* ಅವಧಿ ಮುಗಿದು ಎರಡೂವರೆ ವರ್ಷದ ಬಳಿಕ ಪಾಲಿಕೆಗೆ ಚುನಾವಣೆ* ರಾಜಕೀಯ ಪಕ್ಷಗಳಲ್ಲಿ ಗರಿಗೆದರಿದ ಚಟುವಟಿಕೆ* ಟಿಕೆಟ್‌ಗಾಗಿ ನಾಯಕರ ದುಂಬಾಲು ಬಿದ್ದ ಆಕಾಂಕ್ಷಿಗಳು
ಶಿವಾನಂದ ಗೊಂಬಿ
ಹುಬ್ಬಳ್ಳಿ(ಆ.12): ಅವಧಿ ಮುಗಿದು ಎರಡೂವರೆ ವರ್ಷದ ಬಳಿಕ ಅಂತೂ, ಇಂತೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಚುನಾವಣೆ ಮುಹೂರ್ತ ನಿಗದಿಯಾಗಿದೆ!
ಇದೇ ಸೆ. 13ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಘೋಷಿಸಿದೆ. ಸದ್ಯ ಕೊರೋನಾ ಮೂರನೇ ಅಲೆ ಅಷ್ಟು ಇಷ್ಟು ತೊಂದರೆ ಕೊಡುತ್ತಿದೆ. ಹೆಚ್ಚು ತೊಂದರೆ ಕೊಡಲಿಕ್ಕಿಲ್ಲ ಎನ್ನುವುದು ಖಚಿತವಾದರೆ ಸರ್ಕಾರ, ನ್ಯಾಯಾಲಯ ಈ ನಿಗದಿತ ದಿನಾಂಕದಂದು ಚುನಾವಣೆ ನಡೆಸಲು ಒಪ್ಪಿಗೆ ಸೂಚಿಸಬಹುದು. ಇದು ನಿಜಕ್ಕೂ ಜಿಲ್ಲಾಡಳಿತಕ್ಕೆ ಸವಾಲಾಗಿದೆ.
2019ರ ಮಾರ್ಚ್ 6ರಿಂದ ಪಾಲಿಕೆಯಲ್ಲಿ ಚುನಾಯಿತ ಆಡಳಿತ ಮಂಡಳಿಯೇ ಇಲ್ಲ. ವಾರ್ಡ್ ಮರುವಿಂಗಡಣೆ, ವಾರ್ಡ್ ಮೀಸಲಾತಿ ಗೊಂದಲ, ಹೈಕೋರ್ಟ್ ಮೊರೆ, ಕೋವಿಡ್ ಕಾರಣ ಸೇರಿದಂತೆ ವಿವಿಧ ಕಾರಣಗಳಿಂದ ಈ ವರೆಗೆ ಚುನಾವಣೆ ನಡೆಯಲಿಲ್ಲ. ಇದೀಗ ಹೈಕೋರ್ಟ್ ಸೂಚನೆಯಂತೆ ಚುನಾವಣೆ ಆಯೋಗ ಪಾಲಿಕೆಗೆ ಚುನಾವಣೆ ದಿನಾಂಕ ಘೋಷಿಸಿದ್ದು ಸೆ. 3ರಂದು ಮತದಾನ, ಸೆ. 6ರಂದು ಮತ ಎಣಕೆ ಕಾರ್ಯ ನಡೆಯಲಿದೆ. 67 ವಾರ್ಡ್‌ಗಳಿಂದ 82 ವಾರ್ಡ್‌ಯಾಗಿದ್ದು, ಈ ಎಲ್ಲ ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ.
ಸಮರ್ಥ ನಾಯಕರಿಲ್ಲದೇ ಸೊರಗಿದ ಕಾಂಗ್ರೆಸ್..!
ಆಕಾಂಕ್ಷಿಗಳ ಆಟ:
ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಇತ್ತ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ಟಿಕೆಟ್‌ಗಾಗಿ ಆಕಾಂಕ್ಷಿಗಳು ತಮ್ಮ ಮುಖಂಡರ ದುಂಬಾಲು ಬೀಳುತ್ತಿದ್ದಾರೆ. ಬಿಜೆಪಿ ಈಗಾಗಲೇ ಐದಾರು ಬಾರಿ ಸಭೆ ನಡೆಸಿದ್ದು ಪೇಜ್ ಪ್ರಮುಖರು, ಶಕ್ತಿಕೇಂದ್ರ, ಮಹಾಶಕ್ತಿಕೇಂದ್ರ, ಪಂಚರತ್ನ ಕಮಿಟಿ ರಚಿಸಿಕೊಂಡು ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲು ಸಿದ್ಧತೆ ಮಾಡಿಕೊಂಡಿದೆ. ಪ್ರತಿ ವಾರ್ಡ್‌ಗೆ ಐದಾರು ಟಿಕೆಟ್ ಆಕಾಂಕ್ಷಿಗಳಿದ್ದು ಯಾರಿಗೆ ಮನ್ನಣೆ ಸಿಗಲಿದೆ ಎಂಬುದು ಕಾದುನೋಡಬೇಕಿದೆ.
ಟಿಕೆಟ್‌ಗಾಗಿ ಪೈಪೋಟಿ:
ಕಾಂಗ್ರೆಸ್ ಸಹ ಪಾಲಿಕೆ ಚುನಾವಣೆಯಲ್ಲಿ ಈ ಬಾರಿ ಅಧಿಕಾರಕ್ಕೇರಬೇಕು ಎಂದು ಈಗಾಗಲೇ ಹಲವು ಬಾರಿ ಸಭೆ ನಡೆಸಿ ಪೂರ್ವ ಸಿದ್ಧತೆ ಮಾಡಿಕೊಂಡಿದೆ. ಇಲ್ಲೂ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ. ಒಂದೊಂದು ವಾರ್ಡ್‌ಗೆ ಮೂರ್ನಾಲ್ಕು ಜನರು ಆಕಾಂಕ್ಷಿಗಳಿದ್ದು ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಬೇಕು ಎಂದು ಮುಖಂಡರು ಪ್ರಯತ್ನಿಸುತ್ತಿದ್ದಾರೆ.
ಗೆಲ್ಲುವ ಕುದುರೆಗೆ ಹುಡುಕಾಟ:
ಜೆಡಿಎಸ್ ಮಹಾನಗರ ಜಿಲ್ಲಾಧ್ಯಕ್ಷರ ಆಯ್ಕೆ ಇತ್ತೀಚೆಗೆ ನಡೆಸಿದೆ. ಇಲ್ಲಿ ಆಕಾಂಕ್ಷಿಗಳ ಪೈಪೋಟಿ ಕಡಿಮೆ ಇದ್ದರೂ ಗೆಲ್ಲುವ ಕುದುರೆಗಳ ಹುಡುಕಾಟ ನಡೆಸಿದೆ. ಹೊರಗಿನವರಿಗೆ ಟಿಕೆಟ್ ನೀಡುವುದಾಗಿ ಜೆಡಿಎಸ್ ಘೋಷಿಸಿದೆ. ಇತ್ತ ದೆಹಲಿ ಹೊಸ ಹೊಸ ತಂತ್ರಗಾರಿಕೆ ಅನುಸರಿಸಿ ಅಧಿಕಾರದ ಗದ್ದುಗೆ ಏರಿರುವ ಆಮ್ ಆದ್ಮಿ ಹಾಗೂ ಓವೈಸಿಯ ಎಐಎಂಐಎಂ ಕೂಡ ಮೊದಲ ಬಾರಿಗೆ ಅದೃಷ್ಟಪರೀಕ್ಷೆಗೆ ಇಳಿಯಲು ಸನ್ನದ್ಧವಾಗಿವೆ. ಈ ಎರಡು ಪಕ್ಷಗಳು ಪಕ್ಷ ಸಂಘಟನೆಯಲ್ಲಿ ತೊಡಗಿದ್ದು ಪ್ರಚಾರ ಕಾರ್ಯವನ್ನು ಆರಂಭಿಸಿವೆ. ಪಕ್ಷಗಳು ತಮ್ಮ ಅಭ್ಯರ್ಥಿಗಳು ಪಟ್ಟಿ ಅಂತಿಮಗೊಳಿಸಿ ಬಿಡುಗಡೆ ಮಾಡಿದ ಬಳಿಕ ಮತ್ತಷ್ಟು ಚುನಾವಣಾ ಕಾವು ರಂಗು ಪಡೆಯಲಿದೆ.
ಜಿಲ್ಲಾಡಳಿತಕ್ಕೆ ಸವಾಲು
ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಸಹಾಯಕ ಚುನಾವಣಾಧಿಕಾರಿಗಳ ನೇಮಕ, ಇವಿಎಂಗಳು ಎಷ್ಟು ಬೇಕು, ಅವು ಸುಸಜ್ಜಿತವಾಗಿವೆಯೇ? ಎಷ್ಟು ಮತಗಟ್ಟೆ ತೆರೆಯಬೇಕು ಎಂಬ ಕುರಿತು ಪರಿಶೀಲನೆ ನಡೆಸಿ ಚುನಾವಣಾ ಆಯೋಗಕ್ಕೆ ವರದಿಯನ್ನೂ ಸಲ್ಲಿಸಿದೆ. ಆದರೆ, ಕೊರೋನಾ 3ನೇ ಅಲೆಯ ಸುಳಿವು ಸಣ್ಣದಾಗಿ ಶುರುವಾಗಿದೆ. ಗಡಿ ಜಿಲ್ಲೆಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಇದು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸದ್ಯ ಧಾರವಾಡ ಜಿಲ್ಲೆಯಲ್ಲಿ ಕೊರೋನಾ ಒಂದಂಕಿಗೆ ಇಳಿದಿದ್ದರೂ ಆತಂಕ ಮಾತ್ರ ದೂರವಾಗಿಲ್ಲ. ರಾತ್ರಿ 9 ಗಂಟೆಗೆ ಅಂಗಡಿ-ಮುಂಗಟ್ಟುಗಳೆಲ್ಲ ಬಂದ್ ಮಾಡಲಾಗುತ್ತಿದೆ. ಜಿಲ್ಲಾಡಳಿತ ಕೊರೋನಾ ನಿಯಂತ್ರಿಸುವ ಜತೆಗೆ ಯಾವ ರೀತಿ ಚುನಾವಣೆ ನಡೆಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಪಾಲಿಕೆ ಚುನಾವಣೆಗೆ ಬಿಜೆಪಿ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಒಂದೊಂದು ವಾರ್ಡ್‌ಗೆ ಐದಾರು ಜನ ಆಕಾಂಕ್ಷಿಗಳಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿಗಳನ್ನು ಘೋಷಿಸಲಿದ್ದೇವೆ. ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುತ್ತೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ತಿಳಿಸಿದ್ದಾರೆ.
ಇನ್ನೆರಡು ದಿನಗಳಲ್ಲಿ ಕಾಂಗ್ರೆಸ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗುವುದು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ. ಎಲ್ಲೂ ಭಿನ್ನಾಭಿಪ್ರಾಯ, ಭಿನ್ನಮತಕ್ಕೆ ಅವಕಾಶ ಕೊಡುವುದಿಲ್ಲ. ಹೆಚ್ಚಿನ ಸ್ಥಾನದಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುವುದು ಖಚಿತ ಎಂದು ಕಾಂಗ್ರೆಸ್ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರು ಹೇಳಿದ್ದಾರೆ.
ಜೆಡಿಎಸ್ 82 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಅದಕ್ಕಾಗಿ ತಯಾರಿ ನಡೆಸಿದೆ. ಕೆಲ ವೇಳೆ ಉತ್ತಮ ಅಭ್ಯರ್ಥಿಗಳು ಸಿಕ್ಕರೆ ಹೊರಗಿನವರಿಗೂ ಟಿಕೆಟ್ ನೀಡುತ್ತೇವೆ. ಈ ಸಲ ಪಾಲಿಕೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಜೆಡಿಎಸ್ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ತಿಳಿಸಿದ್ದಾರೆ.
