ಹಾಸನ (ಸೆ.14): ಹಾಸನದಲ್ಲಿ ಕೆಲ ಅಧಿಕಾರಿಗಳು ರಾಜಕೀಯ ಒತ್ತಡದಿಂದ ಕಾನೂನು ಬಾಹಿರ ಕೆಲಸ ಮಾಡುತ್ತಿದ್ದಾರೆ. ಕಂದಾಯ ಇಲಾಖೆ, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತ್ ಸೇರಿ ಹಲವು ಕಡೆ ಈ ರೀತಿಯ ಕೆಲಸಗಳಾಗುತ್ತಿದೆ ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಹೇಳಿದ್ದಾರೆ. 

ಹಾಸನದಲ್ಲಿ ಮಾತನಾಡಿದ ಎಚ್.ಡಿ.ರೇವಣ್ಣ, ಜಿಲ್ಲೆಯಲ್ಲಿ ಮುಂದೆ ಯಾವುದೇ ಸಮಸ್ಯೆಯಾದರೂ ಅಧಿಕಾರಿಗಳೇ ಹೊಣೆಯಾಗುತ್ತಾರೆ. ಸಮಯ ಬಂದಾಗ ಹೇಗೆ ಕಾನೂನು ಬಾಹಿರ ಕಾರ್ಯಗಳಾಗುತ್ತಿವೆ ಎನ್ನುವುದನ್ನು ಹೇಳುವೆ ಎಂದಿದ್ದಾರೆ.

 ನೀವು ಮುಂದೆ ಅನುಭವಿಸೋದಕ್ಕೆ ರೆಡಿ ಇದ್ದರೆ ಇದೇ ರೀತಿ ನಿಮ್ಮ ಕೆಲಸಗಳನ್ನು ಹೀಗೆ ಮುಂದುವರೆಸಿ. ಒಬ್ಬ ಜನಪ್ರತಿನಿಧಿಯಾಗಿರೋ ನನಗೆ ಎಲ್ಲಾ ಗೊತ್ತಾಗಲಿದೆ ಎಂದರು.

ಎಚ್.ಡಿ.ರೇವಣ್ಣರ ಮಾತು ಸಲಹೆ ಎಂದು ತೆಗೆದುಕೊಳ್ಳುವ : ಬಿಜೆಪಿ ಶಾಸಕ ...

 ಎಸ್ ಎಲ್ ಒ ಆಫೀಸ್ ನಲ್ಲಿ ದಂಧೆ ನಡೆಯುತ್ತಿದೆ. ಈ ಸರ್ಕಾರ ಬಂದ ಮೇಲೆ ಇಲಾಖೆಗಳಲ್ಲಿ ಪರ್ಸೆಂಟ್ ಶುರುವಾಗಿದೆ . ಇಲಾಖೆಯ ಅಧಿಕಾರಿಗಳು ನಮ್ಮ ಹೇಸರೇಳಿ ದುಡ್ಡು ಪಡೆಯಬೇಡಿ. ಕಾನೂನು ಹೇಗಿದೆಯೋ ಹಾಗೆ ಕೆಲಸ ಮಾಡಿ ಎಂದು ಹರಿಹಾಯ್ದರು. 

ಇನ್ನು ಹಾಸನ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಗಳ ನಿಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದು, ಇಬ್ಬರು ಪೊಲೀಸ್ ಅಧಿಕಾರಿಗಳ ಮಾತುಕತೆ ಆಡಿಯೋ ಬಗ್ಗೆ ತನಿಖೆ ಆಗಬೇಕು. ಈ ಬಗ್ಗೆ ವಿಧಾನ ಸಭೆ ಅಧಿವೇಶನದಲ್ಲಿ ಮಾತನಾಡುತ್ತೇನೆ. ವರ್ಗಾವಣೆ ದಂಧೆ ನಡೆಯುತ್ತಿದ್ದು ಈ ಬಗ್ಗೆಯೂ ಸದನದಲ್ಲಿ ಪ್ರಸ್ತಾಪ ಮಾಡುತ್ತೇನೆ. ಜಿಲ್ಲೆಯಲ್ಲಿ ಆಡಿಯೋ ವೈರಲ್ ಆದ ಬಗ್ಗೆ ಪ್ರಸ್ತಾಪಿಸಿದರು.   

ಮಾಜಿ ಸಿಎಂ ಹಾಲಿ ಸಿಎಂ ಭೇಟಿ ಪ್ರಸ್ತಾಪ

ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಹಾಲಿ ಸಿಎಂ ಯಡಿಯೂರಪ್ಪ ಭೇಟಿಯಾದ ವಿಚಾರದ ಬಗ್ಗೆ ಮಾತನಾಡಿದ ಎಚ್.ಡಿ.ರೇವಣ್ಣ. ನಮ್ಮ ಪಕ್ಷದ ಶಾಸಕರ ಸಹಕಾರ ಕೋರಿ ಭೇಟಿ ಮಾಡಿದ್ದಾರೆ. ಕ್ಷೇತ್ರದ ಕೆಲಸದ ಬಗ್ಗೆ ಸಿಎಂ ಭೇಟಿಯಾದರೆ ತಪ್ಪೇನಿದೆ. ಸಿಎಂ ಎಂದರೆ ಅವರೇನು ಒಂದು ಪಕ್ಷದ ಸಿಎಂ ಅಲ್ಲ ಎಂದು ರೇವಣ್ಣ ಹೇಳಿದರು.