ಸಚಿವ ಮಾಧುಸ್ವಾಮಿ ವಿಕೃತ ಮನಸ್ಸಿನ ಮಂತ್ರಿ: ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ
ಕುಟುಂಬದ ಬಗ್ಗೆ ಮಾತನಾಡುವ ಕಾನೂನು ಸಚಿವ ಮಾಧುಸ್ವಾಮಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್
ಬಾಗಲಕೋಟೆ (ಜ.23): ಕುಟುಂಬದ ಬಗ್ಗೆ ಮಾತನಾಡುವ ಕಾನೂನು ಸಚಿವ ಮಾಧುಸ್ವಾಮಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಅವರು ಜಿಲ್ಲೆಯ ಗುಳೇದಗುಡ್ಡ ಪಟ್ಣಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಮಾಧುಸ್ವಾಮಿ ಅವರ ಕ್ಷೇತ್ರಕ್ಕೆ ನಾನು ಭೇಟಿ ಕೊಟ್ಟು ತಿಂಗಳ ಮೇಲಾಗಿದೆ. ಅವರ ಕ್ಷೇತ್ರದಲ್ಲಿ ನಮ್ಮ ಪಂಚರತ್ನ ರಥಯಾತ್ರೆ ಕಳೆದ ತಿಂಗಳು 11 ರಂದು ನಡೆದಿದೆ. ಒಂದು ತಿಂಗಳು ಆಗಿ ಹೋಗಿದೆ, ಅವರು ಈಗ ಆ ವಿಷಯ ಪ್ರಸ್ತಾಪ ಮಾಡಿದ್ದಾರೆ ಎಂದರು. ಮಾಧುಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಅವರು ಮಂತ್ರಿಗಳಲ್ಲವೇ? ಇವತ್ತು ಅಪ್ಪ-ಅಮ್ಮ-ಮಕ್ಕಳು- ಮೊಮ್ಮಕ್ಕಳು ಮನೆಯಲ್ಲಿರುವ ಹೆಣ್ಣು ಮಕ್ಕಳ ಹೆಸರು ಪ್ರಸ್ತಾಪಿಸಿದ್ದಾರೆ. ಅದೇನೋ ಲೂಟಿ ಹೊಡೆಯುತ್ತಿದ್ದಾರೆ, ಅದೆನೋ ದೋಚುತ್ತಿದ್ದಾರೆ ಎಂದು ಹೇಳಿದ್ದಾರೆ, ಯಾರನ್ನ ದೋಚಿದ್ದಾರೆ ಎಂದು ಪ್ರಶ್ನಿಸಿದರು.
ಮಾಧುಸ್ವಾಮಿ ಮೊನ್ನೆ ರೈತರು ಈಗ ಚೆನ್ನಾಗಿದ್ದಾರೆ, ರೈತರು ಸಂಪತಭರಿತರಾಗಿದ್ದಾರೆ ಎನ್ನುವ ಹೇಳಿಕೆ ನೀಡಿದ್ದಾರೆ. ಇಂತಹ ವಿಕೃತ ಮನಸಿನ ಮಂತ್ರಿ ಮಾಧುಸ್ವಾಮಿ. ನಾನು ಅವನಿಂದ ಸರ್ಟಿಪಿಕೆಟ್ ತಗೋಬೇಕಾ. ಇವರೆಲ್ಲ ವಿಕೃತ ಮನಸ್ಸಿನವರು, ನನಗೆ ಇವರಿಂದ ಸರ್ಟಿಫಿಕೇಟ್ ಅವಶ್ಯಕತೆ ಇಲ್ಲ. ನಾಡಿನ ಜನತೆ ತೀರ್ಮಾನ ಮಾಡ್ತಾರೆ ಯಾರ ದೋಚುತ್ತಿದ್ದಾರೆ ಎನ್ನುವುದನ್ನು ಎಂದರು.
ದೇವೆಗೌಡರು ಹೇಮಾವತಿ ಜಲಾಶಯ ಕಟ್ಟದಿದ್ದರೆ ಏನಾಗುತ್ತಿತ್ತು ಎಂದ ಎಚ್ಡಿಕೆ, ಜಲಾಶಯಕ್ಕಾಗಿ ದೇವೆಗೌಡರು ಹೋರಾಟ ಮಾಡದಿದ್ದರೆ ಇವರೆಲ್ಲಿಂದ ನೀರು ತರುತ್ತಿದ್ದರು. ತುಮಕೂರು ಜಿಲ್ಲೆಗೆ ನೀರು ಹರಿಯದೆ ಇದ್ದಾಗ, ನಾವು ಮೈತ್ರಿ ಸರ್ಕಾರದಲ್ಲಿದ್ದಾಗ. ಸುಮಾರು 700 ಕೂಟಿ ಹಣ ಬಿಡುಗಡೆ ಮಾಡಿ ಕಾಲುವೆ ರಿಪೇರಿ ಮಾಡಿಸಿದೆ. ಅದರ ಬಗ್ಗೆ ಸರ್ಕಾರದಲ್ಲಿ ದಾಖಲೆಗಳಿಲ್ವಾ, 700 ಕೋಟಿ ರೂ. ಅನುದಾನ ನೀಡಿದ್ದರಿಂದ ಇಂದು ಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿಯುತ್ತಿದೆ ಎಂದರು.
ನಮ್ಮ ಪಂಚರತ್ನ ರಥಯಾತ್ರೆಯಿಂದ ಅವರಿಗೆ ಭಯ ಶುರುವಾಗಿದೆ. ಸಚಿವ ಮಾಧುಸ್ವಾಮಿಗೆ ಭಯ ಶುರುವಾಗಿದೆ ಇದರಲ್ಲಿ ಸಂಶಯವೇ ಬೇಡಾ ಎಂದರು. ರಾಜ್ಯದಲ್ಲಿ ಕೆಟ್ಟ ಸರ್ಕಾರ ಬರಲು ಯಾರು ಕಾರಣರು ಎನ್ನುವುದನ್ನು ಕಾಂಗ್ರೆಸ್ಸಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಬಿಜೆಪಿ ಕಾಂಗ್ರೆಸ್ ಮೇಲೆ, ಕಾಂಗ್ರೆಸ್ ಮೇಲೆ ಬಿಜೆಪಿ ಆರೋಪ ಮಾಡುತ್ತಾರೆ. ಇವತ್ತು ಗ್ರಾಮೀಣ ಭಾಗದ ಜನರ, ರೈತರ ಪರಿಸ್ಥಿತಿ ಏನಾಗಿದೆ ಅಂತ ಇವರಿಗೆ ಗೊತ್ತಿಲ್ಲ. ಬೆಳೆಹಾನಿ ಅನುಭವಿಸಿ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕು. ಇಂತಹ ಪರಿಸ್ಥಿತಿ ಬಗ್ಗೆ ಇವರಿಗೆ ಕಾಳಜಿ ಇಲ್ಲ. ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತಾರೆ. ಭ್ರಷ್ಟಾಚಾರ ಕಾಂಗ್ರೆಸ್ಸನಲ್ಲಿ ಇರಲಿಲ್ವಾ ಎಂದು ಪ್ರಶ್ನಿಸಿದ ಅವರು ಭಾರತದಲ್ಲಿ ಅತಿ ಹೆಚ್ಚು ಬಡ ಕುಟುಂಬಗಳಿವೆ ಅಂತ ಸರ್ವೆ ಬಂದಿದೆ. ಅದರ ಬಗ್ಗೆ ಚಿಂತನೆ ಮಾಡಬೇಕಿದೆ ಎಂದರು.
ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ ಪತನ ವಿಷಯ ಪ್ರಸ್ತಾಪಿಸಿದ ಅವರು ಸರ್ಕಾರ ಪತನಕ್ಕೆ ಕಾರಣರಾರು, ಸರ್ಕಾರ ರಚನೆಯಾದ ಮೂರೇ ತಿಂಗಳಲ್ಲಿ ಧರ್ಮಸ್ಥಳ ಬಳಿಯ ವನದಲ್ಲಿ ಏನು ಮಾಡಿದರು ಎನ್ನುವುದು ರಾಜ್ಯಕ್ಕೆ ಗೊತ್ತಿದೆ. ಸರ್ಕಾರ ಒಂದು ವರ್ಷ ಆದ್ಮೇಲೆ ತೆಗಿತೀನಿ ಅಂತ ಹೇಳಿದವರಾರು, ನಾನಾ ಎಂದು ಪ್ರಶ್ನಿಸಿ, ಇದೆಲ್ಲಾ ಆಗುತ್ತೇ ಅಂತ ನನಗೆ ಗೊತ್ತಿತ್ತು ಎಂದರು.
ಪ್ರಧಾನಿ ಮೋದಿ ಎಲ್ಲ ಕ್ಷೇತ್ರಗಳಲ್ಲಿ ವಿಶ್ವಕ್ಕೆ ಮಾದರಿ: ಶಾಸಕ ರೇಣುಕಾಚಾರ್ಯ
ಬಿಜೆಪಿಯಿಂದ ಇಬ್ಬರು ಬಂದರ, ಕಾಂಗ್ರೆಸ್ಸಿನಿಂದ 10 ಜನ ಬರ್ತಿವಿ ಅಂತ ಕಾಂಗ್ರೆಸ್ಸಿನ ಹಿಂಬಾಲಕರು, ಪಟಾಲಂಗಳು ಚರ್ಚೆ ಮಾಡಿದ್ದು ನನಗೆ ಗೊತ್ತಿಲ್ಲವಾ ಎಂದರು. ಸರ್ಕಾರ ಇದ್ದದ್ದು, ಹೋಗಿದ್ದು, ಎಲ್ಲವೂ ಮುಗಿದು ಹೋದ ಅಧ್ಯಾಯ ಎಂದರು.
ರಾಜ್ಯದ ಇತಿಹಾಸದಲ್ಲೇ ದಾಖಲೆ ಸೃಷ್ಟಿಸಿದ ಶಿವಮೊಗ್ಗದ ಸೊರಬದಲ್ಲಿನ ತಹಶೀಲ್ದಾರ್
ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲುವು ಗ್ಯಾರಂಟಿ, ಇಂದೇ ಬರೆದಿಟ್ಟುಕೊಳ್ಳಿ. ಅಲ್ಲಿನ ಜನ ಈಗಲೇ ತೀರ್ಮಾನ ಮಾಡಿದ್ದಾರೆ. ಚುನಾವಣೆಯಲ್ಲಿ ನನ್ನ ಜೆಡಿಎಸ್ ಅಭ್ಯರ್ಥಿ ಗೆಲ್ಲೋದರಲ್ಲಿ ಯಾವುದೇ ಸಂಶಯ ಇಲ್ಲ. ನನಗೆ ಯಾರು ನಿಲ್ಲುತ್ತಾರೆ, ನಿಲ್ಲುವುದಿಲ್ಲ ಅನ್ನೋ ಪ್ರಶ್ನೆ ಇಲ್ಲ ಎಂದರು. ಈ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಹನಮಂತ ಮಾವಿನಮರದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.