Asianet Suvarna News

ಕ್ವಾರಂಟೈನ್‌:'ದೆವ್ವಕ್ಕೆ ಇಡುವಂತ ಆಹಾರ ಕೊಡ್ತಿದ್ದಾರೆ, ನಮಗೆ ಜೋಳದ ರೊಟ್ಟಿ ಕೊಡಿ'

ಉಪಹಾರ ಸರಿಯಾಗಿ ನೀಡುತ್ತಿಲ್ಲವೆಂದು ಕ್ವಾರಂಟೈನ್‌ ಜನರ ಆರೋಪ| ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಕೆಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕ್ವಾರಂಟೈನ್‌ಗೆ ಒಳಗಾದ ಜನರು| ಅನ್ನ ಸಾರು ತಿಂದರೂ ಉಪವಾಸ ಇರುವಂತಾಗಿದೆ| ಒಂದು ಬಾರಿಯೂ ಚಪಾತಿ, ರೊಟ್ಟಿ ನೀಡಿಲ್ಲ|
 

Quarantine People Demand for Quality Food in Indi in Vijayapura district
Author
Bengaluru, First Published May 28, 2020, 2:35 PM IST
  • Facebook
  • Twitter
  • Whatsapp

ಇಂಡಿ(ಮೇ.28): ಮಹಾಮಾರಿ ಕೊರೋನಾ ವೈರಸ್‌ ನಿಯಂತ್ರಣ ಹಿನ್ನಲೆಯಲ್ಲಿ ಮಹಾರಾಷ್ಟ್ರ ಇತರೆ ಭಾಗದಿಂದ ಬಂದಿರುವ ತಾಲೂಕಿನ ಜನರನ್ನು ಗ್ರಾಮದ ಸರ್ಕಾರಿ ಶಾಲೆ, ವಸತಿ ನಿಲಯಗಳಲ್ಲಿ ತಾಲೂಕು ಆಡಳಿತ ಕ್ವಾರಂಟೈನ್‌ ಮಾಡಿದ್ದಾರೆ. ಆದರೆ, ನಮಗೆ ಸರಿಯಾದ ಊಟ, ಉಪಹಾರ ನೀಡುತ್ತಿಲ್ಲ. ಸರಿಯಾದ ನೀರಿನ ವ್ಯವಸ್ಥೆ ಕೂಡಾ ಇಲ್ಲ. ನಮ್ಮನ್ನು ಜೈಲಿನಲ್ಲಿ ಇಟ್ಟಂತಾಗಿದೆ ಎಂದು ಕ್ವಾರಂಟೈನ್‌ಗೊಳಗಾದ ಜನರು ಆರೋಪ ಮಾಡುತ್ತಿದ್ದಾರೆ.

ಕ್ವಾರಂಟೈನ್‌ನಲ್ಲಿ ಯಾಕೆ ಬಂದೆವು, ಇರುವ ಸ್ಥಳದಲ್ಲಿ ತೊಂದರೆಯಾದರೂ ಸರಿ ಚೆನ್ನಾಗಿರುತ್ತಿತ್ತು. ಊಟ,ಉಪಹಾರ ಇಲ್ಲದೆ ತೊಂದರೆ ಅನುಭವಿಸಿ ಸ್ವಗ್ರಾಮಕ್ಕೆ ಬಂದರೆ ಕ್ವಾರಂಟೈನಲ್ಲಿ ಇಟ್ಟು, ಹಿಂಸೆ ನೀಡುತ್ತಿದ್ದಾರೆ ಎಂದು ಕ್ವಾರಂಟಿನ್‌ಗೆ ಒಳಗಾದ ಜನರು ಸ್ಥಳೀಯ ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ವಿಜಯಪುರ: ಸಾಂಸ್ಥಿಕ ಕ್ವಾರಂಟೈನ್‌ಲ್ಲಿ ಲೋಪವಾಗದಿರಲಿ, ಸಚಿವೆ ಜೊಲ್ಲೆ

ತಾಲೂಕಿನ ನಾದ ಕೆಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ 18 ಜನರನ್ನು ಹಾಗೂ ಮಿರಗಿ ಗ್ರಾಮದ ಯಲ್ಲಾಲಿಂಗ ಪ್ರೌಢ ಶಾಲೆಯಲ್ಲಿ ಮಹಾರಾಷ್ಟ್ರದ ಇತರೆ ಭಾಗದಿಂದ ಬಂದಿರುವ 13 ಜನರನ್ನು ಮುಂಜಾಗ್ರತ ಕ್ರಮವಾಗಿ ಗ್ರಾಮದೊಳಗೆ ಬಿಟ್ಟುಕೊಳ್ಳದೆ ಕ್ವಾರಂಟೈನ್‌ ಮಾಡಲಾಗಿದೆ. ನಾದ 18 ಹಾಗೂ ಮಿರಗಿ ಗ್ರಾಮದಲ್ಲಿ 13 ಜನರನ್ನು ಕೆಲವು ದಿನಗಳಿಂದ ಕ್ವಾರಂಟೈನ್‌ ಮಾಡಲಾಗಿದೆ. 

ಕ್ವಾರಂಟೈನ್‌ ಮಾಡಿದ ಜನರಿಗೆ ಸರಿಯಾದ ಊಟ,ಉಪಹಾರ ನೀಡುತ್ತಿಲ್ಲ. ನಾದ ಗ್ರಾಮದಲ್ಲಿ ರಟ್ಟಿನ ಬಾಕ್ಸದಲ್ಲಿ ಅನ್ನ ಹಾಕಿ ಇಡುತ್ತಾರೆ. ಸರಿಯಾದ ಊಟ, ಉಪಹಾರ, ನೀರಿನ ವ್ಯವಸ್ಥೆ ಇಲ್ಲದೆ ಜೈಲ್ಲಿನಲ್ಲಿ ಕೊಳೆಯುವಂತಾಗಿದೆ. ನಮಗೆ ಭೂತಕ್ಕೆ ಇಡುವಂತೆ ಅನ್ನ ಇಟ್ಟು ಹೋಗುತ್ತಾರೆ. ನಮ್ಮನ್ನು ಮನುಷ್ಯರಂತೆ ಕಾಣುತ್ತಿಲ್ಲ ಎಂದು ನಾದ ಗ್ರಾಮದಲ್ಲಿ ಕ್ವಾರಂಟೈನಲ್ಲಿ ಇದ್ದವರು ಆರೋಪಿಸುತ್ತಾರೆ.

ಮಿರಗಿ ಗ್ರಾಮದಲ್ಲಿ ಕಳೆದ 14 ದಿನಗಳಿಂದ ಮಿರಗಿ ಗ್ರಾಮದ ಯಲ್ಲಾಲಿಂಗ ಪ್ರೌಢ ಶಾಲೆಯಲ್ಲಿ 13 ಜನ ಕ್ವಾರಂಟೈನ್‌ ಮಾಡಲಾಗಿದೆ. ಆದರೆ ಇವರಿಗೆ ಶೌಚಾಲಯದ ವ್ಯವಸ್ಥೆ ಇಲ್ಲದಕ್ಕಾಗಿ ಬಯಲು ಬಹಿರ್ದೆಸೆಗೆ ಹೋಗುತ್ತಾರೆ. 14 ದಿನಗಳಿಂದ ಬರೀ ಅನ್ನ ಸಾರು ನೀಡುತ್ತಿದ್ದಾರೆ. ಅನ್ನ ಸಾರು ತಿಂದು ಅಶಕ್ತವಾಗಿದೆ. ಅನ್ನ ಸಾರು ತಿಂದರೂ ಉಪವಾಸ ಇರುವಂತಾಗಿದೆ. ಒಂದು ಬಾರಿಯೂ ಚಪಾತಿ, ರೊಟ್ಟಿ ನೀಡಿರುವುದಿಲ್ಲ. ಹೀಗಾಗಿ ಕೊರೋನಾ ವೈರಸ್‌ಗಿಂತ ಉಪವಾಸ ಬಿದ್ದು ಅಶಕ್ತವಾಗಿದ್ದೇವೆ. ಯಾವ ಅಧಿಕಾರಿಯೂ ಇಲ್ಲಿಯವರೆಗೆ ಭೇಟಿ ನೀಡಿ ನಮ್ಮ ಸಮಸ್ಯೆ ಕೇಳಿರುವುದಿಲ್ಲ ಎಂದು ಮಿರಗಿ ಗ್ರಾಮದಲ್ಲಿ ಕ್ವಾರಂಟೈನ್‌ಲ್ಲಿ ಇದ್ದವರು ಆರೋಪಿಸುತ್ತಾರೆ.

ಏನಂತಾರೆ ಅಧಿಕಾರಿ

ಕ್ವಾರಂಟೈನ್‌ನಲ್ಲಿ ಇದ್ದವರಿಗೆ ಪ್ರತಿಯೊಬ್ಬರಿಗೆ ಪ್ರತಿ ದಿನಕ್ಕೆ ಊಟ, ಉಪಹಾರಕ್ಕಾಗಿ 60 ರೂ.ಗಳು ಇದೆ. ಅದರಲ್ಲಿ ಎರಡು ಊಟ, ಒಂದು ಬಾರಿ ಉಪಹಾರ ನೀಡಬೇಕು. 60 ರೂ.ಗಳಲ್ಲಿ ಯಾವ ಊಟ, ಉಪಹಾರ ದೊರೆಯುತ್ತದೆಯೊ ಅದನ್ನೇ ನೀಡಬೇಕು. ಹೆಚ್ಚುವರಿ ಹಣ ಎಲ್ಲಿಂದ ತರಬೇಕು. ಎಲ್ಲ ಶಾಲೆಗಳಲ್ಲಿ ಶೌಚಾಲಯ ಇವೆ. ಅದನ್ನೇ ಅವರು ಉಪಯೋಗಿಸಬೇಕು ಎಂದು ತಹಶೀಲ್ದಾರ ಚಿದಂಬರ ಕುಲಕರ್ಣಿ ಅವರು ಹೇಳಿದ್ದಾರೆ. 
 

Follow Us:
Download App:
  • android
  • ios