬುರಗಿಯ 76 ವರ್ಷದ ವಯೋವೃದ್ಧ ಶ್ವಾಸಕೋಶ ಕಾಯಿಲೆ ಜೊತೆಗೆ ಕೊರೋನಾ ವೈರಸ್ ಸೊಂಕಿನಿಂದ ಕಳೆದ ಮಾರ್ಚ್ 10 ರಂದು ನಿಧನ ಹೊಂದಿದ್ದರು. ವ್ಯಕ್ತಿಯ ನೇರ ಸಂಪರ್ಕದಲ್ಲಿದ ಕುಟುಂಬದ 4 ಜನ ಸದಸ್ಯರನ್ನು ಇಲ್ಲಿನ ಇಎಸ್ ಐಸಿ ಮೆಡಿಕಲ್ ಅಸ್ಪತ್ರೆ ಐಸೋಲೇಷನ್ ವಾರ್ಡ್ ನಲ್ಲಿಟ್ಟು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಕೊರೋನಾ ಭೀತಿ ಇದ್ದಾಗಲೇ ತಾವು ತಿರುಪತಿಗೆ ಹೋಗಿದ್ದರ ಹಿಂದೆ ಜನ ಕಲ್ಯಾಣ ಅಡಗಿದೆ. ಮಗಳು ಹಾಗೂ ಕುಟುಂಬದ ಹರಕೆ ಇತ್ತು, ಜೊತೆಗೇ ಕೊರೋನಾ ಶಂಕೆ ನಿವಾರಿಸು ಎಂದು ತಿಮ್ಮಪ್ಪನಿಗೆ ಬೇಡಿಕೊಂಡಿದ್ದಾಗಿ ರಾಮುಲು ಹೇಳಿದರು. 

ವಿಜ್ಞಾನ- ಧರ್ಮ ಎರಡು ಜೊತೆಯಾಗಿರಬೇಕು, ನಾನಂತೂ ಎರಡನ್ನು ನಂಬುವೆ. ಹೀಗಾಗಿ ಹರಕೆ ತೀರಿಸಲು ತಿರುಪತಿಗೆ ಹೋಗಿದ್ದರೂ ಸಹ ಕೊರೋನಾ ಭೀತಿ ದೂರ ಮಾಡಿ ರಾಜ್ಯದ ಜನರನ್ನ ರಕ್ಷಿಸೆಂದು ತಾವು ತಿಮ್ಮಪ್ಪನಿಗೆ ಪ್ರಾರ್ಥಿಸಿದ್ದಾಗಿ ಹೇಳಿದರು. 

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು ಕೊರೋನಾ ಸೋಂಕಿತರ ವಿಚಾರದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಸರಿಯಾದಂತಹ ಕ್ರಮ ಕೈಗೊಂಡಿಲ್ಲವೆಂಬ ಆರೋಪಗಳನ್ನು ತಳ್ಳಿಹಾಕಿದರಲ್ಲದೆ ಕಲಬುರಗಿಯಲ್ಲೇ ತಮ್ಮ ತಂದೆಗೆ ಚಿಕಿತ್ಸೆ ದೊರಕಲಿಲ್ಲ ಎಂಬ ಮೃತ ವೃದ್ಧನ ಪುತ್ರನ ಆರೋಪಗಳಿಗೆ ವಿಷಾದಿಸಿದರು. 

ಸುಡು ಬಿಸಿಲಿಗೆ ಹೆದರದ ಕಲಬುರಗಿ ಜನ: ಕೊರೋನಾ ಕಾಟಕ್ಕೆ ಸುಸ್ತೋ ಸುಸ್ತು!

ಕೊರೋನಾದಂತಹ ಸಾಂಕ್ರಾಮಿಕ ಪಿಡುಗು ಪ್ರಕೃತಿ ಆಟ. ನಾವು ಸಾಧ್ಯವಿದ್ದಷ್ಟು ಕ್ರಮ ಕೈಗೊಳ್ಳುತ್ತಿದ್ದೇವೆ. ರಾಜ್ಯದಲ್ಲಿ ಸೋಂಕಿತರಲ್ಲೇ 11 ಮಂದಿ ಗುಣಮುಖರಾಗಿದ್ದಾರೆ. ಕಲಬುರಗಿ ಯಲ್ಲಿನ ವೃದ್ಧನ ಸಾವು ದುರಾದೃಷ್ಟಕರ. ಮನೆ ಮಂದಿಯ ಹೇಳಿಕೆಗೆ ತಾವು ಯಾವುದೇ ಭಿನ್ನ ಹೇಳಿಕೆ ನೀಡೋದಿಲ್ಲವೆಂದರು. 

ಕಲಬುರಗಿಯಲ್ಲೇ ಕೊರೋನಾ ಪರೀಕ್ಷೆ ಪ್ರಯೋಗಾಲಯ ಆರಂಭಕ್ಕೆ ವಿಳಂಬವ್ಯಾಕೆಂಬ ಪತ್ರಕರ್ತರ ಪ್ರಶ್ನೆಗೆ ಸ್ಪಂದಿಸಿದ ಸಚಿವರು ಡಬ್ಲ್ಯೂಎಚ್‌ಒ ಪರವಾನಿಗೆ ಇತ್ಯಾದಿ ಕೆಲವು ತಾಂತ್ರಿಕ ಅಗತ್ಯಗಳ ಪೂರೈಕೆಯಾಗಬೇಕಿದೆ. ಇನ್ನು 3 ದಿನದಲ್ಲಿ ಇಲ್ಲೇ ಜಿಮ್ಸ್‌ನಲ್ಲೇ ಪ್ರಯೋಗಾಲಯ ಆರಂಭವಾಗುವ ವಿಶ್ವಾಸ ವ್ಯಕ್ತಪಡಿಸಿದರು. 

ಸೋಂಕಿನಿಂದ ಸಾವನ್ನಪ್ಪಲು ಬಿಎಸ್‌ವೈ ಸರ್ಕಾರ ಬಿಡೋದಿಲ್ಲ. ಸಿಎಂ ತಮಗೆ ಈ ವಿಚಾರದಲ್ಲಿ ಮುಕ್ತ ಅಧಿಕಾರ ನೀಡಿದ್ದರಿಂದ ಸೋಂಕಿನ ನಿಯಂತ್ರಣಕ್ಕೆ ತಾವು ಶ್ರಮಿಸುತ್ತಿರುವುದಾಗಿ ಹೇಳಿದರು. ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಇನ್ನು 3 ತಿಂಗಳಲ್ಲಿ ರಾಜ್ಯದಲ್ಲಿ 2 ಸಾವಿರ ವೈದ್ಯರ ನೇರ ನೇಮಕಾತಿಗೆ ಕ್ರಮ ಜರುಗಿಸಲಾಗುತ್ತದೆ ಎಂದರು.