ಹಾಸನ [ಸೆ.18]: ರಾಜ್ಯದಲ್ಲಿ ತನ್ನದೇ ಆದ ಅಸ್ತಿತ್ವ ಉಳಿಸಿಕೊಂಡಿರುವ ಜೆಡಿಎಸ್‌ನ್ನು ಮುಗಿಸಲು ರಾಷ್ಟ್ರೀಯ ಪಕ್ಷಗಳು ಒಳ ಸಂಚು ಮಾಡುತ್ತಿವೆ. ಇದು ಯಾವುದೇ ಕಾರಣಕ್ಕೂ ಯಶಸ್ವಿಯಾಗಲ್ಲ. ಅದೊಂದು ಕನಸು ಮತ್ತು ಭ್ರಮೆಯಷ್ಟೇ ಎಂದು ಜೆಡಿಎಸ್‌ ಮುಖಂಡ, ಮಾಜಿ ಸಚಿವ ಎಚ್‌.ಡಿ. ರೇವಣ್ಣ ಕಿಡಿಕಾರಿದರು.

ಕೇವಲ ಅಪಪ್ರಚಾರದ ಮೂಲಕವೇ ಜೆಡಿಎಸ್‌ ವರ್ಚಸ್ಸನ್ನು ತಗ್ಗಿಸಲು ಸಾಧ್ಯವಿಲ್ಲ. ಪಕ್ಷದಲ್ಲಿ ಯಾವ ತಳಮಳವೂ ಇಲ್ಲ. ಆದರೆ, ರಾಷ್ಟ್ರೀಯ ಪಕ್ಷಗಳು ಜೆಡಿಎಸ್‌ ಮುಗಿಸಲು ತೆರೆಮರೆಯಲ್ಲಿ ವಾಮಮಾರ್ಗ ಅನುಸರಿಸುತ್ತಿವೆ. ಇವೆಲ್ಲಾ ನಡೆಯಲ್ಲ ಎಂದು  ಸುದ್ದಿಗೋಷ್ಠಿಯಲ್ಲಿ ಅವರು ಟೀಕಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಾಜಿ ಸಿಎಂ ಕುಮಾರಸ್ವಾಮಿ ಏಕೆ ಡಿಕೆಶಿ ವಿರುದ್ಧ ಮಾತನಾಡುತ್ತಾರೆ. ಅವರ ಮನೆಗೆ ಹೋಗಿ ತಾಯಿ, ಪತ್ನಿಯನ್ನು ಮಾತನಾಡಿಸಿ ಸಮಾಧಾನ ಹೇಳಿದ್ದಾರೆ. ಕೆಲವರು ಹಗಲು ಹೊತ್ತು ಸಿದ್ದರಾಮಯ್ಯ ಮತ್ತು ರಾತ್ರಿ ಹೊತ್ತು ಯಡಿಯೂರಪ್ಪ ಮನೆಯ ಬಾಗಿಲು ತಟ್ಟುವ ವ್ಯಕ್ತಿಗಳು ಅಪಪ್ರಚಾರ ಮಾಡುತ್ತವೆ. ಇಂತವರನ್ನು ಹಿಂದಿನ ಚುನಾವಣೆಯಲ್ಲಿ ಜನ ಡಸ್ಟ್‌ ಬಿನ್‌ (ಕಸದಬುಟ್ಟಿ)ಗೆ ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕೆಲವರು ಎಲ್ಲಿ, ಯಾರ ಮನೆಯಲ್ಲಿ ಬೀಗರ ಊಟ ಇದೆ ಎಂದು ಹುಡುಕಿಕೊಂಡು ಓಡಾಡುತ್ತಿದ್ದಾರೆ. ಇವೆಲ್ಲಾ ಎಲ್ಲಿ ಮೇವು ಸಿಗುತ್ತದೋ ಅಲ್ಲಿಗೆ ಹುಡುಕಿ ಕೊಂಡು ಹೋಗುತ್ತವೆ. ಇಂತವರಿಂದ ಕುಮಾರಸ್ವಾಮಿ ಕಲಿಯಬೇಕಿಲ್ಲ. ಇವೆಲ್ಲವೂ ಎಲ್ಲಿದ್ದವು, ಇವೆಲ್ಲವನ್ನೂ ನಾನು ಹತ್ತಿರಕ್ಕೆ ಸೇರಿಸಲ್ಲ ಎಂದು ಪರೋಕ್ಷವಾಗಿ ಚಲುವರಾಯಸ್ವಾಮಿ, ನಾರಾಯಣಗೌಡರ ವಿರುದ್ಧ ಕಿಡಿಕಾರಿದರು.