ಕಲಬುರಗಿ: ಪಂಚರತ್ನ ಯಾತ್ರೆ ವೇಳೆ ತೊಗರಿ ರೈತರ ಪರ ಎಚ್‌ಡಿಕೆ ಪ್ರತಿಭಟನೆ
ಪಂಚರತ್ನ ರಥ ಯಾತ್ರೆ ವೇಳೆ ಹೊನ್ನಕಿರಣಗಿ, ತಿಳಗೂಳ ಬಳಿ ರೈತರು, ರೈತ ಮಹಿಳೆಯರು ತೊಗರಿ ಹಾಳಾಗಿದ್ದರಿಂದ ತಾವು ಅದೆಷ್ಟು ತೊಂದರೆಗೆ ಈಡಾಗಿದ್ದೇವೆ ಎಂಬುದನ್ನು ತಿಳಿಸಿ, ಕಣ್ಣೀರು ಹಾಕಿದರು. ಅವರ ಅಳು ಕೇಳಿ ಮರುಕವಾಯ್ತು. ಸರ್ಕಾರ ರೈತರನ್ನು ಅಲಕ್ಷಿಸುತ್ತಿದೆ. ತೊಗರಿ ರೈತರು ತೊಂದರೆಯಲ್ಲಿದ್ದಾರೆ. ರೈತರ ನೆರವಿಗೆ ಬಿಜೆಪಿ ಸರ್ಕಾರ ಧಾವಿಸುತ್ತಿಲ್ಲ: ಕುಮಾರಸ್ವಾಮಿ
ಕಲಬುರಗಿ(ಜ.14): ಕಲಬುರಗಿ ಜಿಲ್ಲೆಯಲ್ಲಿ ನೆಟೆ ರೋಗಕ್ಕೆ ತೊಗರಿ ಬೆಳೆ ಸಂಪೂರ್ಣ ಹಾನಿಗೊಳಗಾಗಿದ್ದು, ರೈತರು ತೊಂದರೆಗೆ ಈಡಾಗಿದ್ದಾರೆ. ಆದರೂ, ರೈತರಿಗೆ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಭಾರೀ ಪ್ರತಿಭಟನೆ ನಡೆಸಲಾಯಿತು.
ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರದ ಅಂಗವಾಗಿ ಕುಮಾರಸ್ವಾಮಿ ಕಲಬುರಗಿ ದಕ್ಷಿಣ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆ ನಡೆಸುತ್ತಿದ್ದಾರೆ. ಯಾತ್ರೆ ಮಧ್ಯೆ, ಶುಕ್ರವಾರ ಅವರು ರೈತರ ಪರ ಪ್ರತಿಭಟನೆ ನಡೆಸಿದರು. ಬೆಳಗ್ಗೆ ನಗರದ ಸರ್ದಾರ್ ಪಟೇಲ್ ವೃತ್ತದಿಂದ ಡಿಸಿ ಕಚೇರಿವರೆಗೂ ರಾರಯಲಿ ನಡೆಸಲಾಯಿತು. ಬಳಿಕ, ನೆಟೆ ರೋಗದಿಂದ ಹಾಳಾದ ತೊಗರಿ ದಂಟುಗಳ ರಾಶಿಯನ್ನೇ ತಂದಿದ್ದ ರೈತರ ಜೊತೆ ಸೇರಿ, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಅಧಿಕಾರಕ್ಕೆ ಬಂದ 24 ತಾಸಲ್ಲಿ ಬಂದರವಾಡ ಏತ ನೀರಾವರಿಗೆ ಚಾಲನೆ: ಕುಮಾರಸ್ವಾಮಿ
ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ಪಂಚರತ್ನ ರಥ ಯಾತ್ರೆ ವೇಳೆ ಹೊನ್ನಕಿರಣಗಿ, ತಿಳಗೂಳ ಬಳಿ ರೈತರು, ರೈತ ಮಹಿಳೆಯರು ತೊಗರಿ ಹಾಳಾಗಿದ್ದರಿಂದ ತಾವು ಅದೆಷ್ಟು ತೊಂದರೆಗೆ ಈಡಾಗಿದ್ದೇವೆ ಎಂಬುದನ್ನು ತಿಳಿಸಿ, ಕಣ್ಣೀರು ಹಾಕಿದರು. ಅವರ ಅಳು ಕೇಳಿ ಮರುಕವಾಯ್ತು. ಸರ್ಕಾರ ರೈತರನ್ನು ಅಲಕ್ಷಿಸುತ್ತಿದೆ. ತೊಗರಿ ರೈತರು ತೊಂದರೆಯಲ್ಲಿದ್ದಾರೆ. ರೈತರ ನೆರವಿಗೆ ಬಿಜೆಪಿ ಸರ್ಕಾರ ಧಾವಿಸುತ್ತಿಲ್ಲ. ಕಲಬುರಗಿ ಜಿಲ್ಲೆಯೊಂದರಲ್ಲಿಯೇ 7 ಮಂದಿ ರೈತರು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರು ಚಿಂತೆಯಲ್ಲಿದ್ದಾರೆ ಎಂದರು.
ಸಂಸಾರ ಸಾಗಿಸೋದು ಹೇಗೆಂಬ ಆತಂಕ ಅವರನ್ನು ಕಾಡುತ್ತಿದೆ. ಈ ಹಂತದಲ್ಲಿ ಅವರ ಕೈಗೆ ಪರಿಹಾರ ಹಣ ಬಂದಲ್ಲಿ ಅನುಕೂಲವಾಗುತ್ತದೆ. ಆಳುವವರು ಇದನ್ನೆಲ್ಲ ಗಮನಿಸೋದು ಬಿಟ್ಟು ಏನೇನೋ ಮಾಡುತ್ತಿದ್ದಾರೆ. ಬೆæಳಗಾವಿ ಅಧಿವೇಶನದಲ್ಲಿ ಬಂಡೆಪ್ಪ ಕಾಶೆಂಪೂರ್ ವಿಷಯ ಪ್ರಸ್ತಾಪ ಮಾಡಿದ್ರು. ಆದರೆ, ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಖಾಸಗಿ ಕಂಪನಿಗಳು ರೈತರ ಹಣ ಕೊಳ್ಳೆ ಹೊಡೆದಿವೆ. ಹೀಗಾಗಿ ಸಾಂಕೇತಿಕವಾಗಿ ರೈತರ ಪ್ರತಿಭಟನಾ ರಾರಯಲಿ ಮಾಡ್ತಿದ್ದೇವೆ. ರೈತರ ಶಾಪ ಒಳ್ಳೆಯದಲ್ಲ. ಇನ್ನು 3 ತಿಂಗಳಿನಲ್ಲಿ ರಾಜ್ಯದ ಜನ ಬಿಜೆಪಿಯನ್ನು ನಿರ್ಮೂಲನ ಮಾಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ಜೆಡಿಎಸ್ ಅಲ್ಪಸಂಖಾತ ಘಟಕದ ರಾಜ್ಯಾಧ್ಯಕ್ಷ ಉಸ್ತಾದ್ ನಾಸೀರ್ ಹುಸೇನ್, ಕೃಷ್ಣಾ ರೆಡ್ಡಿ ಸೇರಿದಂತೆ ನೂರಾರು ಕಾರ್ಯಕರ್ತರು, ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.