ಪ್ರವಾಹದಲ್ಲಿ ಮನೆ ಕಳೆದುಕೊಂಡು ಐದು ವರ್ಷಗಳಿಂದ ಶೆಡ್ಡಿನಲ್ಲೇ ವಾಸ: ನಿವೇಶನ ಹಂಚದ ಜಿಲ್ಲಾಡಳಿತ
2018ರಿಂದ 2020 ರವೆಗೆ ನಿರಂತರ ಮೂರು ವರ್ಷಗಳ ಕಾಲ ಕೊಡಗು ಜಿಲ್ಲೆಯಲ್ಲಿ ಭೀಕರ ಭೂಕುಸಿತ ಮತ್ತು ಕಾವೇರಿ ನದಿ ಉಕ್ಕಿ ಹರಿದು ಪ್ರವಾಹ ಉಂಟಾಗಿದ್ದು ಜನರ ಮನಸ್ಸಿನಲ್ಲಿ ಇನ್ನೂ ಅಚ್ಚಳಿಯದಂತೆ ಉಳಿದಿದೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಮೇ.27): 2018ರಿಂದ 2020 ರವೆಗೆ ನಿರಂತರ ಮೂರು ವರ್ಷಗಳ ಕಾಲ ಕೊಡಗು ಜಿಲ್ಲೆಯಲ್ಲಿ ಭೀಕರ ಭೂಕುಸಿತ ಮತ್ತು ಕಾವೇರಿ ನದಿ ಉಕ್ಕಿ ಹರಿದು ಪ್ರವಾಹ ಉಂಟಾಗಿದ್ದು ಜನರ ಮನಸ್ಸಿನಲ್ಲಿ ಇನ್ನೂ ಅಚ್ಚಳಿಯದಂತೆ ಉಳಿದಿದೆ. ಆ ವೇಳೆ ಕಾವೇರಿ ನದಿಯ ದಂಡೆಯಲ್ಲಿನ ಗ್ರಾಮಗಳು ಮುಳುಗಡೆಯಾಗಿ ನೂರಾರು ಮನೆಗಳು ನೆಲಸಮವಾಗಿದ್ದವು. ಅದರಲ್ಲಿ ಕುಶಾಲನಗರ ತಾಲ್ಲೂಕಿನ ಬರಡಿ, ನಲ್ವತೇಕ್ರೆ ಪ್ರದೇಶಗಳ 200 ಕ್ಕೂ ಹೆಚ್ಚು ಕುಟುಂಬಗಳ ಮನೆಗಳು ನೆಲಸಮವಾಗಿದ್ದವು. ಅಂದು ಮನೆ ಕಳೆದುಕೊಂಡ ಕುಟುಂಬಗಳು ಇಂದು ಕೂಡ ಮನೆಗಳನ್ನು ಕಳೆದುಕೊಂಡ ಸ್ಥಳದಲ್ಲಿಯೇ ಮತ್ತೆ ಅದೇ ನದಿ ತಟದಲ್ಲಿ ಗುಡಿಸಲು ಕಟ್ಟಿಕೊಂಡು ನರಕಯಾತನೆಯ ಬದುಕು ದೂಡುತ್ತಿವೆ.
ಪ್ಲಾಸ್ಟಿಕ್ ಮತ್ತು ಬಿದಿರಿನ ಬಡಿಗೆಗಳಿಂದ ಶೆಡ್ ನಿರ್ಮಿಸಿಕೊಂಡು ಅದರಲ್ಲಿ ಬದುಕು ದೂಡುತ್ತಿವೆ. ಮನೆ ಕಳೆದುಕೊಂಡು ಐದು ವರ್ಷಗಳೇ ಕಳೆಯುತ್ತಿವೆ. ಅಂದಿನಿಂದ ಇದುವರೆಗೆ ನಿವೇಶನ ನೀಡುವುದಾಗಿ ಹೇಳಿದ್ದ ಸರ್ಕಾರಗಳು ನಿರಾಶ್ರಿತರನ್ನು ಸಂಪೂರ್ಣ ಮರೆತ್ತಿವೆ. ಇದೀಗ ಈ ಬಾರಿಯೂ ಮತ್ತೆ ಪ್ರವಾಹ ಎದುರಾಗುವ ಆತಂಕವಿದ್ದು ಜನರು ಭಯದಲ್ಲಿ ಬದುಕು ದೂಡುವಂತಾಗಿದೆ. ಪ್ರವಾಹದಲ್ಲಿ ಬದುಕು ಕಳೆದುಕೊಂಡಿದ್ದ ಸಂತ್ರಸ್ಥರನ್ನು ಅಂದು ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಭೇಟಿಯಾಗಿ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಸರ್ಕಾರದ ಮೇಲೆ ಒತ್ತಡ ತಂದು ಆದಷ್ಟು ಶೀಘ್ರವೇ ನಿವೇಶನ ಹಾಗೂ ಪರಿಹಾರ ಕೊಡಿಸುವುದಾಗಿ ಹೇಳಿದ್ದರು.
ಪೆನ್‌ಡ್ರೈವ್ ಕೇಸನ್ನು ಗೃಹಸಚಿವರು ಲಘುವಾಗಿ ಪರಿಗಣಿಸಿದ್ದಾರೆ: ಈಶ್ವರಪ್ಪ
ಜೊತೆಗೆ ಅಂದು ನಿರಾಶ್ರಿತರು ತಮಗೆ ನಿವೇಶನ ಹಾಗೂ ಶಾಶ್ವತ ಪರಿಹಾರ ಬೇಕೆಂದು ನಿರಾಶ್ರಿತ ಕೇಂದ್ರದಲ್ಲಿಯೇ ಮೂರು ತಿಂಗಳ ಕಾಲ ನಿರಂತರ ಹೋರಾಟ ನಡೆಸಿದ್ದರು. ಕೊನೆಗೂ ನಿರಾಶ್ರಿತರ ಹೋರಾಟಕ್ಕೆ ಮಣಿದಿದ್ದ ಕೊಡಗು ಜಿಲ್ಲಾಡಳಿತ ಮತ್ತು ಸರ್ಕಾರ ವಾಲ್ನೂರು ಪಂಚಾಯಿತಿ ವ್ಯಾಪ್ತಿಯ ಅಬ್ಯತ್ ಮಂಗಲದಲ್ಲಿ ನಿವೇಶನಕ್ಕಾಗಿ ಜಾಗ ಗುರುತ್ತಿಸಿತ್ತು. ಆದರೆ ಅದನ್ನು ಬಡಾವಣೆಯಾಗಿ ಪರಿವರ್ತಿಸಿ ಮೂಲಸೌಲಭ್ಯ ಕಲ್ಪಿಸಿ ಸಂತ್ರಸ್ಥರಿಗೆ ಹಂಚಿಕೆ ಮಾಡುವುದರಲ್ಲಿ ನಿರ್ಲಕ್ಷ್ಯ ವಹಿಸಿದೆ. ಪ್ಲಾಸ್ಟಿಕ್ ಟಾರ್ಪಲ್ ಗಳಿಂದಲೇ ನಿರ್ಮಿಸಿದ ಶೆಡ್ ಗಳಲ್ಲಿ ಗಾಳಿ, ಮಳೆ, ಬಿಸಿಲಿನಲ್ಲಿ ಬದುಕು ದೂಡುತ್ತಿದ್ದಾರೆ.
ಪ್ರತೀ ವರ್ಷ ಮಳೆಗಾಲ ಬಂತೆಂದರೆ ಜೀವವನ್ನು ಕೈಯಲ್ಲಿ ಹಿಡಿದು ಬದುಕು ಕಳೆಯಬೇಕಾಗಿದೆ. ಅದರಲ್ಲೂ ಈ ಬಾರಿ ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಹೇಳಿರುವಂತೆ ಕೊಡಗು ಜಿಲ್ಲೆಯಲ್ಲಿ ಶೇ 104 ಪರ್ಸೆಂಟ್ ಮಳೆಯಾಗುತ್ತದೆ ಎಂದು ವರದಿ ನೀಡಿದೆ. ಜೊತೆಗೆ 100 ಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಬಹುದು ಎಂದು ಕೊಡಗು ಜಿಲ್ಲಾಡಳಿತ ಕೂಡ ಅಂದಾಜಿಸಿದೆ. ಇದೆಲ್ಲವೂ ಈಗಾಗಲೇ ಮನೆಮಠಗಳನ್ನು ಕಳೆದುಕೊಂಡು ನದಿ ತಟಗಳಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಿರುವ ನಿರಾಶ್ರಿತರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ಪ್ರವಾಹ ಪೀಡಿತರಾಗಿದ್ದ ನಮ್ಮನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದರು.
ಮುಸಲ್ಮಾನರ ತುಷ್ಟೀಕರಣಕ್ಕೆ ಮುಂದಾದ ಕಾಂಗ್ರೆಸ್ ಸರ್ಕಾರ: ವಿಜಯೇಂದ್ರ ಆರೋಪ
ಈಗ ಅವರೇ ಸಿಎಂ ಆಗಿದ್ದು, ನಮಗೆ ನಿವೇಶನ ಕೊಡಬಹುದಲ್ಲವೇ.? ಆದರೆ ಹಿಂದೆ ಇದ್ದ ಬಿಜೆಪಿ ಸರ್ಕಾರಕ್ಕಾಗಲಿ, ಇಂದು ಇರುವ ಕಾಂಗ್ರೆಸ್ ಸರ್ಕಾರಕ್ಕಾಗಲಿ ಬಡವರ ಮೇಲೆ, ಸಂತ್ರಸ್ಥರ ಮೇಲೆ ಸ್ವಲ್ಪವಾದರೂ ಕರುಣೆ ಇಲ್ಲ ಎಂದು ಸಂತ್ರಸ್ಥರು, ಸಂತ್ರಸ್ಥರ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಕೊಡಗಿನಲ್ಲಿ ಐದು ವರ್ಷಗಳ ಹಿಂದೆ ಎದುರಾಗಿದ್ದ ಪ್ರವಾಹದಲ್ಲಿ ಬದುಕು ಕಳೆದುಕೊಂಡಿರುವ ಸಂತ್ರಸ್ಥರಿಗೆ ಇಂದಿಗೂ ನಿವೇಶನ ಹಂಚಿ ಪರಿಹಾರ ನೀಡದೇ ಇರುವುದು ಒಂದೆಡೆಯಾದರೆ ಮತ್ತೊಂದೆಡೆ ಈ ಬಾರಿಯೂ ಪ್ರವಾಹ ಎದುರಾಗಲಿದೆ ಎನ್ನುವುದು ಸಂತ್ರಸ್ಥರನ್ನು ಮತ್ತಷ್ಟು ಆತಂಕ್ಕೆ ದೂಡಿದೆ.