ಬೆಂಗಳೂರು [ಫೆ.09]:  ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಹೆಡ್‌ಕಾನ್ಸ್‌ಟೇಬಲ್‌ವೊಬ್ಬರು ಮೃತಪಟ್ಟು, ಕಾನ್‌ಸ್ಟೇಬಲ್‌ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಜಾಲ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ನಡೆದಿದೆ.

ಚಿಕ್ಕಜಾಲ ಸಂಚಾರ ಠಾಣೆ ಹೆಡ್‌ಕಾನ್‌ಸ್ಟೇಬಲ್‌ ವೈ.ಧನಂಜಯ್ಯ(30) ಮೃತರು. ಘಟನೆಯಲ್ಲಿ ಮತ್ತೊಬ್ಬ ಕಾನ್‌ಸ್ಟೇಬಲ್‌ ಉಮಾಮಹೇಶ್ವರ್‌ (29) ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಬಸವನಗುಡಿ ನಿವಾಸಿ ಕಾರು ಚಾಲಕ ಕುಶಾಲ್‌ ರಾಜ್‌ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಡ್‌ಕಾನ್‌ಸ್ಟೇಬಲ್‌ ಧನಂಜಯ್ಯ ಮತ್ತು ಉಮಾಮಹೇಶ್ವರ ಅವರು ಚಿಕ್ಕಜಾಲ ಮೇಲ್ಸೇತುವೆ ಬಳಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದು, ವಾಹನಗಳ ತಪಾಸಣೆ ನಡೆಸುತ್ತಿದ್ದರು. ಕೆಂಪೇಗೌಡ ವಿಮಾನ ನಿಲ್ದಾಣದಿಂದ ಮುಂಬೈಗೆ ತೆರಳಬೇಕಿದ್ದ ಆರೋಪಿ ಕುಶಾಲ್‌ ರಾಜ್‌ ಒಬ್ಬರೇ ಕಾರಿನಲ್ಲಿ ಬಳ್ಳಾರಿ ರಸ್ತೆಯಲ್ಲಿ ಶನಿವಾರ ಸಂಜೆ 5.30ರ ಸುಮಾರಿಗೆ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದ. ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ರಸ್ತೆ ಬದಿ ಮೇಲ್ಸೇತುವೆ ಮೇಲೆ ನಿಂತಿದ್ದ ಹೆಡ್‌ಕಾನ್‌ಸ್ಟೇಬಲ್‌ ಮತ್ತು ಕಾನ್‌ಸ್ಟೇಬಲ್‌ಗೆ ಡಿಕ್ಕಿ ಹೊಡೆದಿದ್ದಾರೆ.

ಪಂಪ್‌ವೆಲ್‌ ಮೇಲ್ಸೇತುವೆಯಲ್ಲಿ ಭೀಕರ ಅಪಘಾತ: ಒಬ್ಬ ಸಾವು, ಐವರು ಗಂಭೀರ...

ಪರಿಣಾಮ ಗಂಭೀರವಾಗಿ ಗಾಯಗೊಂಡ ಇಬ್ಬರು ಪೊಲೀಸರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಾಳುಗಳನ್ನು ಪರಿಶೀಲಿಸಿದ ವೈದ್ಯರು ಧನಂಜಯ್ಯ ಮೃತಪಟ್ಟಿರುವುದಾಗಿ ತಿಳಿಸಿದರು. ಉಮಾ ಮಹೇಶ್ವರ್‌ ಅವರ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಧನಂಜಯ್ಯ ಅವರು ಮೂಲತಃ ದೊಡ್ಡಬಳ್ಳಾಪುರದವರಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಯಲಹಂಕ ನ್ಯೂ ಟೌನ್‌ನಲ್ಲಿ ನೆಲೆಸಿದ್ದರು. ಪತ್ನಿ ಅನುಸೂಯ ಅವರು ಯಲಹಂಕ ನ್ಯೂಟೌನ್‌ ಠಾಣೆಯಲ್ಲಿ ಹೆಡ್‌ಕಾನ್‌ಸ್ಟೇಬಲ್‌ ಆಗಿದ್ದಾರೆ. ಉಮಾ ಮಹೇಶ್ವರ್‌ ವಿವಾಹಿತರಾಗಿದ್ದು, ಯಲಹಂಕದಲ್ಲಿ ನೆಲೆಸಿದ್ದಾರೆ. ಆರೋಪಿ ಕುಶಾಲ್‌ ರಾಜ್‌ ಸುಲ್ತಾನ್‌ ಪೇಟೆಯಲ್ಲಿ ಸ್ವಂತ ಬಟ್ಟೆಅಂಗಡಿ ಹೊಂದಿದ್ದಾನೆ. ಶನಿವಾರ ಸಂಜೆ ಏಳು ಗಂಟೆಯ ವಿಮಾನದಲ್ಲಿ ಆರೋಪಿ ಮುಂಬೈಗೆ ತೆರಳಬೇಕಿತ್ತು. ಈ ವೇಳೆ ದುರ್ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.